Karnataka news paper

ಕಾನ್ಪುರದ ಸುಗಂಧ ದ್ರವ್ಯಗಳ ಉದ್ಯಮಿ ಮನೆಯಲ್ಲಿ ಹಣದ ಕಂತೆಗಳ ಪರ್ವತ : 160 ಕೋಟಿ ವಶಕ್ಕೆ


ಹೈಲೈಟ್ಸ್‌:

  • ಸುಗಂಧ ದ್ರವ್ಯಗಳ ಉದ್ಯಮಿ ಮನೆಯಲ್ಲಿ ಹಣದ ಕಂತೆಗಳ ಪರ್ವತ
  • ಆದಾಯ ತೆರಿಗೆ ಇಲಾಖೆಯಿಂದ 160 ಕೋಟಿ ರೂಪಾಯಿ ನಗದು ವಶ
  • ನೋಟಿನ ರಾಶಿ ಕಂಡು ಕಂಗಾಲಾದ ಆದಾಯ ತೆರಿಗೆ ಅಧಿಕಾರಿಗಳು

ಕಾನ್ಪುರ: ಉತ್ತರಪ್ರದೇಶದ ಕೈಗಾರಿಕಾ ರಾಜಧಾನಿ ಕಾನ್ಪುರದಲ್ಲಿ ಸುಗಂಧ ದ್ರವ್ಯಗಳ ಉದ್ಯಮಿ ಪಿಯೂಶ್‌ ಜೈನ್‌ ಅವರ ನಿವಾಸ ಮತ್ತು ಕಚೇರಿ ಮೇಲೆ ದಿಢೀರ್‌ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ 160 ಕೋಟಿ ರೂಪಾಯಿ ನಗದು ವಶ ಪಡಿಸಿಕೊಂಡಿದೆ. ಗುಜರಾತ್‌ನ ಜಿಎಸ್‌ಟಿ ಬೇಹುಗಾರಿಕೆ ಮಹಾ ನಿರ್ದೇಶನಾಲಯ ಮತ್ತು ಕೇಂದ್ರ ಆದಾಯ ತೆರಿಗೆ ಇಲಾಖೆ ಜಂಟಿಯಾಗಿ ನಡೆಸಿದ ದಾಳಿಯಲ್ಲಿಈ ಅಪಾರ ಮೊತ್ತದ ಅಕ್ರಮ ಹಣ ಪತ್ತೆಯಾಗಿದೆ.

ಉದ್ಯಮಿ ಪಿಯೂಶ್‌ ಜೈನ್‌ ನಡೆಸುತ್ತಿದ್ದ ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಹಲವು ತಿಂಗಳುಗಳಿಂದ ಶಂಕೆ ಇತ್ತು. ಇದಕ್ಕೆ ಪೂರಕವಾಗಿ ಗುಪ್ತಚರ ಮಾಹಿತಿಗಳೂ ಲಭಿಸಿದ್ದವು. ನಕಲಿ ಇನ್‌ವೈಸ್‌ ಸೃಷ್ಟಿಸುವ ಮೂಲಕ ತೆರಿಗೆ ವಂಚನೆ ಎಸಗುತ್ತಿದ್ದ ಪಾನ್‌ ಮಸಾಲಾ ಉತ್ಪಾದಕರು ಮತ್ತು ಸಾರಿಗೆ ಉದ್ಯಮಿಯೊಬ್ಬರ ನಿವಾಸಗಳ ಮೇಲೂ ಶುಕ್ರವಾರ ತೆರಿಗೆ ಇಲಾಖೆ ದಾಳಿ ನಡೆಸಿತು.

ನೋಟು ಕಂಡು ಕಂಗಾಲು!
ಪಿಯೂಶ್‌ ಜೈನ್‌ ನಿವಾಸಗಳ ಮೇಲೆ ಬೆಳಗ್ಗೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಅಲ್ಲಿ ಪತ್ತೆಯಾದ ನೋಟಿನ ರಾಶಿ ಕಂಡು ಕಂಗಾಲಾದರು. ಮನೆ ಒಳಗಡೆ ಇದ್ದ ಆಳೆತ್ತರದ ಎರಡು ಕಬೋರ್ಡ್‌ಗಳು ನೋಟಿನ ಕಂತೆಗಳಿಂದ ಭರ್ತಿಯಾಗಿದ್ದವು. ಕಂತೆಗಳನ್ನು ಪೇಪರ್‌ಗಳಲ್ಲಿ ಸುತ್ತಿ ಹಳದಿ ಬಣ್ಣದ ಬ್ಯಾಂಡ್‌ ಬಿಗಿಯಲಾಗಿತ್ತು.

ಬೆಂಗಳೂರು: ಹವಾಲ ಮೂಲಕ 70 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ

ಒಂದೊಂದೇ ಕಂತೆಗಳನ್ನು ಕೆಳಗಿಳಿಸಿ ಗುಡ್ಡೆ ಹಾಕಿದ ಅಧಿಕಾರಿಗಳಿಗೆ ಅವನ್ನು ಎಣಿಕೆ ಮಾಡುವುದು ಹೇಗೆ ಎನ್ನುವ ಚಿಂತೆ ಶುರುವಾಯಿತು. ಕೊನೆಗೆ ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿಯನ್ನು ಕರೆಸಿಕೊಂಡು ಎಣಿಕೆ ಆರಂಭಿಸಲಾಯಿತು. ನೋಟು ಎಣಿಸುವ ಮಷೀನ್‌ಗಳ ನೆರವನ್ನು ಕೂಡ ತೆರಿಗೆ ಇಲಾಖೆ ಪಡೆದಿದೆ. ಬೆಳಗ್ಗೆಯಿಂದಲೇ ಶುರುವಾದ ನೋಟು ಎಣಿಕೆ ಕಾರ್ಯ ತಡರಾತ್ರಿಯಾದರೂ ಮುಗಿದಿರಲಿಲ್ಲ.



Read more