Karnataka news paper

ಉದ್ಯಾನ ನಗರಿಯತ್ತ ಪುತ್ತೂರು ಹೆಜ್ಜೆ: ಸರಣಿ ಪ್ರಕಾರ ಪಾರ್ಕ್ ಅಭಿವೃದ್ಧಿಗೆ ನಗರಸಭೆ ಆದ್ಯತೆ!


ಹೈಲೈಟ್ಸ್‌:

  • ಪುತ್ತೂರಿನ 4 ಪ್ರಮುಖ ಪಾರ್ಕ್ ಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಕಾರ‍್ಯಗತದಲ್ಲಿದೆ
  • ಚಿಣ್ಣರ ಪಾರ್ಕ್ ಗೆ 25 ಲಕ್ಷ ರೂ. ವೆಚ್ಚದಲ್ಲಿ ಹೊಸ ರೂಪ
  • ಮಹಾಲಿಂಗೇಶ್ವರ ದೇವಳದ ನಾಗಸಾನಿಧ್ಯದ ಪಕ್ಕದಲ್ಲಿರುವ ಪಾರ್ಕ್9.28 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸುವ ಯೋಜನೆ ಮಂಜೂರು
  • ಸುಮಾರು 1 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿರುವ ಸಾಮೆತ್ತಡ್ಕ ಪಾರ್ಕ್ ಅಭಿವೃದ್ಧಿ ಯೋಜನೆ ಜಾರಿಯಲ್ಲಿದೆ
  • ನಗರಸಭೆ ವ್ಯಾಪ್ತಿಯ ನೆಲಪ್ಪಾಲುವಿನಲ್ಲಿರುವ ಪಾರ್ಕ್ ಅಭಿವೃದ್ಧಿಗೆ 25 ಲಕ್ಷ ರೂ. ಮಂಜೂರಾಗಿದೆ

ಸುಧಾಕರ ಸುವರ್ಣ ಪುತ್ತೂರು
ಪುತ್ತೂರು: ಮುಂದಿನ ಒಂದು ವರ್ಷದಲ್ಲಿ ಪುತ್ತೂರು ನಗರ ಉದ್ಯಾನಗಳ ನಗರವಾಗಿ ಕಂಗೊಳಿಸಲಿದೆಯೇ? ನಗರಸಭೆ ಆಡಳಿತದ ಹಾಲಿ ಯೋಜನೆಗಳನ್ನು ಗಮನಿಸಿದರೆ ನಗರದ ಉದ್ಯಾನಗಳೆಲ್ಲ ನಳನಳಿಸುವ ಮುನ್ಸೂಚನೆ ಇದೆ.

ಪುತ್ತೂರಿನ 4 ಪ್ರಮುಖ ಪಾರ್ಕ್ ಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಕಾರ‍್ಯಗತ ಹಂತದಲ್ಲಿದೆ. ನಗರದ ಹೃದಯ ಭಾಗದಲ್ಲಿರುವ ಚಿಣ್ಣರ ಪಾರ್ಕ್ ಗೆ ಹೊಸ ರೂಪ ಸಿಗುತ್ತಿದ್ದು, ಜನವರಿ 1ರಂದು ಹೊಸ ವರ್ಷಾಚರಣೆಯ ಸಂದರ್ಭ ನವೀಕೃತ ಪಾರ್ಕ್ ಉದ್ಘಾಟನೆಗೊಳ್ಳಲಿದೆ.

ಸುಮಾರು 35 ಸೆಂಟ್ಸ್‌ ವಿಸ್ತೀರ್ಣ ಹೊಂದಿರುವ ಚಿಣ್ಣರ ಪಾರ್ಕ್ ಮಕ್ಕಳಿಗಾಗಿಯೇ 13 ವರ್ಷಗಳ ಹಿಂದೆ ನಿರ್ಮಾಣಗೊಂಡ ಉದ್ಯಾನ. ನಿರ್ವಹಣೆಯ ಕೊರತೆಯಿಂದಾಗಿ ಕೆಲ ವರ್ಷಗಳ ಕಾಲ ಪಾರ್ಕ್ ತನ್ನ ಜೀವಂತಿಕೆ ಕಳೆದುಕೊಂಡು ಪೇಲವವಾಗಿತ್ತು. ಇದೀಗ ಈ ಪಾರ್ಕಿಗೆ 25 ಲಕ್ಷ ರೂ. ವೆಚ್ಚದಲ್ಲಿ ಹೊಸ ರೂಪ ನೀಡಲಾಗುತ್ತಿದೆ.

2019-2020ನೇ ಸಾಲಿನ 14ನೇ ಹಣಕಾಸು ನಿಧಿಯಲ್ಲಿ 10 ಲಕ್ಷ ರೂ. ಮತ್ತು 2020-21ನೇ ಸಾಲಿನ 15ನೇ ಹಣಕಾಸು ನಿಧಿಯಲ್ಲಿ 15 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಪ್ರಸ್ತುತ ಪಾರ್ಕ್ ಕಾಮಗಾರಿ ಪ್ರಗತಿಯಲ್ಲಿದೆ. ಇಡೀ ಉದ್ಯಾನದ ನೆಲಕ್ಕೆ ಹೊಸದಾಗಿ ಕೆಂಪು ಮಣ್ಣು ಹರಡಿ ಅದರ ಮೇಲೆ ಹುಲ್ಲಿನ ಲಾನ್‌ ನಿರ್ಮಿಸಲಾಗಿದೆ. ಆಯಕಟ್ಟಿನ ಜಾಗದಲ್ಲಿ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತಿದೆ. ಉದ್ಯಾನದಲ್ಲಿ 3 ಕಾರಂಜಿಗಳನ್ನು ಅಳವಡಿಸಲಾಗುತ್ತಿದೆ. ಉದ್ಯಾನದ ಆವರಣ ಗೋಡೆಗೆ ಬಣ್ಣ ಬಳಿದು, ಆಕರ್ಷಕ ದೀಪಾಲಂಕಾರ ಮಾಡಲಾಗುತ್ತದೆ. ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರಸ್ತುತ ಉದ್ಯಾನದಲ್ಲಿರುವ ಬಯಲು ರಂಗಮಂದಿರವನ್ನು ಒಂದಷ್ಟು ಸುಂದರಗೊಳಿಸಿ ಯಥಾಪ್ರಕಾರ ಉಳಿಸಿಕೊಳ್ಳಲಾಗುತ್ತದೆ. ರಾತ್ರಿ ಹೊತ್ತು ದೀಪ ಕಾರಂಜಿಯ ಸೊಬಗು ಇಲ್ಲಿ ಮೇಳವಿಸಲಿದೆ. ಈಗಾಗಲೇ ನಗರದ ಕೊಂಬೆಟ್ಟುವಿನಲ್ಲಿ ಅಟಲ್‌ ಪಾರ್ಕ್ ನಿರ್ಮಿಸಲಾಗಿದ್ದು, ಅದು ಜನಾಕರ್ಷಕವಾಗಿದೆ.
ಕಡಲ ನಗರಿಗೆ ‘ಪಾರ್ಕ್ ಸಿಟಿ’ ಲುಕ್‌..! ಮಂಗಳೂರಿನ 60 ವಾರ್ಡ್‌ಗಳಲ್ಲಿ 80 ಪಾರ್ಕ್ ನಿರ್ಮಾಣ
ನೆಲ್ಲಿಕಟ್ಟೆ ಪಾರ್ಕ್ ಯೋಜನೆ
ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯ ಕೊನೆಯಲ್ಲಿ ನಾಗಸಾನಿಧ್ಯದ ಪಕ್ಕದಲ್ಲಿರುವ ಪಾರ್ಕ್9.28 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸುವ ಯೋಜನೆ ಮಂಜೂರಾಗಿದೆ. ವಿಶಾಲ ಮೈದಾನದ ಕೊನೆಯಲ್ಲಿರುವ ಪ್ರಶಾಂತ ಪಾರ್ಕ್ ಇದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲಿದೆ.

ನೆಲಪ್ಪಾಲು ಪಾರ್ಕ್
ನಗರಸಭೆ ವ್ಯಾಪ್ತಿಯ ನೆಲಪ್ಪಾಲುವಿನಲ್ಲಿರುವ ಪಾರ್ಕ್ ಅಭಿವೃದ್ಧಿಗೆ 25 ಲಕ್ಷ ರೂ. ಮಂಜೂರಾಗಿದೆ. ಮೊದಲ ಹಂತದ ಕೆಲಸ ನಡೆಯತ್ತಿದ್ದು, ಆವರಣ ಗೋಡೆ, ತಡೆಬೇಲಿ ನಡೆಯಲಿದೆ. 2ನೇ ಹಂತದಲ್ಲಿ ಲಾನ್‌, ವಾಕಿಂಗ್‌ ಟ್ರ್ಕಾಕ್‌, ಗಿಡಗಳು, ದೀಪಾಲಂಕಾರ ಇತ್ಯಾದಿ ನಡೆಯಲಿದೆ.
ಮೈಸೂರಿನಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ನಿವೇಶನವಾಗಿ ಪರಿವರ್ತಿಸಿ ಮಾರಾಟ..!
ಸಾಮೆತ್ತಡ್ಕ ಪಾರ್ಕ್
ಸುಮಾರು 1 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿರುವ ಸಾಮೆತ್ತಡ್ಕ ಪಾರ್ಕ್ ಅಭಿವೃದ್ಧಿ ಯೋಜನೆ ಜಾರಿಯಲ್ಲಿದೆ. ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ಸಿವಿಲ್‌ ಕೆಲಸಗಳನ್ನು ಮುಗಿಸಲಾಗಿದೆ. ಮುಂದಿನ ಅಭಿವೃದ್ಧಿಗೆ 18 ಲಕ್ಷ ರೂ. ಇಡಲಾಗಿದ್ದು, ಕಾಮಗಾರಿ ಟೆಂಡರ್‌ ಹಂತದಲ್ಲಿದೆ. ಇದರಲ್ಲಿ ಅರ್ಧ ಭಾಗದಷ್ಟು ಅಭಿವೃದ್ಧಿ ನಡೆಯಲಿದೆ. ಹಂತ ಹಂತವಾಗಿ ಈ ಪಾರ್ಕ್ ನವೀಕರಿಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಕೊನೆಗೂ ಮಂಕಿ ಪಾರ್ಕ್ ಗೆ ಸ್ಥಳ ಅಂತಿಮ: ಟೆಂಡರ್‌ ಹಂತದಲ್ಲಿ ಯೋಜನೆ!
ಸ್ವಚ್ಛ- ಸುಂದರ ನಗರ
ಸ್ವಚ್ಛ ಪುತ್ತೂರು- ಸುಂದರ ಪುತ್ತೂರು ನಿರ್ಮಾಣ ನಮ್ಮ ಗುರಿ. ಇದಕ್ಕೆ ಬೇಕಾದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಚಿಣ್ಣರ ಪಾರ್ಕ್ ಮುಂದಿನ ದಿನಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬೇಕೆಂಬುದು ನಮ್ಮ ಆಶಯ.
ಮಧು ಎಸ್‌. ಮನೋಹರ್‌, ನಗರಸಭೆ ಪೌರಾಯುಕ್ತರು



Read more