Karnataka news paper

ಮತಾಂತರ ನಿಷೇಧ ಮಸೂದೆ ಅಂಗೀಕರಿಸಿದ 9ನೇ ರಾಜ್ಯ ಕರ್ನಾಟಕ


The New Indian Express

ಬೆಳಗಾವಿ: ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆಯೇ ಕರ್ನಾಟಕ ವಿಧಾನಸಭೆ ಮತಾಂತರ ನಿಷೇಧ ಮಸೂದೆ ಅಂಗೀಕರಿಸಿದ್ದು, ಆ ಮೂಲಕ ಈ ಮಸೂದೆಯನ್ನು ಅಂಗೀಕರಿಸಿದ ದೇಶದ 9ನೇ ರಾಜ್ಯವಾಗಿದೆ.

ಭಾರೀ ಕೋಲಾಹಲದ ನಡುವೆಯೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ 2021 ಎಂಬ ಮತಾಂತರ ನಿಷೇಧ ಮಸೂದೆಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಮತದ ಮೂಲಕ ಗುರುವಾರ ಅಂಗೀಕರಿಸಲಾಯಿತು. ಆ ಮೂಲಕ ಈ ಮಸೂದೆಯನ್ನು ಅಂಗೀಕರಿಸಿದ ದೇಶದ 9ನೇ ರಾಜ್ಯವಾಗಿದೆ. ಈ ಹಿಂದೆ ಅರುಣಾಚಲ ಪ್ರದೇಶ, ಗುಜರಾತ್, ಒಡಿಶಾ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರಾಖಂಡ ರಾಜ್ಯಗಳು ಈ ಮಸೂದೆಯನ್ನು ಅಂಗೀಕರಿಸಿದ್ದವು.

ಇದನ್ನೂ ಓದಿ: ವಿಪಕ್ಷಗಳ ಗದ್ದಲದ ನಡುವೆ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಧಾವಿಸಿ ಪ್ರತಿಭಟನೆ ನಡೆಸಿದ ನಂತರವೂ ವಿಧಾನಸಭೆ ಮಸೂದೆಯನ್ನು ಅಂಗೀಕರಿಸಿದ್ದು ದಿನದ ಪ್ರಮುಖ ಬೆಳವಣಿಗೆಯಾಗಿದೆ.  ಮಸೂದೆಯ ಮೇಲಿನ ಮ್ಯಾರಥಾನ್ ಚರ್ಚೆಯ ಸಂದರ್ಭದಲ್ಲಿ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಹಲವಾರು ಪ್ರಮುಖ ನಾಯಕರು ತೀವ್ರ ವಾಗ್ವಾದ ನಡೆಸಿದರು. ಈ ಮಸೂದೆಯ ಕರಡನ್ನು ರೂಪಿಸಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ವಾದಿಸಿದರೆ, ಅದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಲೋಚನೆಯಾಗಿತ್ತು ಎಂದು ಕಾಂಗ್ರೆಸ್ ಪ್ರತಿದಾಳಿ ನಡೆಸಿತು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಸೂದೆ ಅಸಂವಿಧಾನಿಕ ಮತ್ತು ಕ್ರೂರ ಎಂದು ಚರ್ಚೆ ಆರಂಭಿಸಿದಾಗ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಮೊದಲ ಬಾರಿಗೆ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಲು ಮುಂದಾಗಿತ್ತು ಎಂದು ಹೇಳಿದರು. 

ಇದನ್ನೂ ಓದಿ: ಮತಾಂತರ ಕಾಯ್ದೆ ನಮ್ಮ ಕಾಲದ್ದಲ್ಲ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ

‘ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಾನೂನು ಆಯೋಗವು ಇದೇ ರೀತಿಯ ವಿಧೇಯಕವನ್ನು ರಚಿಸಿತ್ತು ಮತ್ತು ಸ್ಕ್ರೀನಿಂಗ್ ಕಮಿಟಿಯ ಮುಂದೆ ವಿಧೇಯಕವನ್ನೂ ತಂದಿತ್ತು. ಅದೇ ವಿಧೇಯಕಕ್ಕೆ ಕೆಲವು ಬದಲಾವಣೆಗಳನ್ನು ಮಾಡಿ ಈಗ ವಿಧಾನಸಭೆಯಲ್ಲಿ ಮಂಡಿಸಿದ್ದೇವೆ’ ಎಂದು  ಹೇಳಿದರು. ‘

ಕಾನೂನು ಸಚಿವರ ಹೇಳಿಕೆಗೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು (ಸಭಾಪತಿ) ಸಿದ್ದರಾಮಯ್ಯ ಮತ್ತು ಕಾನೂನು ಸಚಿವರೊಂದಿಗೆ ಸಂಕ್ಷಿಪ್ತ ಸಭೆ ನಡೆಸಿ, ಸ್ಕ್ರೀನಿಂಗ್ ಕಮಿಟಿಯ ಮುಂದೆ ಅಂತಹ ಮಸೂದೆಯನ್ನು ತಂದಿದೆಯೇ ಎಂದು ಸ್ಪಷ್ಟಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿದರು. ಸಭೆಯಲ್ಲಿ, ಸ್ಕ್ರೀನಿಂಗ್ ಕಮಿಟಿ ರೂಪಿಸಿದ ಮಸೂದೆಗೆ ಸಿದ್ದರಾಮಯ್ಯ ಸಹಿ ಹಾಕಿದ್ದು, 2016ರಲ್ಲಿ ಸಂಪುಟದ ಮುಂದೆ ಇಡುವಂತೆ ಹೇಳಿದ್ದರು ಎಂದು ತಿಳಿದು ಬಂದಿದೆ. 
 



Read more