The New Indian Express
ಬೆಂಗಳೂರು: ತಾಂತ್ರಿಕ ತಜ್ಞರ ಸಮಿತಿ(ಟಿಇಸಿ)ಯ ಶಿಫಾರಸಿನಂತೆ ನಮ್ಮ ಮೆಟ್ರೋ ಯೋಜನೆಯ 2ಎ ಹಂತದ ವಿವಿಧ ಸ್ಥಳಗಳಲ್ಲಿ 833 ಮರಗಳ ಪೈಕಿ 577 ಮರಗಳನ್ನು ಕಡಿಯಲು, 212 ಮರಗಳನ್ನು ಸ್ಥಳಾಂತರಿಸಲು ಮತ್ತು 44 ಮರಗಳನ್ನು ಉಳಿಸಿಕೊಳ್ಳಲು ಕರ್ನಾಟಕ ಹೈಕೋರ್ಟ್ ಗುರುವಾರ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ(ಬಿಎಂಆರ್‌ಸಿಎಲ್) ಗುರುವಾರ ಅನುಮತಿ ನೀಡಿದೆ.
ತಜ್ಞರ ಸಮಿತಿ ಶಿಫಾರಸಿನಂತೆ 577 ಮರಗಳನ್ನು ಕಡಿಯಲು ಅನುಮತಿಸಬಹುದೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ತಜ್ಞರಲ್ಲ ಎಂದು ಹೈಕೋರ್ಟ್ ಹೇಳಿದೆ.
ಟಿಇಸಿ ವರದಿ ಆಧರಿಸಿ ಮರಗಳನ್ನು ಕಡಿಯಲು ಅನುಮತಿ ಕೋರಿ ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗಂವ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಟಿಇಸಿ ಸೂಚಿಸಿದಂತೆ 44 ಮರಗಳನ್ನು ಉಳಿಸಿಕೊಳ್ಳುವ ಮತ್ತು 212 ಮರಗಳನ್ನು ಸ್ಥಳಾಂತರಿಸುವ ಮೂಲಕ 256 ಮರಗಳನ್ನು ಉಳಿಸಬಹುದು ಎಂಬುದನ್ನು ನ್ಯಾಯಾಲಯವು ಗಮನಿಸಿದೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸದಿರುವ ಕುರಿತು 2018ರಲ್ಲಿ ದತ್ತಾತ್ರೇಯ ಟಿ ದೇವರೆ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ.