ಹೈಲೈಟ್ಸ್:
- ಮೊದಲನೇ ಟೆಸ್ಟ್ ಭಾರತ ತಂಡಕ್ಕೆ ಬೌಲಿಂಗ್ ಸಂಯೋಜನೆ ಆರಿಸಿದ ಜಾಫರ್.
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಡಿಸೆಂಬರ್ 26 ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್.
ಭಾರತ ತಂಡ ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಅಂದಹಾಗೆ, ಭಾನುವಾರ ಸೆಂಚೂರಿಯನ್‌ನಲ್ಲಿ ಮೊದಲನೇ ಟೆಸ್ಟ್ ಆಡುವ ಮೂಲಕ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಅಧಿಕೃತವಾಗಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ವಾಸೀಮ್ ಜಾಫರ್, ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅಲ್ಲಿನ ಪರಿಸ್ಥಿತಿಗಳಿಗೆ ತಕ್ಕಂತೆ ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ತುಂಬಾ ಕಠಿಣವಾಗಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್ ಅನ್ನು ಆಡಿಸಬೇಕೆಂದು ಸಲಹೆ ನೀಡಿದ್ದಾರೆ. 7 ಮಂದಿ ಬ್ಯಾಟ್ಸ್‌ಮನ್‌ಗಳು ಹಾಗೂ 4 ಬೌಲರ್‌ಗಳು ಕಣಕ್ಕೆ ಇಳಿಯಬೇಕು. ನಾಲ್ಕು ಮಂದಿ ಬೌಲರ್‌ಗಳ ಪೈಕಿ ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ವೇಗಿಗಳಾಗಿದ್ದರೆ, ಆರ್ ಅಶ್ವಿನ್ ಏಕೈಕ ಸ್ಪಿನ್ನರ್ ಆಗಿ ಆಡಬೇಕೆಂದು ಸೂಚಿಸಿದ್ದಾರೆ.
ಪ್ಲೇಯಿಂಗ್ XIನಲ್ಲಿ 2 ಸ್ಥಾನಗಳಿಗೆ ಶುರುವಾಯ್ತು ಭಾರತಕ್ಕೆ ತಲೆ ನೋವು!
2017-18ರ ಆವೃತ್ತಿಯಲ್ಲಿ ಭಾರತ ತಂಡ ಕೊನೆಯ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತ್ತು. ಆದರೆ 2-1 ಅಂತರದಲ್ಲಿ ಸೋಲುಂಡಿತ್ತು. ಈ ವೇಳೆ ಭಾರತ ತಂಡ ಒಟ್ಟು ಆರು ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಬಾರಿ ಮಾತ್ರ 250 ರನ್‌ಗಳ ಮೊತ್ತವನ್ನು ಕಲೆ ಹಾಕಿತ್ತು. ಈ ಕಾರಣದಿಂದಲೇ ಸೋಲು ಅನುಭವಿಸಿತ್ತು ಎಂದು ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಕಳೆದ ಪ್ರವಾಸದ ವೇಳೆ ಭಾರತ ತಂಡ ಆಡಿದ್ದ ಆರು ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಬಾರಿ ಮಾತ್ರ 250ಕ್ಕೂ ಹೆಚ್ಚಿನ ರನ್ ಗಳಿಸಿತ್ತು. ಈ ಕಾರಣದಿಂದಲೇ ಮೂರು ಟೆಸ್ಟ್ ಪಂದ್ಯಗಳಿಂದ 20 ವಿಕೆಟ್‌ಗಳನ್ನು ಪಡೆದುಕೊಂಡಿದ್ದರೂ ಸರಣಿಯಲ್ಲಿ ಸೋಲು ಅನುಭವಿಸಬೇಕಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ಬುಮ್ರಾ, ಶಮಿ, ಸಿರಾಜ್ ಹಾಗೂ ಅಶ್ವಿನ್ ಅವರೊಂದಿಗೆ 7+4 ಸಂಯೋಜನೆಯನ್ನು ನೀಡುತ್ತಿದ್ದೇನೆ,” ಎಂದು ನ್ಯೂಸ್18ಗೆ ತಿಳಿಸಿದ್ದಾರೆ.
ಪೂಜಾರ, ರಹಾನೆಗೆ ಟೀಮ್ ಮ್ಯಾನೇಜ್‌ಮೆಂಟ್ ಬೆಂಬಲ ಅಗತ್ಯವಿದೆ: ಆಮ್ರೆ!
ಭಾರತೀಯ ಬೌಲರ್‌ಗಳು ಇದೀಗ ಅನುಭವಿಗಳಾಗಿದ್ದಾರೆ: ಜಾಫರ್
ಭಾರತ ತಂಡದ ಬೌಲರ್‌ಗಳನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಟೀಮ್ ಇಂಡಿಯಾ ಮಾಜಿ ಓಪನರ್ ಜಾಫರ್, ನಮ್ಮ ಬೌಲರ್‌ಗಳು ಪ್ರಸ್ತುತ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
“ಭಾರತದ ಬೌಲರ್‌ಗಳು ತಮ್ಮ ತಂಡವನ್ನು ಪಂದ್ಯದಲ್ಲಿ ಉಳಿಸಲು ನೆರವಾಗುತ್ತಾರೆ. ಅದರಲ್ಲೂ ವೇಗದ ಬೌಲರ್‌ಗಳು ಇದೀಗ ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಜಸ್‌ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಹೆಚ್ಚಿನ ಅನುಭವವನ್ನು ಪಡೆದುಕೊಂಡಿದ್ದಾರೆ. ಅಂದಹಾಗೆ ಇದೀಗ ಭಾರತ ತಂಡದಲ್ಲಿ ಆಲ್‌ರೌಂಡ್ ಅಟ್ಯಾಕ್ ಇದೆ,” ಎಂದು ವಾಸೀಮ್ ಜಾಫರ್ ಶ್ಲಾಘಿಸಿದ್ದಾರೆ.