ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾಗಳ ರಿಮೇಕ್, ಈಗಾಗಲೇ ಲೈವ್‌ನಲ್ಲಿ ನೋಡಿದ ಕ್ರಿಕೆಟ್ ಮ್ಯಾಚ್‌ನ ಹೈಲೈಟ್ಸ್‌ನಂತೆ. ಈ ದಾಂಡಿಗ ಈಗ ಸಿಕ್ಸರ್ ಹೊಡೆಯುತ್ತಾನೆ, ಈಗ ಔಟ್ ಆಗುತ್ತಾನೆ, ಈಗ ವಿಕೆಟ್ ಉರುಳುತ್ತದೆ ಎಂಬುದು ಮೊದಲೇ ಗೊತ್ತಿರುವಂತೆ ಮೂಲ ಸಿನಿಮಾ ನೋಡಿದ ಪ್ರೇಕ್ಷಕನಿಗೆ ರಿಮೇಕ್ ಹೊಸ ರುಚಿಯನ್ನೇನು ನೀಡಲ್ಲ. ಆದರೆ, ಕ್ರಿಕೆಟ್ ಆತನಿಗೆ ಪಂಚಪ್ರಾಣವಾಗಿದ್ದರೆ ಅಥವಾ ಲೈವ್ ನೋಡದೇ ಇದ್ದಿದ್ದರೆ ಹೈಲೈಟ್ಸ್ ಕೂಡಾ ಮೃಷ್ಟಾನ್ನ ಭೋಜನ.
ಇದೇ ಸ್ಥಿತಿ ‘ಕ್ರೇಜಿಸ್ಟಾರ್’ ರವಿಚಂದ್ರ ವಿ. ನಟನೆಯ ‘ದೃಶ್ಯ–2’ ನೋಡಿದ ಮೇಲೆ ಕೆಲವು ಪ್ರೇಕ್ಷಕರಿಗನಿಸುತ್ತದೆ. ಕಾರಣವಿಷ್ಟೆ: ಈ ಚಿತ್ರದ ಮೂಲ ಮಲಯಾಳಂನಲ್ಲಿ ಮೋಹನ್‌ಲಾಲ್ ನಟನೆಯ ‘ದೃಶ್ಯಂ–2’ ಸಿನಿಮಾ ರಿಲೀಸ್ ಆಗಿ ಈಗಾಗಲೇ ಹತ್ತು ತಿಂಗಳಾಗಿದೆ. ತೆಲುಗಿನಲ್ಲೂ ಇದು ರಿಮೇಕ್ ಆಗಿದೆ. ಎರಡೂ ಸಿನಿಮಾಗಳೂ ಒಟಿಟಿ ವೇದಿಕೆಯಲ್ಲಿದ್ದು, ಈಗಾಗಲೇ ಹಲವರು ನೋಡಿದ್ದಾರೆ. ಆದರೆ, ಮೂಲ ಸಿನಿಮಾ ನೋಡದೇ ಇರುವ ಪ್ರೇಕ್ಷಕನಿಗೆ ‘ದೃಶ್ಯ–2’ ಹೊಸ ರೋಚಕ ಪಯಣವೇ ಸರಿ.
ತನ್ನ ಮಾನಭಂಗಕ್ಕೆ ಯತ್ನಿಸಿದ ಪೊಲೀಸ್ ಅಧಿಕಾರಿಯ ಮಗನಾದ ತರುಣ್ ಎಂಬಾತನನ್ನು ರಾಜೇಂದ್ರ ಪೊನ್ನಪ್ಪನ ಮಗಳು ಸಿಂಧು (ಆರೋಹಿ ನಾರಾಯಣ್) ಕೊಲೆ ಮಾಡುತ್ತಾಳೆ. ಆ ಶವವನ್ನು ತಾಯಿ ಸೀತಾ (ನವ್ಯಾ ನಾಯರ್) ಜೊತೆಗೂಡಿ ಮನೆಯ ಬಳಿ ಹೂತಿರುತ್ತಾರೆ. ಘಟನೆಯ ವಿಷಯ ತಿಳಿದ ರಾಜೇಂದ್ರ ಪೊನ್ನಪ್ಪ (ರವಿಚಂದ್ರ ವಿ.), ಇಡೀ ಕುಟುಂಬವನ್ನು ರಕ್ಷಿಸುವ ಸಲುವಾಗಿ ಯಾರಿಗೂ ತಿಳಿಯದಂತೆ ಶವವನ್ನು ತನ್ನದೇ ಊರಿನಲ್ಲಿ ನಿರ್ಮಾಣವಾಗುತ್ತಿದ್ದ ಪೊಲೀಸ್ ಠಾಣೆಯ ಒಳಗೇ ಹೂತು ಹಾಕುತ್ತಾನೆ. ಇದರಿಂದ ಪಾರಾಗಲು ಕಥೆ ಹೆಣೆಯುತ್ತಾನೆ. ಇಡೀ ಕುಟುಂಬದ ವಿಚಾರಣೆ ನಡೆಸಿದರೂ, ಕುಟುಂಬವನ್ನು ಎಷ್ಟೇ ಹಿಂಸಿಸಿದರೂ ಶವ ಸಿಗುವುದಿಲ್ಲ. ಹೀಗಾಗಿ ಪ್ರಕರಣ ಅಂತ್ಯ ಕಂಡು ಮೊದಲನೇ ಭಾಗ ಮುಗಿಯುತ್ತದೆ.
ಓದಿ: ದೃಶ್ಯ – 2 | ಚಿತ್ರಮಂದಿರಕ್ಕೆ ‘ರಾಜೇಂದ್ರ ಪೊನ್ನಪ್ಪ’ ಪ್ರವೇಶ
ಈ ಘಟನೆ ನಡೆದು ವರ್ಷಗಳು ಉರುಳಿವೆ. ಇದು ಎರಡನೇ ಭಾಗದ ಆರಂಭ. ರಾಜೇಂದ್ರ ಪೊನ್ನಪ್ಪ ಇದೀಗ ಕೊಂಚ ಶ್ರೀಮಂತನಾಗಿದ್ದಾನೆ. ಜೀಪ್ ಬದಲು ಹೊಸ ಕಾರು ಬಂದಿದೆ. ತನ್ನ ಕನಸಾದ ಹೊಸ ಚಿತ್ರಮಂದಿರ ಕಟ್ಟಿದ್ದಾನೆ. ಜೊತೆಗೆ ಹೊಸ ಸಿನಿಮಾ ನಿರ್ಮಾಣಕ್ಕೂ ಸಿದ್ಧತೆ ನಡೆಸಿದ್ದಾನೆ. ಈ ನಡುವೆ ತರುಣ್ ಶವ ಹೂತಿಟ್ಟಿರುವ ಜಾಗವನ್ನು ಪೊಲೀಸರು ಪತ್ತೆಹಚ್ಚಿ, ಅಸ್ಥಿಪಂಜರ ಹೊರತೆಗೆಯುತ್ತಾರೆ. ಈ ಹಾವು ಏಣಿ ಆಟದಲ್ಲಿ ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಸೆಕೆಂಡ್ ಹಾಫ್.
ಏಳು ವರ್ಷಗಳ ಹಿಂದೆ ದೃಶ್ಯ ಮೊದಲ ಭಾಗದಲ್ಲಿ ‘ರಾಜೇಂದ್ರ ಪೊನ್ನಪ್ಪ’ನಾಗಿ ಮಿಂಚಿದ್ದ ರವಿಚಂದ್ರ ವಿ, ಎರಡನೇ ಭಾಗದಲ್ಲೂ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ. ಥ್ರಿಲ್ಲರ್ ಪಯಣದಲ್ಲೂ ತಮ್ಮ ತುಂಟಾಟಕ್ಕೆ ವಯಸ್ಸಿಲ್ಲ ಎಂದು ತೋರಿಸಿದ್ದಾರೆ. ಜೀತು ಜೋಸೆಫ್ ಅವರ ಕಥೆಯ ಮೂಲ ಸಿನಿಮಾದಲ್ಲಿ ಚಿತ್ರದ ಮೊದಲಾರ್ಧ ನಿಧಾನಗತಿಯಲ್ಲಿತ್ತು ಎಂಬ ಮಾತು ಪ್ರೇಕ್ಷಕರಿಂದ ಕೇಳಿ ಬಂದಿತ್ತು. ಈ ಕಾರಣ ದೃಶ್ಯ–2ನಲ್ಲಿ ಸಾಧು ಕೋಕಿಲ ಅವರ ಹೈಕ್ಲಾಸ್ ಭಿಕ್ಷುಕನ ಪಾತ್ರವನ್ನು ಸೇರಿಸಿ ಪ್ರೇಕ್ಷಕರನ್ನು ನಗಿಸಲು ಪಿ.ವಾಸು ಪ್ರಯತ್ನಿಸಿದ್ದಾರೆ. ಇದೊಂದು ವಿಫಲ ಯತ್ನ. ಪಂಚ್ ಡೈಲಾಗ್ಸ್, ಸನ್ನಿವೇಶಗಳಿಲ್ಲದೆ ಸಾಧು ಕೋಕಿಲ ಪಾತ್ರ ಸೊರಗಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಟ ಪ್ರಮೋದ್ ಶೆಟ್ಟಿ ನಟನೆ ಇಷ್ಟವಾಗುತ್ತದೆ. ಸಿನಿಮಾ ಕಥೆಗಾರನ ಪಾತ್ರದಲ್ಲಿ ಅನಂತನಾಗ್ ದ್ವಿತೀಯಾರ್ಧದಲ್ಲಿ ತೆರೆಯ ತೂಕಹೆಚ್ಚಿಸಿದ್ದಾರೆ. ಶಿವಾಜಿ ಪ್ರಭು, ಆಶಾ ಶರತ್ ಅಭಿನಯ ಅಮೋಘ. ನಟ ದಿವಂಗತ ಶಿವರಾಂ ಅವರೂ ಇಲ್ಲಿ ಮತ್ತೆ ಜೀವಿಸಿದ್ದಾರೆ. ಕೆಲ ಪಾತ್ರಗಳಲ್ಲಿ ಜೀವ ಹುಡುಕಬೇಕಾಗಿದೆ. ಕ್ಲೈಮ್ಯಾಕ್ಸ್ ವೇಳೆ ಪಾತ್ರಗಳ ಹಾವಭಾವಕ್ಕೂ, ಡಬ್ಬಿಂಗ್‌ನ ಏರುಧ್ವನಿಗೂ ಸಂಬಂಧವೇ ಇಲ್ಲ. ಇದು ಸ್ಪಷ್ಟ ಕೂಡಾ.
ಮೂಲ ಸಿನಿಮಾದಲ್ಲಿರದ ಒಂದು ವಾಕ್ಯವನ್ನು ಅಂತ್ಯದಲ್ಲಿ ಹರಿಬಿಟ್ಟಿರುವ ಪಿ.ವಾಸು ಅವರು, ದೃಶ್ಯ ಸರಣಿ ಕನ್ನಡದಲ್ಲಿ ಮುಂದುವರಿಯುತ್ತಾ ಎನ್ನುವ ಪ್ರಶ್ನೆಯೊಂದನ್ನೂ ತೇಲಿಬಿಟ್ಟಿದ್ದಾರೆ.
ದೃಶ್ಯ-2
ನಿರ್ದೇಶನ: ಪಿ.ವಾಸು
ನಿರ್ಮಾಣ: ಮುಖೇಶ್ ಆರ್.ಮೆಹತಾ, ಜೀ ಸ್ಟೂಡಿಯೋಸ್ ಹಾಗೂ ಸಿ.ವಿ. ಸಾರಥಿ
ತಾರಾಗಣ: ರವಿಚಂದ್ರ ವಿ., ನವ್ಯಾ ನಾಯರ್, ಅನಂತನಾಗ್, ಶಿವಾಜಿ ಪ್ರಭು, ಆಶಾ ಶರತ್, ಪ್ರಮೋದ್ ಶೆಟ್ಟಿ, ಆರೋಹಿ ನಾರಾಯಣ್, ಉನ್ನತಿ