Karnataka news paper

ತಿರುಪತಿ ತಿಮ್ಮಪ್ಪನ ‘ಉದಯಾಸ್ತಮಾನ ಅರ್ಜಿತಾ ಸೇವೆ’ ಟಿಕೆಟ್‌ ದರ ಬರೋಬ್ಬರಿ 1 ಕೋಟಿ ರೂಪಾಯಿ..!


ಹೈಲೈಟ್ಸ್‌:

  • ಶುಕ್ರವಾರದ ‘ಉದಯಾಸ್ತಮಾನ ಅರ್ಜಿತಾ ಸೇವಾ’ ಟಿಕೆಟ್‌ ದರ 1.5 ಕೋಟಿ ರೂ.
  • ಒಟ್ಟು 530 ಟಿಕೆಟ್‌ಗಳನ್ನು ಭಕ್ತರಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಮಾರಾಟ
  • ವರ್ಷದಲ್ಲಿ ಒಮ್ಮೆಯಂತೆ 25 ವರ್ಷಗಳ ಕಾಲ ಈ ಸೇವೆಯಲ್ಲಿ ಭಾಗವಹಿಸಬಹುದಾಗಿದೆ

ತಿರುಪತಿ: ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಬೆಳಗ್ಗಿನ ಸುಪ್ರಭಾತ ಸೇವೆಯಿಂದ ರಾತ್ರಿಯ ಉಂಜಲ ಸೇವೆಯವರೆಗಿನ ದಿನದ ಎಲ್ಲಾ ಅರ್ಜಿತಾ ಸೇವೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವ ‘ಉದಯಾಸ್ತಮಾನ ಅರ್ಜಿತಾ ಸೇವಾ‘ ಟಿಕೆಟ್‌ಗಳನ್ನು ಭಕ್ತರಿಗೆ ಹಂಚಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿರ್ಧರಿಸಿದೆ.

ಶುಕ್ರವಾರ ಹೊರತುಪಡಿಸಿ ಇತರೆ ದಿನಗಳ ‘ಉದಯಾಸ್ತಮಾನ ಅರ್ಜಿತಾ ಸೇವಾ’ ಟಿಕೆಟ್‌ ದರ 1 ಕೋಟಿ ರೂ. ಇರಲಿದೆ. ಇದೇ ರೀತಿ, ಶುಕ್ರವಾರದ ‘ಉದಯಾಸ್ತಮಾನ ಅರ್ಜಿತಾ ಸೇವಾ’ ಟಿಕೆಟ್‌ ದರ 1.5 ಕೋಟಿ ರೂ. ಗಳೆಂದು ನಿಗದಿಪಡಿಸಲಾಗಿದೆ. ಇಂತಹ ಒಟ್ಟು 530 ಟಿಕೆಟ್‌ಗಳನ್ನು ಭಕ್ತರಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಈ ಟಿಕೆಟ್‌ ಪಡೆದವರು ನಿಗದಿತ ದಿನದಂದು, ವರ್ಷದಲ್ಲಿ ಒಮ್ಮೆಯಂತೆ 25 ವರ್ಷಗಳ ಕಾಲ ಈ ಸೇವೆಯಲ್ಲಿ ಭಾಗವಹಿಸಬಹುದಾಗಿದೆ.

ಉದಯಾಸ್ತಮಾನ ಅರ್ಜಿತಾ ಸೇವೆಯನ್ನು 1981ರಲ್ಲಿ ಆರಂಭಿಸಲಾಗಿತ್ತು. ಆದರೆ 1995ರಲ್ಲಿ ನಿಲ್ಲಿಸಲಾಗಿತ್ತು. ಬಳಿಕ 2006ರಲ್ಲಿ ಮತ್ತೆ ಈ ಸೇವೆಯನ್ನು ಅಧಿಕೃತವಾಗಿ ಆರಂಭಿಸಲಾಗಿತ್ತು. ಆಗ ಈ ಸೇವಾ ಟಿಕೆಟ್‌ ದರ 1 ಲಕ್ಷ ರೂ. ಇತ್ತು. ಸುಮಾರು 2600 ಟಿಕೆಟ್‌ಗಳು ಬುಕ್‌ ಆಗಿದ್ದವು. 531 ಟಿಕೆಟ್‌ಗಳನ್ನು ವಿವಿಧ ಕಾರಣಗಳಿಂದ ಭಕ್ತರು ಬಳಸಿರಲಿಲ್ಲ. ಬಳಕೆಯಾಗದ ಇದೇ ಟಿಕೆಟ್‌ಗಳನ್ನು ತಲಾ 1 ಕೋಟಿ ರೂ.ಗೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.

ಜನ್ಮದಿನದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಶ್ರುತಿ
ಈ ಸೇವಾ ಟಿಕೆಟ್‌ ಮೂಲಕ ಸುಮಾರು 600 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಟಿಟಿಡಿ ಹೊಂದಿದೆ. ಟಿಟಿಡಿ ಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ದೇಣಿಗೆ ಮೂಲಕ ಇಷ್ಟು ದೊಡ್ಡ ಮೊತ್ತ ಸಂಗ್ರಹಿಸಲು ಮುಂದಾಗಿದೆ. ಈ ಹಣವನ್ನು ತಿರುಪತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್‌ ಸ್ಪೆಷಾಲಿಟಿ ಮಕ್ಕಳ ಆಸ್ಪತ್ರೆ ಸೇರಿದಂತೆ ಮೂರು ಪ್ರಮುಖ ಪ್ರಾಜೆಕ್ಟ್‌ಗಳಿಗೆ ಬಳಸಲು ಉದ್ದೇಶಿಸಲಾಗಿದೆ. ‘ಪಿಡಿಯಾಟ್ರಿಕ್‌ ಹೃದಯ ಆಸ್ಪತ್ರೆ ಮತ್ತು ಇತರೆ ಎರಡು ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣಕ್ಕೆ ಈ ಹಣವನ್ನು ಬಳಸಲಾಗುವುದು’ ಎಂದು ಟಿಟಿಡಿ ಟ್ರಸ್ಟ್‌ನ ಚೇರ್ಮನ್‌ ವೈವಿ ಸುಬ್ಬಾ ರೆಡ್ಡಿ ಹೇಳಿದ್ದಾರೆ.

ಉದಯಾಸ್ತಮಾನ ಅರ್ಜಿತಾ ಸೇವಾ ಟಿಕೆಟ್‌ ಬುಕ್ಕಿಂಗ್‌ ಮಾಡಿದ ದಾನಿ ಸೇರಿದಂತೆ ಒಟ್ಟು 6 ಜನರಿಗೆ ಸೇವೆ ಪಡೆಯಲು ಅವಕಾಶವಿರುತ್ತದೆ. ಹೆಸರೇ ಹೇಳುವಂತೆ ಸೇವಾಕರ್ತರು ಪತ್ನಿ ಮತ್ತು ಕುಟುಂಬದ ಇತರ ಐವರು ಸದಸ್ಯರೊಂದಿಗೆ ದೇಗುಲಕ್ಕೆ ಭೇಟಿ ನೀಡಿ, ಬೆಳಗ್ಗಿನಿಂದ (ಸುಪ್ರಭಾತ) ರಾತ್ರಿಯ (ಏಕಾಂತ)ವರೆಗೆ ಶ್ರೀ ಸನ್ನಿಧಿಯಲ್ಲಿ ನಡೆಯುವ ಎಲ್ಲಾ ಸೇವೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ದಿನವೊಂದಕ್ಕೆ ಕೇವಲ ಆರು ದಾನಿ (ಟಿಕೆಟ್‌)ಗಳಿಗೆ ಈ ಸೇವೆ ಪಡೆಯುವ ಅವಕಾಶ ನೀಡಲಾಗುತ್ತದೆ. ಈ ಟಿಕೆಟ್‌ ಅನ್ನು ಬ್ರಹ್ಮೋತ್ಸವ ಮತ್ತು ಇತರೆ ವಿಶೇಷ ದಿನಗಳನ್ನು ಹೊರತುಪಡಿಸಿ ಉಳಿದ ಯಾವುದೇ ದಿನದಂದು ಬಳಸಬಹುದಾಗಿರುತ್ತದೆ.

ತಿರುಪತಿ ತಿಮ್ಮಪ್ಪನಿಗೆ ಯಾವಾಗ ನೈವೇದ್ಯ ನೀಡುತ್ತಾರೆ ಗೊತ್ತಾ..? ಇವೆಲ್ಲವೂ ನೈವೇದ್ಯವಂತೆ..!
ಯಾವ ರೀತಿಯ ಸೇವೆ?

1 ಕೋಟಿ ಟಿಕೆಟ್‌- ಶುಕ್ರವಾರ ಹೊರತುಪಡಿಸಿ ನಿಗದಿತ ದಿನ 25 ವರ್ಷಗಳ ವರೆಗೆ ಉದಯಾಸ್ತಮಾನ ಪೂಜೆಗೆ ಅವಕಾಶ

1.5 ಕೋಟಿ ಟಿಕೆಟ್‌- ಶುಕ್ರವಾರ ಸೇರಿದಂತೆ ವರ್ಷದಲ್ಲಿ ಒಮ್ಮೆ ನಿಗದಿತ ದಿನದಂದು, 25 ವರ್ಷಗಳ ವರೆಗೆ ಉದಯಾಸ್ತಮಾನ ಪೂಜೆಗೆ ಅವಕಾಶ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 3ನೇ ಘಾಟಿ ರಸ್ತೆ ನಿರ್ಮಿಸಲು ಟಿಟಿಡಿ ನಿರ್ಧಾರ



Read more