The New Indian Express
ನವದೆಹಲಿ: ದೆಹಲಿಯ ಲೋಕ್ ನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓಮಿಕ್ರಾನ್ ರೋಗಿಗಳಿಗೆ ಇಲ್ಲಿಯವರೆಗೂ ಮಲ್ಟಿ ವಿಟಮಿನ್ಸ್ ಮತ್ತು ಪ್ಯಾರಾಸಿಟಮಾಲ್ ಔಷಧ ಮಾತ್ರ ನೀಡಲಾಗುತ್ತಿದೆ ಎಂದು ಡಾಕ್ಟರ್ ಗಳು ಶುಕ್ರವಾರ ತಿಳಿಸಿದ್ದಾರೆ.
ಲೋಕ್ ನಾಯಕ ಜಯಪ್ರಕಾಶ್ ಆಸ್ಪತ್ರೆ, ದೆಹಲಿಯಲ್ಲಿನ ದೊಡ್ಡ ಆಸ್ಪತ್ರೆಯಾಗಿದ್ದು, ಈವರೆಗೂ 40 ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ಈ ಪೈಕಿ 19 ರೋಗಿಗಳು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 90 ರೋಗಿಗಳು ಲಕ್ಷಣ ರಹಿತರಾಗಿದ್ದು, ಗಂಟಲು ಕೆರೆತ, ಸಣ್ಣ ಪ್ರಮಾಣದ ಜ್ವರ, ಮೈಕೈ ನೋವಿನಂತಹ ಸಣ್ಣ ಲಕ್ಷಣಗಳಿರುವುದಾಗಿ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ. ಈ ರೋಗಿಗಳಿಗೆ ಮಲ್ಟಿ ವಿಟಮಿನ್ಸ್, ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಔಷಧವಾಗಿ ನೀಡಲಾಗುತ್ತಿದೆ. ಬೇರೆ ಯಾವುದೇ ಔಷಧಿಯನ್ನು ಅವರಿಗೆ ನೀಡಬೇಕು ಅನಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಎಲ್ಲಾ ಕೋವಿಡ್-19 ಪ್ರಕರಣಗಳ ಜಿನೋಮ್ ಸೀಕ್ವೆನ್ಸಿಂಗ್: ಎಲ್ಲಾ ಅರ್ಹರಿಗೂ ಕನಿಷ್ಟ 1 ಡೋಸ್ ಲಸಿಕೆ
ಬಹುತೇಕ ರೋಗಿಗಳು ವಿದೇಶಗಳಿಂದ ಆಗಮಿಸಿದವರಾಗಿದ್ದು, ಏರ್ ಪೋರ್ಟ್ ನಲ್ಲಿ ಪರೀಕ್ಷಿಸಿದಾಗ ಕೋವಿಡ್ -19 ಪಾಸಿಟಿವ್ ಕಂಡುಬಂದಿದೆ. ಅವರಲ್ಲಿ ಬಹುತೇಕ ಮಂದಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ. ಅಲ್ಲದೇ ಮೂರ್ನಾಲ್ಕು ಮಂದಿ ಬೂಸ್ಟರ್ ಡೋಸ್ ಕೂಡಾ ಪಡೆದಿರುವುದಾಗಿ ಅವರು ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೆಹಲಿಯಲ್ಲಿ ಇಲ್ಲಿಯವರೆಗೂ 67 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, 23 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.