ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಪ್ರಕಾರ 2022ರಲ್ಲಿ ಜಾಗತಿಕ ಮಟ್ಟದಲ್ಲಿ ಸರಕುಗಳ ರಫ್ತಿನ ಪ್ರಮಾಣದಲ್ಲಿ ಶೇ.4.7ರ ಸಕಾರಾತ್ಮಕ ಪ್ರಗತಿ ನಿರೀಕ್ಷಿಸಲಾಗಿದೆ. ಆದ್ದರಿಂದ ಭಾರತದಿಂದಲೂ ಬಂಪರ್ ರಫ್ತು ನಿರೀಕ್ಷಿಸಲಾಗಿದೆ. ಇದಕ್ಕೆ ಮತ್ತಷ್ಟು ಕಾರಣಗಳೂ ಇವೆ.
ನಿರೀಕ್ಷೆಗೆ ಕಾರಣವೇನು?
- ಕೋವಿಡ್ ಬಿಕ್ಕಟ್ಟಿನ ಪರಿಣಾಮ 2020-21ರಲ್ಲಿ ರಫ್ತು ಸೊರಗಿತ್ತು. ಆದರೆ 2021-22ರಲ್ಲಿರಫ್ತು ಮತ್ತೆ ಸುಧಾರಿಸತೊಡಗಿದೆ. ಹೀಗಾಗಿ 2022 ಮತ್ತಷ್ಟು ವಿಶ್ವಾಸದಾಯಕವಾಗಿದೆ.
- ಜಾಗತಿಕ ಮಟ್ಟದಲ್ಲಿ ಬೇಡಿಕೆ ಈಗಾಗಲೇ ಶುರುವಾಗಿದ್ದು, ದೇಶಿ ಉತ್ಪಾದಕರ ಉತ್ಸಾಹ ಹೆಚ್ಚಿಸಿದೆ.
- ಕೇಂದ್ರ ಸರಕಾರ ಕೂಡ ರಫ್ತಿಗೆ ಉತ್ತೇಜನ ನೀಡಲು ಉತ್ಪಾದನೆ ಅಧಾರಿತ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಜಾರಿಗೊಳಿಸಿದೆ. ಹಾಗೂ ಹಲವು ವಲಯಗಳಿಗೆ ಅದನ್ನು ವಿಸ್ತರಿಸಿದೆ.
- ಪ್ರಸಕ್ತ 2021-22ರ ಸಾಲಿನಲ್ಲಿ ರಫ್ತು 400 ಶತಕೋಟಿ ಡಾಲರ್ ಮೌಲ್ಯವನ್ನು ಮೀರಿದೆ. (ಅಂದಾಜು 30 ಲಕ್ಷ ಕೋಟಿ ರೂ.)
ಸಾಫ್ಟ್‌ವೇರ್ ರಫ್ತು ಹೆಚ್ಚಳ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ 2021ರ ಮಾರ್ಚ್ 31ಕ್ಕೆ ಅಂತ್ಯವಾಗುವ 2020-21ರ ಸಾಲಿನಲ್ಲಿ 148 ಶತಕೋಟಿ ಡಾಲರ್ ಮೌಲ್ಯದ ಸಾಫ್ಟ್‌ವೇರ್ ರಫ್ತು ಸಂಭವಿಸಿದೆ.
ಮುಕ್ತ ವ್ಯಾಪಾರ ಒಪ್ಪಂದ:
ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಸರಕಾರ ನಾನಾ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಹೊಸ ವಿದೇಶ ವ್ಯಾಪಾರ ನೀತಿ (ಎಫ್‌ಟಿಪಿ) ನಿರೂಪಣೆಗೆ ಸಿದ್ಧತೆ ನಡೆಯುತ್ತಿದೆ. ಯುಎಇ, ಬ್ರಿಟನ್,ಆಸ್ಪ್ರೇಲಿಯಾ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಿಸಿಕೊಳ್ಳಲು ಮಾತುಕತೆ ನಡೆಯುತ್ತಿದೆ. ಇದು ರಫ್ತು ಹೆಚ್ಚಿಸಲು ಸಹಕಾರಿಯಾಗಲಿದೆ.
ರಫ್ತು ಹಚ್ಚಳದ ಲಾಭವೇನು?
- ರಫ್ತು ಹೆಚ್ಚಳಕ್ಕೆ ಉತ್ತೇಜನ ನೀಡುವುದರಿಂದ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ.
- ಉತ್ಪಾದನೆ ವೃದ್ಧಿಸುತ್ತದೆ.
- ವಿದೇಶಿ ವಿನಿಮಯ ಸಂಗ್ರಹ ಹೆಚ್ಚುತ್ತದೆ.
- ವ್ಯಾಪಾರ ಕೊರತೆ ತಗ್ಗುತ್ತದೆ.
- ಹೆಚ್ಚು ವೇತನ ಇರುವ ಉದ್ಯೋಗಗಳ ಸಂಖ್ಯೆ ಹೆಚ್ಚುತ್ತದೆ.
- ಜನಜೀವನದ ಗುಣಮಟ್ಟ ವೃದ್ಧಿಸುತ್ತದೆ
- ಬಡತನ ನಿರ್ಮೂಲನೆಗೆ ರಫ್ತು ಆದಾಯ ಹೆಚ್ಚಳ ಸೂಕ್ತ