ಹೈಲೈಟ್ಸ್:
- 2021ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿಯರು ಯಾರ್ಯಾರು?
- 2021ರಲ್ಲಿ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿಯರ ಪಟ್ಟಿ ಇಲ್ಲಿದೆ
- ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಮಿಂಚಿದ ನವನಟಿಯರು ಇವರೇ ನೋಡಿ…
ಕಳೆದ ಎರಡು ವರ್ಷಗಳಿಂದ ಕೋವಿಡ್ ಚಿತ್ರರಂಗವನ್ನು ತಲ್ಲಣಗೊಳಿಸಿದೆ. ಆದರೂ ಹೊಸ ಸಿನಿಮಾಗಳು, ಹೊಸ ನಟ, ನಟಿಯರು ಚಿತ್ರರಂಗಕ್ಕೆ ಬರುವುದು ಕಡಿಮೆಯಾಗಿಲ್ಲ. 2021 ರಲ್ಲಿಯೂ ಕೆಲವು ನವನಟಿಯರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಆಶಾ ಭಟ್
ಭದ್ರಾವತಿಯ ಚೆಲುವೆ ಆಶಾ ಭಟ್ 2021ರ ಆರಂಭದಲ್ಲಿ ಸ್ಯಾಂಡಲ್‌ವುಡ್‌ಗೆ ‘ರಾಬರ್ಟ್’ ಚಿತ್ರದ ಮೂಲಕ ಪ್ರವೇಶಿಸಿದರು. 2014ರಲ್ಲಿ ಮಿಸ್ ಸುಪ್ರ ಇಂಟರ್‌ನ್ಯಾಷನಲ್ ಪಟ್ಟ ಗಿಟ್ಟಿಸಿಕೊಂಡ ಆಶಾ ಭಟ್ 2019ರಲ್ಲಿ‘ಜಂಗ್ಲಿ’ ಎಂಬ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಯನ್ನು ಪ್ರವೇಶ ಮಾಡಿದರು. ಚೆಂದವಾಗಿ ಕನ್ನಡ ಮಾತನಾಡುವ ಆಶಾ ಭಟ್‌ರನ್ನು ನಿರ್ದೇಶಕ ತರುಣ್ ಸುಧೀರ್ ತಮ್ಮ ‘ರಾಬರ್ಟ್’ ಮೂಲಕ ಕನ್ನಡಿಗರಿಗೆ ಪರಿಚಯಿಸಿದರು. ಇದರ ಜತೆಗೆ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕವೂ ಖ್ಯಾತಿ ಗಳಿಸಿದ್ದಾರೆ. ಸದ್ಯಕ್ಕೆ ಇನ್ನಷ್ಟು ಕಥೆಗಳನ್ನು ಕೇಳುತ್ತಿದ್ದು, ಹೊಸ ಸಿನಿಮಾದ ಅನೌನ್ಸ್‌ಮೆಂಟ್ ಇನ್ನೂ ಆಗಿಲ್ಲ.
ಸಯ್ಯೇಶಾ
ತಮಿಳು, ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಇಮೇಜ್ ಹೊಂದಿರುವ ಸಯ್ಯೇಶಾ ಸೈಗಲ್ ‘ಯುವರತ್ನ’ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಈ ಚಿತ್ರದಲ್ಲಿ ಡಾಕ್ಟರ್ ಪಾತ್ರದ ಮೂಲಕ ಎಲ್ಲರಿಗೂ ಇಷ್ಟವಾದರು. ಸಿನಿಮಾ ಬಿಡುಗಡೆಯಾದ ಎರಡೇ ದಿನಗಳಲ್ಲಿ ಲಾಕ್‌ಡೌನ್ ಘೋಷಣೆಯಾದ ಪರಿಣಾಮ, ಚಿತ್ರ ಒಟಿಟಿಯಲ್ಲಿ ತೆರೆ ಕಂಡಿತು. ತಮ್ಮ ಅದ್ಭುತ ನೃತ್ಯದಿಂದ ಕನ್ನಡಿಗರ ಮನಗೆದ್ದಿರುವ ಇವರು ಸಹ ಒಳ್ಳೆ ಸ್ಕ್ರಿಪ್ಟ್ ಬಂದರೆ ಮತ್ತೆ ನಟಿಸುತ್ತೇನೆ ಎಂದಿದ್ದಾರೆ.
ಗಾನವಿ ಲಕ್ಷ್ಮಣ್
ಟಿ.ಎನ್. ಸೀತಾರಾಮ್ ಅವರ ‘ಮಗಳು ಜಾನಕಿ’ ಸೀರಿಯಲ್ ಮೂಲಕ ಕನ್ನಡಿಗರ ಮನೆ, ಮನ ತಲುಪಿದ ಗಾನವಿ ಲಕ್ಷ್ಮಣ್ ರಿಷಭ್ ಶೆಟ್ಟಿ ನಿರ್ದೇಶನದ ‘ಹೀರೋ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆದರು. ಈ ಸಿನಿಮಾದಲ್ಲಿ ಇವರ ನಟನೆ ಕಂಡು ಸ್ಯಾಂಡಲ್‌ವುಡ್‌ಗೆ ಪ್ರತಿಭಾವಂತ ನಟಿಯಾಗಿ ಒದಗುತ್ತಾರೆ ಎಂದು ಹಲವರು ಹೇಳಿದರು. ಇದಾದ ಮೇಲೆ ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಅವರು, ಉತ್ತಮ ಕಥೆಗಳ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರೇಬಾ ಮೋನಿಕಾ ಜಾನ್
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ, ಜಾಹೀರಾತಿನ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರೇಬಾ ಮಲಯಾಳಂ ಸಿನಿಮಾವೊಂದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಡಾಲಿ ಧನಂಜಯ ನಟನೆಯ ‘ರತ್ನನ್ ಪ್ರಪಂಚ’ ಮೂಲಕ ಚಂದನವನಕ್ಕೆ ಬಂದ ಈಕೆಯ ನಟನೆಯನ್ನು ಕಂಡ ವಿಮರ್ಶಕರು ಮತ್ತು ಅಭಿಮಾನಿಗಳು ರೇಬಾ ಕನ್ನಡದಲ್ಲಿಇನ್ನಷ್ಟು ಸಿನಿಮಾಗಳನ್ನು ಮಾಡಲಿ ಎಂದು ಅಭಿಪ್ರಾಯಪಟ್ಟರು. ತೆರೆ ಮೇಲೆ ಈಕೆ ಪರಭಾಷೆಯ ನಟಿಯಂತೆ ಕಾಣುವುದಿಲ್ಲ ಎಂದು ಹಲವರು ಹೇಳಿದರು.
ಧನ್ಯಾ ರಾಮ್‌ಕುಮಾರ್
ರಾಜ್‌ಕುಮಾರ್ ಕುಟುಂಬದ ಕುಡಿ, ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಸಹ 2021ರಲ್ಲಿ ಬೆಳ್ಳಿತೆರೆ ಪ್ರವೇಶ ಮಾಡಿ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿಕೊಂಡರು. ಸೂರಜ್ ಗೌಡ ನಿರ್ದೇಶನ ಮಾಡಿ ನಾಯಕರಾಗಿ ನಟಿಸಿದ್ದ ‘ನಿನ್ನ ಸನಿಹಕೆ’ ಅವರು ನಟಿಸಿದ್ದ ಮೊದಲ ಸಿನಿಮಾ. ಧನ್ಯಾ ರಾಮ್‌ಕುಮಾರ್ ಅವರ ನಟನೆ ಬಹಳ ಚೆನ್ನಾಗಿದ್ದು, ಭವಿಷ್ಯದಲ್ಲಿ ಉತ್ತಮ ನಟಿಯಾಗುತ್ತಾರೆ ಎಂದಿದ್ದಾರೆ ಸ್ಯಾಂಡಲ್‌ವುಡ್ ವಿಮರ್ಶಕರು.
ಮಡೋನಾ ಸೆಬಾಸ್ಟಿಯನ್
ಕಿಚ್ಚ ಸುದೀಪ್ ನಟಿಸಿದ್ದ ’ಕೋಟಿಗೊಬ್ಬ-3’ ಚಿತ್ರದ ಮೂಲಕ ಮಲಯಾಳಿ ಚೆಲುವೆ ಮಡೋನಾ ಸೆಬಾಸ್ಟಿಯನ್ 2021ರಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಮಡೋನಾಗೆ ಸ್ಕ್ರೀನ್ ಸ್ಪೇಸ್ ಜಾಸ್ತಿ ಇರದಿದ್ದ ಕಾರಣ ಅವರು ಅಷ್ಟೇನೂ ಗಮನ ಸೆಳೆಯಲಿಲ್ಲ.