Karnataka news paper

‘ಇದು ಅತ್ಯಂತ ಕಠಿಣ ನಿರ್ಧಾರ’ 5ನೇ ಕ್ರಮಾಂಕದ ಬಗ್ಗೆ ರಾಹುಲ್‌ ಮಾತು!


ಹೈಲೈಟ್ಸ್‌:

  • ಐದನೇ ಬ್ಯಾಟಿಂಗ್‌ ಕ್ರಮಾಂಕ ನಿರ್ಧರಿಸುವುದು ಅತ್ಯಂತ ಕಠಿಣವಾಗಿದೆ: ರಾಹುಲ್‌
  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 3 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಡಿಸೆಂಬರ್‌ 26 ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌.

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರದಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯಕ್ಕೆ ಐದನೇ ಬ್ಯಾಟಿಂಗ್‌ ಕ್ರಮಾಂಕದ ಆಯ್ಕೆ ಅತ್ಯಂತ ಕಠಿಣವಾಗಿದೆ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಫಾರ್ಮ್‌ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಅದರಂತೆ ನ್ಯೂಜಿಲೆಂಡ್‌ ವಿರುದ್ಧ ತವರು ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್‌ ಅಯ್ಯರ್‌ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದರು.

ಮತ್ತೊಂದೆಡೆ ಹನುಮ ವಿಹಾರಿ ಇತ್ತೀಚೆಗೆ ಭಾರತ ‘ಎ’ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಐದನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ರಹಾನೆ, ಅಯ್ಯರ್‌ ಹಾಗೂ ವಿಹಾರಿ ಅವರಿಂದ ತೀವ್ರ ಪೈಪೋಟಿ ಇದೆ. ಟೀಮ್‌ ಮ್ಯಾನೇಜ್‌ಮೆಂಟ್‌ ಇವರಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಪ್ಲೇಯಿಂಗ್‌ XIನಲ್ಲಿ 2 ಸ್ಥಾನಗಳಿಗೆ ಶುರುವಾಯ್ತು ಭಾರತಕ್ಕೆ ತಲೆ ನೋವು!

ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್‌ ರಾಹುಲ್‌ಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, “ನಿಸ್ಸಂಶಯವಾಗಿ ಇದು ಅತ್ಯಂತ ಕಠಿಣ ಕರೆಯಾಗಿದೆ. ಅಜಿಂಕ್ಯ ರಹಾನೆ ನಮ್ಮ ತಂಡದಲ್ಲಿ ಅತ್ಯಂತ ಪ್ರಮುಖ ಆಟಗಾರ ಹಾಗೂ ಅವರು ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ನಿರ್ಣಾಯಕ ಇನಿಂಗ್ಸ್‌ಗಳನ್ನು ಆಡಿದ್ದಾರೆ,” ಎಂದರು.

ಮಾತು ಮುಂದುವರಿಸಿದ ರಾಹುಲ್, “ಕಳೆದ 15-18 ತಿಂಗಳ ಹಿಂದೆ ಒಮ್ಮೆ ನೀವು ನೋಡಬಹುದು. ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ ಟೆಸ್ಟ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಿರ್ಣಾಯಕ ಪ್ರದರ್ಶನ ತೋರಿದ್ದರು ಹಾಗೂ ಗೆಲುವಿಗೆ ನೆರವಾಗಿದ್ದರು. ನಂತರ ಲಾರ್ಡ್ಸ್‌ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಪೂಜಾರ ಅವರೊಂದಿಗೆ ಜೊತೆಯಾಟ ಹಾಗೂ ನಿರ್ಣಾಯಕ ಅರ್ಧಶತಕ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಹಾಗಾಗಿ ಮಧ್ಯಮ ಕ್ರಮಾಂಕದಲ್ಲಿ ಅವರು ನಮಗೆ ಕೀ ಆಟಗಾರ,” ಎಂದು ರಾಹುಲ್‌ ಹಿರಿಯ ಆಟಗಾರನಿಗೆ ಬೆಂಬಲ ಸೂಚಿಸಿದ್ದಾರೆ.

‘ಮತ್ತೆ ಭಾರತ ಟೆಸ್ಟ್‌ ತಂಡಕ್ಕೆ ಆಡುತ್ತೇನೆಂದು ಭಾವಿಸಿರಲಿಲ್ಲ’ : ರಾಹುಲ್!

“ಶ್ರೇಯಸ್‌ ಅಯ್ಯರ್‌ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಕಾನ್ಪುರ ಟೆಸ್ಟ್‌ನಲ್ಲಿ ಅವರು ಬುದ್ದಿವಂತಿಕೆಯಿಂದ ಬ್ಯಾಟ್‌ ಮಾಡಿ ಶತಕ ಸಿಡಿಸಿದ್ದರು. ಇವರ ಜೊತೆಗೆ ಹನುಮ ವಿಹಾರಿ ಕೂಡ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹಾಗಾಗಿ ಬ್ಯಾಟಿಂಗ್ 5ನೇ ಕ್ರಮಾಂಕದ ಆಯ್ಕೆ ಕಠಿಣ ನಿರ್ಧಾರವಾಗಿದ್ದು, ಇವತ್ತು ಅಥವಾ ನಾಳೆ ಈ ಬಗ್ಗೆ ಚರ್ಚಿಸಿ ಅಂತಿಮಗೊಳಿಸುತ್ತೇವೆ,” ಎಂದು ಹೇಳಿದರು.

ಕಳೆದ ಹಲವು ವರ್ಷಗಳಿಂದ ಭಾರತ ತಂಡ ಐವರು ಬೌಲರ್‌ಗಳನ್ನು ಆಡಿಸುತ್ತಾ ಬಂದಿದೆ ಅಥವಾ ಹೆಚ್ಚುವರಿ ಬ್ಯಾಟ್ಸ್‌ಮನ್‌ ಅನ್ನು ಅಡಿಸಿಕೊಂಡು ರಿಷಭ್‌ ಪಂತ್‌ಗೆ ಏಳನೇ ಬ್ಯಾಟಿಂಗ್‌ ಕ್ರಮಾಂಕ ನೀಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ವಿದೇಶಿ ಟೆಸ್ಟ್‌ ಸರಣಿಗೆ ಭಾರತ ತಂಡ ಐವರು ಬೌಲರ್‌ಗಳನ್ನು ಸಿದ್ದಗೊಳಿಸುತ್ತದೆ.

‘ಚಾನ್ಸೇ ಇಲ್ಲ, ಭಾರತ ಟೆಸ್ಟ್ ಸರಣಿ ಗೆಲ್ಲಲ್ಲ’ ಕೊಹ್ಲಿ ಬಾಯ್ಸ್‌ಗೆ ಎನ್ಟಿನಿ ವಾರ್ನಿಂಗ್‌!

ಈ ಬಗ್ಗೆ ಪ್ರತಿಕ್ರಿಯಿಸಿ,”ಪ್ರತಿಯೊಂದು ತಂಡ 20 ವಿಕೆಟ್‌ಗಳನ್ನು ಪಡೆಯುವ ಕಡೆ ಗಮನ ಹರಿಸುತ್ತದೆ. ಈ ಹಾದಿಯಲ್ಲಿ ಮಾತ್ರ ನೀವು ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಭಾರತದಿಂದ ಹೊರಗೆ ಅಡಿದಾಗಲೆಲ್ಲಾ ನಾವು ಈ ತಂತ್ರವನ್ನು ಬಳಸಿಕೊಂಡು ಯಶಸ್ವಿಯಾಗಿದ್ದೇವೆ. ಐವರು ಬೌಲರ್‌ಗಳೊಂದಿಗೆ ನಿರ್ವಹಿಸುವುದರಿಂದ ವರ್ಕ್‌ಲೋಡ್‌ ಕೂಡ ಸ್ವಲ್ಪ ಸುಲಭವಾಗುತ್ತದೆ,” ಎಂದು ಕೆ.ಎಲ್‌ ರಾಹುಲ್‌ ಹೇಳಿದ್ದಾರೆ.

ಪೂಜಾರ, ರಹಾನೆಗೆ ಟೀಮ್ ಮ್ಯಾನೇಜ್‌ಮೆಂಟ್‌ ಬೆಂಬಲ ಅಗತ್ಯವಿದೆ: ಆಮ್ರೆ!



Read more