ತಿರುವನಂತಪುರ: ಮಲಯಾಳಂ ಸಿನಿಮಾರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್
ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ವಿಡಿಯೊ ಪ್ರಕಟಿಸಿದ್ದಾರೆ. ದೇಶದ ಸಿಡಿಎಸ್ ಬಿಪಿನ್ ರಾವತ್ ನಿಧನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮುಸ್ಲಿಂ ಸಮುದಾಯದವರು ಖುಷಿಯ ಕಮೆಂಟ್ಗಳನ್ನು ಮಾಡುತ್ತಿರುವುದನ್ನು ಖಂಡಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
‘ನಾನು ಮತ್ತು ನನ್ನ ಹೆಂಡತಿ ಹಿಂದೂ ಧರ್ಮಕ್ಕೆ ಮತಾಂತರ ಆಗುತ್ತೇವೆ. ಬಿಪಿನ್ ರಾವತ್ ಘಟನೆಯಿಂದ ನಮಗೆ ನೋವಾಗಿದೆ, ಇನ್ನು ಮುಂದೆ ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈ ಬಿಡುವುದಾಗಿ’ ಅವರು ತಿಳಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಅದು ಅವರ ಅಕೌಂಟ್ನಲ್ಲಿ ಕಾಣುತ್ತಿಲ್ಲ. ವಾಟ್ಸ್ಆ್ಯಪ್ಗಳಲ್ಲಿ ಆ ವಿಡಿಯೊ ಹರಿದಾಡುತ್ತಿದೆ. ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಅಲಿ ಅಕ್ಬರ್ ಆಗ್ರಹಿಸಿದ್ದಾರೆ.
ಅಲಿ ಅಕ್ಬರ್ ಮಾಡಿರುವ ಈ ಪೋಸ್ಟ್ಗೆ ಹಲವರು ಬೆಂಬಲ ಸೂಚಿಸಿದ್ದಾರೆ. ಮುಸ್ಲಿಂ ಸಮುದಾಯದ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಓದಿ: ಬರುವುದೆಲ್ಲ ಬರಲಿ, ಅದನ್ನು ಎದುರಿಸಬೇಕು, ಜೀವನ ಸಾಗಬೇಕು: ಸಮಂತಾ
ಅಲಿ ಅಕ್ಬರ್ ಅವರು 90ರ ದಶಕದಿಂದ ಮಲಯಾಳಂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿವೆ.
ಅಲಿ ಅಕ್ಬರ್ ಅವರು ಬಿಜೆಪಿಯ ರಾಜ್ಯ ಕಮಿಟಿಯ ಸದಸ್ಯರಾಗಿದ್ದರು. ನಾಯಕತ್ವದ ಬಗ್ಗೆ ಬೇಸರಗೊಂಡು ಆ ಹುದ್ದೆಯಿಂದ ಹಿಂದೆ ಸರಿದಿದ್ದರು.
ಓದಿ: ನಾಗ ಚೈತನ್ಯರಿಂದ ಬೇರೆಯಾದ ನಂತರ ಸಾಯುತ್ತೇನೆಂದು ಭಾವಿಸಿದ್ದೆ: ಸಮಂತಾ ಹೇಳಿಕೆ