ಹೈಲೈಟ್ಸ್:
- ಕನ್ನಡದ ಹಿರಿಯ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ
- ಅನಾರೋಗ್ಯದಿಂದ ನಿಧನರಾದ ಕೆ.ವಿ.ರಾಜು
- ಕೆ.ವಿ.ರಾಜು ನಿಧನಕ್ಕೆ ಕಂಬನಿ ಮಿಡಿದ ಜಗ್ಗೇಶ್
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ವಿ.ರಾಜು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೆ.ವಿ.ರಾಜು ಇವತ್ತು ಇಹಲೋಕ ತ್ಯಜಿಸಿದರು. ಕೆ.ವಿ.ರಾಜು ನಿಧನಕ್ಕೆ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ. ತನ್ನ ಗುರುವನ್ನು ಕಳೆದುಕೊಂಡ ನವರಸ ನಾಯಕ ಜಗ್ಗೇಶ್ ಕಣ್ಣೀರಿಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ
ಜಗ್ಗೇಶ್ ಟ್ವೀಟ್
ಕೆ.ವಿ.ರಾಜು ಅವರ ನಿಧನವಾರ್ತೆ ಕೇಳಿ ದುಃಖಿತರಾದ ಜಗ್ಗೇಶ್ ಟ್ವೀಟ್ ಮಾಡಿ, ‘’ನನಗೆ ಸಿನಿಮಾ ಜಗತ್ತಿಗೆ ಪರಿಚಯಿಸಿದ ಗುರುಗಳು ಕೆ.ವಿ.ಜಯರಾಮ್ ರವರ ಸಹೋದರ ಕೆ.ವಿ.ರಾಜು ರವರು. ನನ್ನ 2ನೇ ಗುರುಗಳು ಇಂದು ಕಾಲವಾದರು ಎಂದಾಗ ದುಃಖಿತನಾದೆ. ದೂರದ ಊರಿನಲ್ಲಿ ಚಿತ್ರೀಕರಣದಲ್ಲಿ ಇರುವ ಪ್ರಯುಕ್ತ ನೋಡಲಾಗದ ತ್ರಿಶಂಖು ಸ್ಥಿತಿ ನನ್ನದು. ನಿಮ್ಮ ಆಗಲಿಕೆಯ ದುಃಖವನ್ನು ಕುಟುಂಬ ಸಹಿಸುವ ಶಕ್ತಿ ರಾಯರು ನೀಡಲಿ. ಹೋಗಿಬನ್ನಿ ಗುರುಗಳೇ..’’ ಎಂದಿದ್ದಾರೆ.
ಹಿರಿಯ ನಿರ್ದೇಶಕ ಕೆ.ವಿ. ರಾಜು ಪುತ್ರ ಅಮೋಘ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ
ಕೆ.ವಿ.ರಾಜು ಅವರ ಸಿನಿಮಾಗಳು
ನವರಸ ನಾಯಕ ಜಗ್ಗೇಶ್ ಅಭಿನಯದ ‘ಬೊಂಬಾಟ್ ಹುಡ್ಗ’ ಸೇರಿದಂತೆ ‘ಹುಲಿಯಾ’, ‘ಬೆಳ್ಳಿ ಕಾಲುಂಗುರ’, ‘ನವಭಾರತ’, ‘ಇಂದ್ರಜಿತ್’ ‘ಪೋಲಿಸ್ ಲಾಕಪ್’, ‘ಅಭಿಜಿತ್’, ‘ಬೆಳ್ಳಿ ಮೋಡಗಳು’, ‘ಯುದ್ಧಕಾಂಡ’, ‘ರಾಷ್ಟ್ರಗೀತೆ’, ‘ಸುಂದರಕಾಂಡ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳನ್ನು ಕೆ.ವಿ.ರಾಜು ನಿರ್ದೇಶನ ಮಾಡಿದ್ದರು. ಕನ್ನಡ ಮಾತ್ರವಲ್ಲದೆ ಬಾಲಿವುಡ್‌ನಲ್ಲಿಯೂ ಕೆ.ವಿ.ರಾಜು ತಮ್ಮ ಛಾಪನ್ನು ಮೂಡಿಸಿದ್ದರು. ಹಿಂದಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ‘ಇಂದ್ರಜಿತ್’ ಚಿತ್ರಕ್ಕೆ ಕೆ.ವಿ.ರಾಜು ಆಕ್ಷನ್ ಕಟ್ ಹೇಳಿದ್ದರು.
ಕೆ.ವಿ.ರಾಜು ಕುರಿತು…
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಕೆ.ವಿ.ರಾಜು ಗುರುತಿಸಿಕೊಂಡಿದ್ದರು. 1982ರ ‘ಬಾಡದ ಹೂ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗುವ ಮೂಲಕ ಕೆ.ವಿ.ರಾಜು ಕನ್ನಡ ಚಿತ್ರರಂಗ ಪ್ರವೇಶಿಸಿದರು. 1984ರ ‘ಒಲವೇ ಬದುಕು’ ಮೂಲಕ ಕೆ.ವಿ.ರಾಜು ನಿರ್ದೇಶಕರಾದರು. ನಂತರ ‘ಸಂಗ್ರಾಮ’, ‘ಬಂಧ ಮುಕ್ತ’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೆ.ವಿ.ರಾಜು ನೀಡಿದರು. 2017ರಲ್ಲಿ ತೆರೆಗೆ ಬಂದಿದ್ದ ಕನ್ನಡದ ‘ಟೈಗರ್ ಗಲ್ಲಿ’ ಚಿತ್ರಕ್ಕೆ ಕೆ.ವಿ.ರಾಜು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದರು.
ಸ್ಯಾಂಡಲ್‌ವುಡ್‌ಗೆ ಕೆ.ವಿ.ರಾಜು ಪುತ್ರ ಅಮೋಘ್
ಕೆ.ವಿ.ರಾಜು ಅವರ ಪುತ್ರ ಅಮೋಘ್ ಇದೀಗ ‘ದಿ ಕಲರ್ ಆಫ್ ಟೊಮೆಟೊ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಕೆ.ವಿ.ರಾಜು ಅವರ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ನಿರ್ದೇಶಕ ತಾಯಿ ಲೋಕೇಶ್. ತಂದೆ ಕೆ.ವಿ.ರಾಜು ಅವರ ಸಲಹೆಯಂತೆ ಎನ್‌ಎಸ್‌ಡಿಯಲ್ಲಿ ರಂಗ ತರಬೇತಿಯನ್ನು ಪಡೆದುಕೊಂಡು ನಟನಾಗಲು ಅಮೋಘ್ ಸಕಲ ಸಿದ್ಧತೆ ಮಾಡಿಕೊಂಡಿದ್ದರು.