Karnataka news paper

ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಬಾಲಕಿ ಸೇರಿ ನಾಲ್ವರ ದುರ್ಮರಣ


ಹೈಲೈಟ್ಸ್‌:

  • ವಡೋದರದಲ್ಲಿನ ಮಕರ್ಪುರ ಪ್ರದೇಶದ ಕ್ಯಾಂಟಾನ್ ಲ್ಯಾಬೋರೇಟರೀಸ್
  • ಬೆಳಿಗ್ಗೆ 9.30-10 ಗಂಟೆ ಸುಮಾರಿಗೆ ಕಾರ್ಖಾನೆಯ ಬಾಯ್ಲರ್‌ ಸ್ಫೋಟ
  • ಸ್ಫೋಟದ ತೀವ್ರತೆಗೆ ಸಮೀಪ ಸಾಗುತ್ತಿದ್ದ ದಾರಿಹೋಕರಿಗೂ ಗಾಯ, ಸಾವು

ವಡೋದರ: ಗುಜರಾತ್‌ನ ವಡೋದರದಲ್ಲಿನ ಮಕರ್ಪುರ ಪ್ರದೇಶದಲ್ಲಿ ಇರುವ ಕೆಮಿಕಲ್ ಫ್ಯಾಕ್ಟರಿ ಒಂದರಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಜೀವ ಕಳೆದುಕೊಂಡಿದ್ದು, ಹನ್ನೊಂದು ಮಂದಿ ಗಾಯಗೊಂಡಿದ್ದಾರೆ.

ವಡ್ಸಾರ್ ರೈಲ್ವೆ ಓವರ್ ಬ್ರಿಡ್ಜ್ ಸಮೀಪದಲ್ಲಿ ಇರುವ ಕ್ಯಾಂಟಾನ್ ಲ್ಯಾಬೋರೇಟರೀಸ್ ಪ್ರೈ ಲಿ. ಘಟಕದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ತಮ್ಮ ಮನೆಗಳಲ್ಲಿಯೂ ಕಂಪನ ಉಂಟಾಯಿತು ಎಂದು ಸುತ್ತಮುತ್ತಲಿನ ಪ್ರದೇಶಗಳ ಜನರು ತಿಳಿಸಿದ್ದಾರೆ.
ಪಂಜಾಬ್‌ನ ನ್ಯಾಯಾಲಯದಲ್ಲಿ ಪ್ರಬಲ ಬಾಂಬ್‌ ಸ್ಟೋಟ, 2 ಸಾವು, ಹಲವರಿಗೆ ಗಾಯ
ವಡೋದರ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡಗಳು ಕೂಡಲೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತು. ಸ್ಫೋಟದಿಂದ ಸುಮಾರು ಹದಿನೈದು ಮಂದಿ ಗಾಯಗೊಂಡಿದ್ದರು. ಅವರಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದು, ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಲ್ಲಿ ನಾಲ್ಕು ವರ್ಷದ ಬಾಲಕಿ ಕೂಡ ಸೇರಿದ್ದಾಳೆ. 65 ವರ್ಷದ ವೃದ್ಧ, ಒಬ್ಬ ತರುಣ ಹಾಗೂ 30 ವರ್ಷದ ಮಹಿಳೆ ಮೃತಪಟ್ಟ ಇತರೆ ದುರ್ದೈವಿಗಳಾಗಿದ್ದಾರೆ.

ಮೃತರು ಮತ್ತು ಗಾಯಾಳುಗಳಲ್ಲಿ ಕಾರ್ಖಾನೆ ಒಳಗಿದ್ದವರು ಅಲ್ಲದೆ, ಅದರ ಸಮೀಪ ಸಾಗುತ್ತಿದ್ದವರೂ ಸೇರಿದ್ದಾರೆ. ನಾಲ್ವರು ವ್ಯಕ್ತಿಗಳು ಸ್ಪೋಟದಿಂದ ಬಂದ ಬೆಂಕಿಯಿಂದ ಸುಟ್ಟು ಅಥವಾ ತೀವ್ರತೆಗೆ ಗಾಳಿಯಲ್ಲಿ ಹಾರಿ ಬಂದು ಅಪ್ಪಳಿಸಿದ ವಸ್ತುಗಳಿಂದ ಮೃತಪಟ್ಟಿದ್ದಾರೆ. ಸ್ಫೋಟಕ್ಕೆ ಕಾರಣ ಏನು ಎಂಬ ಬಗ್ಗೆ ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳದಲ್ಲಿ ತನಿಖೆ ನಡೆಸುತ್ತಿದೆ ಎಂದು ಬಲೋಚ್ ತಿಳಿಸಿದ್ದಾರೆ.
ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಕನಿಷ್ಠ ಇಬ್ಬರ ಸಾವು, ಅನೇಕರಿಗೆ ಸುಟ್ಟ ಗಾಯ
ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಈ ಘಟನೆ ಸಂಭವಿಸಿರಬಹುದು ಎಂದು ಮಂಜಲ್ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್‌ಜೆ ಬಲೋಚ್ ಹೇಳಿದ್ದಾರೆ. ಈ ಲ್ಯಾಬೋರೇಟರಿಯು ಜಿಐಡಿಸಿ (ಗುಜರಾತ್ ಕೈಗಾರಿಕೆ ಅಭಿವೃದ್ಧಿ ನಿಗಮ) ಪ್ರದೇಶದಲ್ಲಿದೆ.



Read more