ಬೆಳಗಾವಿ (ಸುವರ್ಣ ವಿಧಾನಸೌಧ): ವಿರೋಧ ಪಕ್ಷ ಕಾಂಗ್ರೆಸ್ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವು ಮತಾಂತರ ನಿಷೇಧ ಮಸೂದೆಯನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದ್ದು, ಮುಂದಿನ ಅಧಿವೇಶನದಲ್ಲಿ ನಿರ್ಧರಿಸಿದೆ.
ಸಂಜೆ ಐದು ನಿಮಿಷಗಳ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪ ಮತ್ತೆ ಆರಂಭವಾಯಿತು. ಸಭಾಪತಿ ಕೊಠಡಿಯಲ್ಲಿ ನಡೆದ ತೀರ್ಮಾನದಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಮಸೂದೆ ಮಂಡನೆ ಕೈಬಿಟ್ಟಿರುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದರು. ಮುಂದಿನ ಅಧಿವೇಶನದಲ್ಲಿ ಮಂಡಿಸುವುದಾಗಿ ಘೋಷಿಸಿದರು.
ಇದಕ್ಕೂ ಮುನ್ನ, ಮಧ್ಯಾಹ್ನದ ವಿರಾಮದ ಬಳಿಕ ಕಲಾಪ 3 ಗಂಟೆಗೆ ಮುಂದೂಡಲಾಗಿತ್ತು. 4 ಗಂಟೆಯಾದರೂ ಕೋರಂ ಬೆಲ್ ಹಾಕಿರಲಿಲ್ಲ.
ಮತಾಂತರ ನಿಷೇಧ ಮಸೂದೆ ಅಂಗೀಕಾರಕ್ಕೆ ಬೆಂಬಲದ ಕೊರತೆ ಇರುವುದರಿಂದ ವಿಧಾನ ಪರಿಷತ್ ಕಲಾಪ ಆರಂಭಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಗೆ ಸದಸ್ಯ ಬಲದ ಕೊರತೆ ಇದೆ. ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ಕೆಲವು ಸದಸ್ಯರು ಬೆಳಗಾವಿಯಿಂದ ಹೊರಟು ಹೋಗಿದ್ದರು. ಹಾಗಾಗಿ, ಅವರಿಗೆ ವಾಪಸ್ ಸುವರ್ಣ ವಿಧಾನಸೌಧಕ್ಕೆ ಹಿಂದಿರುಗುವಂತೆ ಆಡಳಿತ ಪಕ್ಷದಿಂದ ತುರ್ತು ಸಂದೇಶ ರವಾನಿಸಲಾಗಿತ್ತು.
ನೂರಾರು ಕಿಲೋಮೀಟರ್ ದೂರ ತಲುಪಿರುವ ಅವರಿಗಾಗಿ ಕಾದು ಕುಳಿತಿದ್ದರು. 3.45ರ ಸುಮಾರಿಗೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಆಡಳಿತ ಪಕ್ಷದ ಹಲವರು ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಯಲ್ಲಿ ಸೇರಿದ್ದರು.
ಅಷ್ಟರಲ್ಲಿ ಸಭಾಪತಿ ಕೊಠಡಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಕಲಾಪ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಯವರ ಕೊಠಡಿಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಅಷ್ಟರಲ್ಲಿ ಕೋರಂ ಬೆಲ್ ಹಾಕಲಾಯಿತು.