ಬೆಳಗಾವಿ (ಸುವರ್ಣ ವಿಧಾನಸೌಧ): ‘ಸೋಮಣ್ಣ ನಮ್ಮ ಗರಡಿಗೆ ಮತ್ತೆ ವಾಪಸ್ ಆಗಲಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಉತ್ತರ ಕರ್ನಾಟಕ ಸಮಸ್ಯೆ ಕುರಿತು ವಿಧಾನಸಭೆಯಲ್ಲಿ ಒಂದು ಗಂಟೆ ಮಾತನಾಡಿದ ಸಿದ್ದರಾಮಯ್ಯ ಇನ್ನೂ ಎರಡು ಗಂಟೆ ಮಾತನಾಡುವುದಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ವಸತಿ ಸಚಿವ ವಿ. ಸೋಮಣ್ಣ, ‘ಮಧ್ಯಾಹ್ನ 2ಗಂಟೆಗೆ ಮುಗಿಸುತ್ತೇನೆ ಎಂದು ಇಡೀ ಸದನದ ಮುಂದೆ ನೀವು ಹೇಳಿದ್ದೀರಿ. ಇನ್ನೂ ಸಮಯ ಬೇಕು ಎಂದರೆ ಹೇಗೆ? ಹಿಂದೆಲ್ಲ ನೀವು ಮಾತನಾಡುತ್ತೀರಾ ಎಂದರೆ ಎಲ್ಲಿದ್ದರೂ ಬಂದು ಭಾಷಣ ಕೇಳುತ್ತಿದ್ದೇವು. ಆಗ ಸಾದಾಸೀದಾ ಇದ್ದ ನೀವು ಈಗ ಬದಲಾಗಿದ್ದೀರಿ. ನಿಮ್ಮ ಭಾಷಣದಲ್ಲಿ ಮೊದಲ ಸ್ವಾರಸ್ಯ ಇಲ್ಲ. ಹೇಳಿದ್ದನ್ನೇ ತಿರುಗಾಮುರುಗಾ ಹೇಳುತ್ತೀರಿ. ಕೃಷ್ಣಾ ಭಾಗ್ಯ ಎಂದು ಎಷ್ಟು ಸಾರಿ ಹೇಳಿದ್ದೀರಿ. ಬೇಗ ಮುಗಿಸಿ ಬಿಡಿ’ ಎಂದರು.
ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಉತ್ತರ ಕರ್ನಾಟಕ ಭಾಗದ ಶಾಸಕ ನಾನು. ಕೃಷ್ಣಾ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಇನ್ನೂ ಮಹದಾಯಿ, ಸಿಂಗಟಾಲೂರು ಮಾತ್ರವಲ್ಲದೇ ಈ ಭಾಗ ಹಿಂದುಳಿದಿರುವ ಬಗ್ಗೆ ಮಾತನಾಡಬೇಕಿದೆ. ಮೂರು ಗಂಟೆ ಬೇಕು’ ಎಂದರು.
‘ಈಗ ಉತ್ತರ ಕರ್ನಾಟಕದ ಭಾಗದ ಶಾಸಕರು ಹೌದು. ಆದರೆ, ಮುಂದೆ ನೀವು ಎಲ್ಲಿ ಹೋಗುತ್ತೀರಿ; ಅದಕ್ಕೆ ಏನು ಸಿದ್ಧತೆ ಮಾಡುತ್ತಿದ್ದೀರಿ. ನಿಮ್ಮ ಮುಂದಿನ ದಾರಿ ಏನು ಎಂಬುದೆಲ್ಲ ನಿಮ್ಮ ಗರಡಿಯಲ್ಲೇ 30 ವರ್ಷ ಪಳಗಿದ ನನಗೆ ಗೊತ್ತಿದೆ. ಅದನ್ನೆಲ್ಲ ಈಗ ಹೇಳುವುದಿಲ್ಲ’ ಎಂದು ಸೋಮಣ್ಣ ಹೇಳಿದರು.
ಆಗ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಏಯ್ ಸೋಮಣ್ಣ, ನೀನು ಮತ್ತೆ ನಮ್ಮ ಗರಡಿಗೆ ವಾಪಸ್ ಆಗ್ತಾ ಇದ್ದೀಯಲ್ಲ. ಆಯ್ತು ಆಯ್ತು ಕುತ್ಕೊ’ ಎಂದು ಹೇಳಿ ಸುಮ್ಮನಾದರು.