Karnataka news paper

ಎಚ್‌-1ಬಿ, ಎಲ್‌-1 ವೀಸಾಗಳಿಗೆ ಖುದ್ದು ಹಾಜರಿ ಸಂದರ್ಶನ ಬೇಕಿಲ್ಲ: ಅಮೆರಿಕ ನಿರ್ಧಾರ


ಹೈಲೈಟ್ಸ್‌:

  • ಅಮೆರಿಕದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ನಿರ್ಧಾರ
  • ವಿವಿಧ ವರ್ಗಗಳ ವೀಸಾಗಳಿಗೆ ಖುದ್ದು ಸಂದರ್ಶನದಿಂದ ವಿನಾಯಿತಿ ಘೋಷಣೆ
  • ಎಚ್‌-1ಬಿ, ಎಲ್‌-1, ಓ-1 ಉದ್ಯೋಗ ವೀಸಾಗಳಿಗೆ ಸಂದರ್ಶನ ಬೇಕಿಲ್ಲ
  • ಪಿ ವೀಸಾ, ಕ್ಯೂ ವೀಸಾ, ಎಚ್‌-2, ಎಚ್‌-3 ವೀಸಾಗಳಿಗೂ ವಿನಾಯಿತಿ

ವಾಷಿಂಗ್ಟನ್: ಕೋವಿಡ್ 19 ಪ್ರಕರಣಗಳ ಏರಿಕೆಯ ಕಳವಳದ ನಡುವೆ ಅಮೆರಿಕ ತನ್ನ ಉದ್ಯೋಗ ವೀಸಾ ವರ್ಗಗಳಾದ ಎಚ್‌-1ಬಿ, ಎಲ್‌-1 ಮತ್ತು ಒ-1ಗಳನ್ನು ಒದಗಿಸಲು ಅಗತ್ಯವಾದ ಖುದ್ದು ಹಾಜರಿ ಸಂದರ್ಶನಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ.

ಕೋವಿಡ್ 19 ಸಾಂಕ್ರಾಮಿಕವು ಮೂರನೇ ವರ್ಷವೂ ಮುಂದುವರಿದಿರುವುದರಿಂದ ವೀಸಾ ವಿತರಣೆಯನ್ನು ಸುಗಮಗೊಳಿಸಲು 2022ರಲ್ಲಿ ಕೆಲವು ಉದ್ಯೋಗ ವೀಸಾ ವರ್ಗಗಳಿಗೆ ಅಗತ್ಯವಾಗಿರುವ ಖುದ್ದು ಸಂದರ್ಶನ ನಿಯಮವನ್ನು ತಾತ್ಕಾಲಿಕವಾಗಿ ಕೈಬಿಡಲು ವಿದೇಶಾಂಗ ಇಲಾಖೆ ನಿರ್ಧರಿಸಿದೆ ಎಂದು ಇಲಾಖೆ ತಿಳಿಸಿದೆ.
2021ರಲ್ಲಿ ಎಚ್‌-1ಬಿ ವೀಸಾ ಅನುಮೋದನೆ ಪ್ರಮಾಣ ದಾಖಲೆಯ 97%ಗೆ ಏರಿಕೆ!
H-1B, L-1 ಮತ್ತು O-1 ವೀಸಾಗಳಿಗೆ ವಿದೇಶಗಳಿಂದ ಅರ್ಜಿ ಸಲ್ಲಿಸುವ ಅರ್ಜಿದಾರರು ಅಮೆರಿಕ ಕಾನ್ಸುಲೇಟ್‌ನಲ್ಲಿ ಖುದ್ದು ಸಂದರ್ಶನಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ. ವೀಸಾ ನೀಡುವ ಮೊದಲು ಕೊನೆಯ ಹಂತವಾಗಿ ಸಂದರ್ಶನ ಕಡ್ಡಾಯವಾಗಿ ನಡೆಯುತ್ತದೆ. ಕಂಪೆನಿಗಳು ವಿದೇಶಗಳಿಂದ ಅತ್ಯಧಿಕ ಕೌಶಲವುಳ್ಳ ಪ್ರತಿಭೆಗಳನ್ನು ಆಕರ್ಷಿಸಲು ಆ ವರ್ಗಗಳು ಅತಿ ಹೆಚ್ಚು ಪ್ರತಿನಿಧಿಸುವ ಮಾದರಿಯ ವೀಸಾಗಳಾಗಿವೆ.

2022ರ ಡಿಸೆಂಬರ್ 31ರವರೆಗೆ ವಲಸೆಯೇತರ ಉದ್ಯೋಗ ವೀಸಾಗಳು ಮತ್ತು ಅವರ ಅರ್ಹತಾ ಮಾನದಂಡಗಳ ಆಧಾರದಲ್ಲಿ ನಿರ್ದಿಷ್ಟ ವ್ಯಕ್ತಿಗಳಿಗೆ ಖುದ್ದು ಹಾಜರಾತಿ ಸಂದರ್ಶನದಿಂದ ವಿನಾಯಿತಿ ನೀಡುವಂತೆ ಕಾನ್ಸುಲರ್ ಕಚೇರಿಗಳಿಗೆ ತಾತ್ಕಾಲಿಕ ಅಧಿಕಾರ ನೀಡಲಾಗಿದೆ. ಇದರಲ್ಲಿ ವಿಶೇಷ ವೃತ್ತಿಗಳ ವ್ಯಕ್ತಿಗಳು (ಎಚ್‌-1ಬಿ ವೀಸಾಗಳು), ಟ್ರೈನಿ ಅಥವಾ ವಿಶೇಷ ಶಿಕ್ಷಣ ಸಂದರ್ಶಕರು (ಎಚ್‌-3 ವೀಸಾಗಳು), ಅಂತರ್‌ಸಂಸ್ಥೆ ವರ್ಗಾವಣೆಯಾದವರು (ಎಲ್ ವೀಸಾಗಳು), ಅಸಾಧಾರಣ ಸಾಮರ್ಥ್ಯದ ವ್ಯಕ್ತಿಗಳು ಅಥವಾ ಸಾಧಕರು (ಓ ವೀಸಾಗಳು), ಅಥ್ಲೆಟ್ಸ್, ಕಲಾವಿದರು ಮತ್ತು ಉದ್ಯಮಿಗಳಿಗೆ (ಪಿ- ವೀಸಾಗಳು) ಹಾಗೂ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು (ಕ್ಯೂ ವೀಸಾಗಳು) ಈ ಸಂದರ್ಶನ ವಿನಾಯಿತಿಯನ್ನು ಪಡೆಯಲಿರುವ ವೀಸಾ ವರ್ಗಗಳಾಗಿವೆ.
ಅಮೆರಿಕ ಬದಲು ಕೆನಡಾಕ್ಕೆ ಭಾರತೀಯರ ಪ್ರತಿಭಾ ಪಲಾಯನ: ಅಮೆರಿಕನ್ ತಜ್ಞರ ವರದಿ
ಇದಲ್ಲದೆ, ಇನ್ನು ಕೆಲವು ವರ್ಗಗಳಿಗೆ ಖುದ್ದು ಹಾಜರಿ ಸಂದರ್ಶನದ ವಿನಾಯಿತಿ ನೀಡುವ ಕಾನ್ಸುಲರ್ ಅಧಿಕಾರಿಗಳ ಅಧಿಕಾರವನ್ನು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ 2022ರ ಡಿಸೆಂಬರ್ 31ರವರೆಗೆ ವಿಸ್ತರಿಸಿದ್ದಾರೆ. ತಾತ್ಕಾಲಿಕ ಕೃಷಿ ಮತ್ತು ಕೃಷಿಯೇತರ ಉದ್ಯೋಗಿಗಳು (ಎಚ್‌-2 ವೀಸಾ), ವಿದ್ಯಾರ್ಥಿಗಳು (ಎಫ್‌ ಮತ್ತು ಎಂ ವೀಸಾಗಳು) ಮತ್ತು ವಿದ್ಯಾರ್ಥಿ ವಿನಿಮಯ ಸಂದರ್ಶಕರು (ಅಕಾಡೆಮಿಕ್ ಜೆ ವೀಸಾಗಳು) ಈ ವರ್ಗಕ್ಕೆ ಸೇರುತ್ತವೆ.



Read more