ಹೈಲೈಟ್ಸ್:
- ‘ಗೀತಾ’ ಧಾರಾವಾಹಿ ನಟಿ ಶರ್ಮಿತಾ ಗೌಡ ಸಂದರ್ಶನ
- ನಿಜ ಜೀವನದಲ್ಲಿ ಯಾರೊಂದಿಗೂ ಶರ್ಮಿತಾ ಗೌಡ ಜಗಳವಾಡುವುದಿಲ್ಲವಂತೆ!
- ನ್ಯೂಟ್ರಿಷನಿಸ್ಟ್ ಆಗಿರುವ ಶರ್ಮಿತಾ ಗೌಡ
ಸದಾ ವ್ಯಂಗ್ಯವಾಡುವ, ಏನಾದರೂ ಪಿತೂರಿ ಮಾಡುತ್ತಲೇ ಇರುವ, ಒಳಗೊಂದು, ಹೊರಗೊಂದು ಸ್ವಭಾವದ ಅತ್ತೆ ಬೇಡವೇ ಬೇಡ ಎಂಬುದು ಎಲ್ಲಾ ಸೊಸೆಯರ ದೂರು. ಆದರೂ ಅತ್ತೆಯಿಂದ ಹಿಡಿದು ಸೊಸೆ, ಮಕ್ಕಳು, ಮೊಮ್ಮಕ್ಕಳಿಗೂ ಇಷ್ಟವಾಗುವ ಭಾನುಮತಿ ಅಲಿಯಾಸ್ ಶರ್ಮಿತಾ ಗೌಡ ಇದೀಗ ಕಿರುತೆರೆಯ ಸ್ಟೈಲಿಶ್ ವಿಲನ್. ಇವರು ಎದುರಾದರೆ ಸಾಕು ಜನ ಹಿಡಿಶಾಪ ಹಾಕುತ್ತಾರೆ. ಮರುಕ್ಷಣ ಅವರ ನೋಟಕ್ಕೆ ಮರುಳಾಗುತ್ತಾರೆ. ಅತ್ತೆ ಅಂದರೆ ಹೀಗೆ ಸ್ಟೈಲಿಶ್ ಆಗಿರಬೇಕು ಎನ್ನುವ ಫ್ಯಾಷನ್ ಸ್ಫೂರ್ತಿಯ ಸೆಲೆ ಶರ್ಮಿತಾ.
ಚಿಕ್ಕಮಗಳೂರು ಮೂಲದ ಇವರು ಕೆಲವು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಸೈ ಎನಿಸಿಕೊಂಡಿರುವವರು. ಮಾಡೆಲಿಂಗ್, ಆರೋಗ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಫಿಟ್‌ನೆಸ್ ಸೆಂಟರ್ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ನ್ಯೂಟ್ರಿಷನಿಸ್ಟ್ ಕೂಡ ಹೌದು. ನಾನಾ ಭಾಷೆಗಳ ಧಾರಾವಾಹಿಗಳ ಜತೆಗೆ ‘ಆಮ್ಲೆಟ್’, ‘ಸೀತಾಯಣ’, ‘ಫ್ಯಾಮಿಲಿ ಪ್ಯಾಕ್’ ಮತ್ತಿತರ ಕನ್ನಡ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಇವರನ್ನು ಸಾಕಷ್ಟು ಅವಕಾಶಗಳು ಅರಸಿ ಬರುತ್ತಿವೆ. ಶರ್ಮಿತಾ ಗೌಡ ಅವರು ತಮ್ಮ ನಟನೆಯ ಜರ್ನಿ ಬಗ್ಗೆ ಲವಲವಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
‘ಗೀತಾ’ ಧಾರಾವಾಹಿ ಮೂಲಕ ಸ್ಟೈಲಿಶ್ ವಿಲನ್ ಎನಿಸಿಕೊಂಡಿದ್ದೀರಿ. ಹೇಗಿತ್ತು ಈ ಜರ್ನಿ?
ನಾನು ಮುಂಚಿನಿಂದಲೂ ವಿಲನ್ ಪಾತ್ರಗಳನ್ನೇ ಮಾಡುತ್ತಿದ್ದೇನೆ. ಮೊದಮೊದಲು ಖಳನಾಯಕಿಯ ರಾಕ್ಷಸ ಗುಣಗಳನ್ನು ಮೇಕಪ್, ನೋಟ, ಮಾತುಗಳಲ್ಲೇ ಬಿಂಬಿಸಿ ಆ ಪಾತ್ರವನ್ನು ವೈಭವೀಕರಿಸಲಾಗುತ್ತಿತ್ತು. ಆದರೆ ಈಗ ಟ್ರೆಂಡ್ ಬದಲಾಗಿದೆ. ಮೊದಲಿನಿಂದಲೂ ವಿಲನ್ ಕೂಡ ಸ್ಟೈಲಿಶ್ ಆಗಿದ್ದರೆ ಚಂದ ಎನಿಸುತ್ತಿತ್ತು. ಈ ಬಗ್ಗೆ ಸಾಕಷ್ಟು ಧಾರಾವಾಹಿ ತಂಡಗಳ ಜತೆ ವಾದ ವಿವಾದಗಳು ನಡೆದಿವೆ. ಆದರೆ ಯಾರೂ ನನ್ನ ಮಾತನ್ನು ತೆಗೆದು ಹಾಕಿಲ್ಲ. ಸರಳ ಹಾಗೂ ಸುಂದರವಾಗಿ ನನ್ನನ್ನು ನಾನು ಕ್ಯಾರಿ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಇರಬಹುದು, ಇಂದು ಜನ ನನ್ನ ಸೀರೆ, ಬ್ಲೌಸ್ ಅಥವಾ ಮೇಕಪ್ ಫಾಲೋ ಮಾಡಲು ಬಯಸುತ್ತಾರೆ.
ಮುದ್ದು ರಾಕ್ಷಸಿಯಾ ನೀವು?
ಹಲವರು ನನ್ನನ್ನು ಹಾಗೆ ಕರೆಯುತ್ತಾರೆ. ‘ಗೀತಾ’ ಧಾರಾವಾಹಿಯ ಅತ್ತೆ ಆಡುವ ಮಾತು, ತೆಗೆದುಕೊಳ್ಳುವ ನಿರ್ಧಾರಗಳನ್ನು ದ್ವೇಷಿಸುವವರು, ಕೋಪಿಸಿಕೊಳ್ಳುವವರು ನನ್ನ ಮುಖ, ಲುಕ್ ನೋಡಿ ಕೋಪ ಬಂದರೂ ಬಹುಬೇಗ ಇಳಿದು ಹೋಗುತ್ತದೆ ಎನ್ನುತ್ತಾರೆ. ಜನ ಬೈದಾಗಲೆಲ್ಲ ಒಮ್ಮೊಮ್ಮೆ ಬೇಸರವಾದರೂ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎನ್ನುವ ನೆಮ್ಮದಿ ಇದೆ.
ನಿಮ್ಮ ವ್ಯಕ್ತಿತ್ವಕ್ಕೂ ಧಾರಾವಾಹಿ ಪಾತ್ರಕ್ಕೂ ಹೋಲಿಕೆ ಇದೆಯೇ?
ವಿರುದ್ಧ ವ್ಯಕ್ತಿತ್ವ. ನಾನು ಯಾರೊಂದಿಗೂ ಜಗಳವಾಡುವುದಿಲ್ಲ. ಸಿಟ್ಟು, ಬೇಸರ ಈ ಎಲ್ಲಾ ಸಂಗತಿಗಳಿಂದ ದೂರವೇ ಇರುತ್ತೇನೆ. ಎಷ್ಟೋ ಸಲ ತೆರೆಯ ಮೇಲೆ ನನ್ನ ನೋಡಿ, ‘ಛೇ ಹೀಗೆಲ್ಲ ವ್ಯಕ್ತಿತ್ವ ಇದೆಯೇ’ ಅನಿಸುತ್ತದೆ. ಶೂಟಿಂಗ್ ಸಮಯದಲ್ಲೂ ನಾನು ಹೊಡೆಯುವ ಪ್ರಸಂಗ ಬಂದಾಗ, ವ್ಯಂಗ್ಯದ ಮಾತುಗಳನ್ನಾಡುವಾಗ ಇತರೇ ಕಲಾವಿದರಲ್ಲಿ ಕ್ಷಮೆ ಕೇಳುತ್ತೇನೆ.
ಕಲಾವಿದರ ನಡುವೆ ಎದುರಾಗುವ ಭಾಷೆಯ ಗಡಿಯ ಬಗ್ಗೆ ಏನು ಹೇಳುತ್ತೀರಿ?
ನಮ್ಮ ಭಾಷೆಯನ್ನು ನಾವು ಮೊದಲು ಪ್ರೀತಿಸಬೇಕು, ಗೌರವಿಸಬೇಕು. ಆದರೆ ಕಲೆ ಎಂಬ ಸಂಗತಿ ಬಂದಾಗ ಅಲ್ಲಿ ಭಾಷೆ, ರಾಜ್ಯದ ಗಡಿ ಬೇಡ. ನಮ್ಮೊಳಗಿನ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆಗಾಗಿ ಹುಡುಕಾಟ, ಪರಿಶ್ರಮ ಪಡುವುದರಲ್ಲಿ ತಪ್ಪೇನೂ ಇಲ್ಲ.
ಒಂದೇ ಬಾರಿಗೆ ಹಲವು ಪ್ರಾಜೆಕ್ಟ್‌ಗಳ ನಡುವಿನ ಓಡಾಟ ಒತ್ತಡದಾಯಕವಾ?
ಇತ್ತೀಚೆಗೆ ಬಹುತೇಕ ಕಲಾವಿದರು ಒಂದೇ ಸಲ ಹಲವು ಭಾಷೆ ಅಥವಾ ಹಿರಿತೆರೆ, ಕಿರುತೆರೆಗಳಲ್ಲಿ ಗುರುತಿಸಿಕೊಳ್ಳುತ್ತಾರೆ. ಹಲವು ಪ್ರಾಜೆಕ್ಟ್‌ಗಳನ್ನು ಒಟ್ಟಿಗೆ ಒಪ್ಪಿಕೊಳ್ಳುವುದು ವೈಯಕ್ತಿಕ ವಿಚಾರ. ಕಲಾವಿದರ ಆರ್ಥಿಕ ಅಗತ್ಯವೂ ಇರಬಹುದು. ಆದರೆ ಪ್ರತಿ ಪ್ರಾಜೆಕ್ಟ್‌ಗೂ ಅದರದೇ ಆದ ಸಮಯ, ಶ್ರದ್ಧೆ ನೀಡಬೇಕು. ಈ ನಿಟ್ಟಿನಲ್ಲಿ ಕಲಾವಿದರು ಪ್ರತಿ ಪ್ರಾಜೆಕ್ಟ್‌ಗೂ ಪ್ರಾಮುಖ್ಯ ನೀಡಬೇಕು.