Karnataka news paper

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ಅಮೆರಿಕ ಬೆನ್ನಲ್ಲೇ ಆಸ್ಟ್ರೇಲಿಯಾದಿಂದಲೂ ರಾಜತಾಂತ್ರಿಕ ಬಹಿಷ್ಕಾರ!


Source : AFP

ಸಿಡ್ನಿ: ಬೀಜಿಂಗ್ ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಅಮೆರಿಕ ಬೆನ್ನಲ್ಲೇ ಆಸ್ಟ್ರೇಲಿಯಾ ಕೂಡ ಕ್ರೀಡಾಕೂಟಕ್ಕೆ ರಾಜತಾಂತ್ರಿಕ ಬಹಿಷ್ಕಾರ ಹೇರಿದೆ.

ಈ ಬಗ್ಗೆ ಸ್ವತಃ ಆಸ್ಚ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಮಾಹಿತಿ ನೀಡಿದ್ದು, ‘ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯಾ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಅಮೆರಿಕ ನಿಲುವಿಗೆ ಆಸ್ಟ್ರೇಲಿಯಾ ಕೂಡ ಬೆಂಬಲ ನೀಡಿದಂತಾಗಿದೆ.

‘ಕ್ಯಾನ್‌ಬೆರಾ ನಿರ್ಧಾರವು ಆಸ್ಟ್ರೇಲಿಯಾದ ವಿದೇಶಿ ಹಸ್ತಕ್ಷೇಪ ಕಾನೂನುಗಳಿಂದ ಹಿಡಿದು ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಇತ್ತೀಚಿನ ನಿರ್ಧಾರದವರೆಗೆ ಹಲವಾರು ಸಮಸ್ಯೆಗಳ ಕುರಿತು ಚೀನಾದೊಂದಿಗೆ “ಭಿನ್ನಾಭಿಪ್ರಾಯ”ದ ನಡುವೆ ಬಂದಿದೆ ಎಂದು ಮಾರಿಸನ್ ಹೇಳಿದ್ದು, ಅಲ್ಲದೆ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

“ಆಸ್ಟ್ರೇಲಿಯಾ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಯಾವುದೇ ವಿಚಾರದಲ್ಲಿ ತಾವು ಹಿಂದೆ ಸರಿಯುವುದಿಲ್ಲ ಮತ್ತು ನಿಸ್ಸಂಶಯವಾಗಿ ನಾವು ಆ ಕ್ರೀಡಾಕೂಟಗಳಿಗೆ ಆಸ್ಟ್ರೇಲಿಯಾದ ಅಧಿಕಾರಿಗಳನ್ನು ಕಳುಹಿಸದಿರುವುದು ಆಶ್ಚರ್ಯವೇನಿಲ್ಲ” ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

‘ಶ್ರೇಷ್ಠ ಕ್ರೀಡಾ ರಾಷ್ಟ್ರ’
ಇದೇ ವೇಳೆ “ಆಸ್ಟ್ರೇಲಿಯಾ ಒಂದು ಶ್ರೇಷ್ಠ ಕ್ರೀಡಾ ರಾಷ್ಟ್ರವಾಗಿದೆ ಮತ್ತು ನಾನು ಕ್ರೀಡೆಯ ಸಮಸ್ಯೆಗಳನ್ನು ಮತ್ತು ಈ ಇತರ ರಾಜಕೀಯ ಸಮಸ್ಯೆಗಳನ್ನು ಪ್ರತ್ಯೇಕಿಸುತ್ತೇನೆ. ಅವು ಎರಡು ಸರ್ಕಾರಗಳ ನಡುವಿನ ಸಮಸ್ಯೆಗಳು. ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ನಾನು ಬಯಸುತ್ತೇನೆ ಎಂದು ಮಾರಿಸನ್ ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ, ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಮ್ಯಾಟ್ ಕ್ಯಾರೊಲ್, AOC ಸರ್ಕಾರದ ನಿರ್ಧಾರವನ್ನು ಗೌರವಿಸುತ್ತದೆ. ಇದು ಆಸ್ಟ್ರೇಲಿಯಾ ತಂಡದ ಸಿದ್ಧತೆಗಳ ಮೇಲೆ ಪರಿಣಾಮ ಬೀರುವುದಿಲ್ಲ.  ನಮ್ಮ ಕ್ರೀಡಾಪಟುಗಳು ಸಾಗರೋತ್ತರ ಸ್ಥಳಗಳಿಂದ ನಿರ್ಗಮಿಸುವುದರೊಂದಿಗೆ, ಕೋವಿಡ್ ಪರಿಸರದ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ತಂಡದ ಸದಸ್ಯರು ಸುರಕ್ಷಿತವಾಗಿ ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು AOC ಹೆಚ್ಚು ಗಮನಹರಿಸಿದೆ ಎಂದು ಹೇಳಿದ್ದಾರೆ.

ಅಂತೆಯೇ “ಕ್ರೀಡಾಪಟುಗಳನ್ನು ಸುರಕ್ಷಿತವಾಗಿ ಬೀಜಿಂಗ್‌ಗೆ ತಲುಪಿಸುವುದು, ಸುರಕ್ಷಿತವಾಗಿ ಸ್ಪರ್ಧಿಸುವುದು ಮತ್ತು ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರುವುದು ನಮ್ಮ ದೊಡ್ಡ ಸವಾಲಾಗಿ ಉಳಿದಿದೆ ಎಂದು  ಹೇಳಿದ್ದಾರೆ.
 



Read more

Leave a Reply

Your email address will not be published. Required fields are marked *