PTI
ಲಖನೌ: ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಪುಸ್ತಕದಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹಿಂದೂ ಧರ್ಮವನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಹಾಗೂ ಬೊಕೋ ಹರಾಮ್ ಗೆ ಹೋಲಿಕೆ ಮಾಡಿ ವಿವಾದಕ್ಕೀಡಾಗಿದ್ದರು. ಈಗ ಇದೇ ವಿಷಯವಾಗಿ ಖುರ್ಷಿದ್ ಗೆ ಸಂಕಷ್ಟ ಎದುರಾಗಿದೆ.
ಸನಾತನ ಹಿಂದೂ ಧರ್ಮವನ್ನು ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಲಖನೌ ಕೋರ್ಟ್ ಬುಧವಾರದಂದು ಆದೇಶ ನೀಡಿದೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಂತನು ತ್ಯಾಗಿ ಎಫ್ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.
ಕಾನೂನಿನ ಸೂಕ್ತ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ಕೋರ್ಟ್ ತನ್ನ ಆದೇಶದ್ಲಲಿ ತಿಳಿಸಿದ್ದು ಮೂರು ದಿನಗಳಲ್ಲಿ ಎಫ್ಐಆರ್ ಪ್ರತಿಯನ್ನು ಕೋರ್ಟ್ ಗೆ ಹಾಜರುಪಡಿಸಬೇಕೆಂದು ಹೇಳಿದೆ.
ಪುಸ್ತಕದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಶುಭಾಂಗಿ ತಿವಾರಿ ಎಂಬುವವರು ಸೆಕ್ಷನ್ 156 (3) ಸಿಆರ್ ಪಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ.