Karnataka news paper

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ​115 ಹಳ್ಳಿಗಳಲ್ಲಿ ಕೊಳವೆ ಬಾವಿ ನೀರು ಬಳಕೆಗೆ ಯೋಗ್ಯವಲ್ಲ..!


ಹೈಲೈಟ್ಸ್‌:

  • ಕುಡಿಯುವ ನೀರಿನಲ್ಲಿ ಫ್ಲೋರೈಡ್‌, ನೈಟ್ರೇಟ್‌ ಪತ್ತೆ
  • ಶುದ್ಧ ಘಟಕದ ನೀರು ಬಳಕೆಗೆ ಅಧಿಕಾರಿಗಳ ಸೂಚನೆ
  • ಬೋರ್‌ವೆಲ್‌ ನೀರು ಕುಡಿಯದಂತೆ ಸರಕಾರದಿಂದ ಎಚ್ಚರಿಕೆ

ವೆಂಕಟರಾಜು ಎಸ್‌.
ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):
ತಾಲೂಕಿನ ಸಾಸಲು, ಭಕ್ತರ ಹಳ್ಳಿ, ದೊಡ್ಡ ಬೆಳವಂಗಲ, ದೊಡ್ಡ ತುಮಕೂರು, ಹುಲಿಕುಂಟೆ, ಸಕ್ಕರೆ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ 115 ಹಳ್ಳಿಗಳಲ್ಲಿ ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದೆ. ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀಡಿರುವ ವರದಿಯಲ್ಲಿ, ವಿಷಕಾರಿ ಫ್ಲೋರೈಡ್‌ ಹಾಗೂ ನೈಟ್ರೈಟ್‌ ಅಂಶ ನೀರಿನಲ್ಲಿ ಪತ್ತೆಯಾಗಿದೆ.

ತಾಲೂಕಿನ ವಿವಿಧ ಹಳ್ಳಿಗಳಲ್ಲಿನ ಬೋರ್‌ವೆಲ್‌ ಹಾಗೂ ಕುಡಿವ ನೀರನ್ನು ಲ್ಯಾಬ್‌ಗಳಲ್ಲಿ ಪರಿಶೀಲಿಸಿದಾಗ ನೀರಿನಲ್ಲಿ ವಿಷಕಾರಿ ಫ್ಲೋರೈಡ್‌ ಹಾಗೂ ನೈಟ್ರೈಟ್‌ ಅಂಶ ಪತ್ತೆಯಾಗಿದೆ.

ಬಳಸದಂತೆ ಸುತ್ತೋಲೆ: ತಾಲೂಕಿನ 115 ಗ್ರಾಮಗಳ ಹಳ್ಳಿಗಳಲ್ಲಿ ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದೆ. ಕೊಳವೆ ಬಾವಿಗಳ ನೀರು ಕುಡಿಯಲು ಮತ್ತು ಬಳಕೆಗೆ ಯೋಗ್ಯವಲ್ಲ ಎಂದು ಜಿಲ್ಲಾ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ‍್ಯಪಾಲಕ ಎಂಜಿನಿಯರ್‌ ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸುತ್ತೋಲೆ ನೀಡಿದ್ದು, ಗ್ರಾಮಸ್ಥರು ಶುದ್ಧ ಕುಡಿವ ನೀರಿನ ಘಟಕದ ನೀರನ್ನೇ ಬಳಸುವಂತೆ ಮನವಿ ಮಾಡಿದ್ದಾರೆ.

ಭೀಕರ ಬರಗಾಲದ ಎದೆ ನಡುಗಿಸುವ ಚಿತ್ರ: ಆಹಾರ, ನೀರು ಇಲ್ಲದೆ ಸಾಯುತ್ತಿವೆ ಜಿರಾಫೆಗಳು
ಔಷಧೀಯ ಗುಣ: ಒಂದು ಕಾಲದಲ್ಲಿ ತಾಲೂಕಿನ ಸುತ್ತಮುತ್ತಲಿನ ನೀರಿನಲ್ಲಿ ಔಷಧೀಯ ಗುಣಗಳಿದ್ದವು. ಹುಲುಕುಡಿ ಬೆಟ್ಟ, ಸಿದ್ದರಬೆಟ್ಟ ಸೇರಿದಂತೆ ವಿವಿಧ ಬೆಟ್ಟಗಳ ಸಾಲಿನಲ್ಲಿರುವ ಈ ಗ್ರಾಮಗಳಲ್ಲಿ ನೀರು ಸಿಹಿ ಜೇನು ಎಂಬ ಕೀರ್ತಿಗೆ ಪಾತ್ರವಾಗಿತ್ತು. ಕುಡಿಯುವ ನೀರಿನ ರುಚಿಯಿಂದಾಗಿ ಸಕ್ಕರೆ ಗೊಲ್ಲಹಳ್ಳಿ ಎಂಬ ಹೆಸರು ಕೂಡ ಬಂದಿತ್ತು.

ಎಂಎಸ್‌ಜಿಪಿಯಿಂದ ವಿಷವಾಯ್ತೆ?: ಬಿಬಿಎಂಪಿ ಬೆಂಗಳೂರಿನ ಕೈಗಾರಿಕೆ, ಮೆಡಿಕಲ್‌ ಸೇರಿ ಎಲ್ಲಾ ರೀತಿಯ ತ್ಯಾಜ್ಯವನ್ನು ತಾಲೂಕಿನ ಭಕ್ತರಹಳ್ಳಿ ಗ್ರಾಪಂ ಚೀಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿದೆ. ಘಟಕದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡದಿರುವುದರಿಂದ ದೊಡ್ಡಬಳ್ಳಾಪುರ ತಾಲೂಕಿನ 6 ಗ್ರಾಪಂ ವ್ಯಾಪ್ತಿಯಲ್ಲಿ ನೀರು ವಿಷವಾಗಲು ಕಾರಣ ಎನ್ನಲಾಗುತ್ತಿದೆ.

ಸುಳ್ಳು ಭರವಸೆ: ಎಂಎಸ್‌ಜಿಪಿ ಘಟಕ ಮುಚ್ಚುವಂತೆ ಹಲವು ವರ್ಷಗಳಿಂದ ಪ್ರತಿಭಟನೆಗಳನ್ನು ನಡೆಸಿದರೂ ಅಧಿಕಾರಿಗಳು ಆಶ್ವಾಸನೆಗಳ ಮೂಲಕವೇ ದಿನದೂಡುತ್ತಾ ಸ್ಥಳೀಯನ್ನು ಯಾಮಾರಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಸತತ ಮಳೆಯಿಂದಾಗಿ ಕಸದ ರಾಶಿಯ ಕೊಳೆತ ವಾಸನೆಗೆ ಹಾಗೂ ಇದರ ಸ್ಲರಿ ಕೆರೆ ಕಟ್ಟೆ, ಅಂತರ್ಜಲ ಸೇರಿ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು, ದೈಹಿಕ ನ್ಯೂನತೆಗಳು ಸ್ಥಳೀಯರನ್ನು ಕಾಡುತ್ತಿದೆ.

ಕುಡಿಯೋ ನೀರಲ್ಲಿ ಯುರೇನಿಯಂ: ರಾಜ್ಯದ 73 ಹಳ್ಳಿಗಳಲ್ಲಿ ಅಧ್ಯಯನ; ಕ್ಯಾನ್ಸರ್‌ಕಾರಕ ವಿಷ ದೃಢ!
ಶುದ್ಧ ನೀರಿನ ಘಟಕ ಸ್ಥಗಿತ: ಈ ಭಾಗದ ಅಂತರ್ಜಲ ಮಟ್ಟ ಎಷ್ಟರ ಮಟ್ಟಿಗೆ ಕೆಟ್ಟಿದೆ ಎಂದರೆ ಇಲ್ಲಿನ ಬೋರ್‌ವೆಲ್‌ಗಳಲ್ಲಿನ ನೀರನ್ನು ಶುದ್ಧೀಕರಿಸಲು ಶುದ್ಧ ಕುಡಿಯುವ ನೀರಿನ ಘಟಕದ ಟ್ಯಾಂಕರ್‌ಗೆ ತುಂಬಿದಾಗ ಇಡೀ ಘಟಕ ಕೆಟ್ಟು ನಿಲ್ಲುತ್ತಿವೆ.

‘ಟೆರ್ರಾ ಫಾರಂ ಮತ್ತು ಎಂಎಸ್‌ಜಿಪಿ ತ್ಯಾಜ್ಯ ಘಟಕಗಳು ಅವೈಜ್ಞಾನಿಕ ಕಸ ವಿಲೇವಾರಿ ಹಾಗೂ ವಿಷಕಾರಿ ನೀರನ್ನು ಅಂತರ್ಜಲಕ್ಕೆ ಬಿಟ್ಟಿರುವುದರಿಂದಲೇ ಈ ಭಾಗದ ನೀರು ವಿಷವಾಗಿದೆ. ಸರಕಾರವೇ ನೀರು ಕುಡಿಯಲು ಯೋಗ್ಯವಲ್ಲ ಎಂದು ಎಚ್ಚರಿಕೆ ಕೊಟ್ಟಿದೆ. ಆದರೆ, ಸ್ಥಳೀಯರು ಅನಿವಾರ‍್ಯವಾಗಿ ಈ ನೀರು ಬಳಸುತ್ತಿದ್ದಾರೆ’ ಎಂದು ಭಕ್ತರಹಳ್ಳಿ ಗ್ರಾ. ಪಂ. ಅಧ್ಯಕ್ಷ ಸಿದ್ದಲಿಂಗಯ್ಯ ತಿಳಿಸಿದ್ದಾರೆ.

‘ಬೋರ್‌ವೆಲ್‌ಗಳ ನೀರನ್ನು ಲ್ಯಾಬ್‌ಗಳಲ್ಲಿ ಪರೀಕ್ಷಿಸಿದಾಗ ಫ್ಲೋರೈಡ್‌ ಮತ್ತು ನೈಟ್ರೇಟ್‌ ಅಂಶ ಪತ್ತೆಯಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾಧಿಕಾರಿ, ಸಿಇಓ, ಶಾಸಕರಿಗೆ ಈ ಬಗ್ಗೆ ವರದಿ ಕಳಿಸಿದ್ದೇವೆ. ಸಾರ್ವಜನಿಕರು ಎಚ್ಚರಿಕೆಯಿಂದರಬೇಕು’ ಎಂದು ಜಿಲ್ಲಾ ಕುಡಿಯುವ ನೀರಿನ ಮಾದರಿ ಪರೀಕ್ಷಾ ಪ್ರಯೋಗಾಲಯದ ಹಿರಿಯ ವಿಶ್ಲೇಷಣಾಕಾರಿ ಮಧುರಾ ತಿಳಿಸಿದ್ದಾರೆ.

ಸೀಸ, ಯುರೇನಿಯಂ ಪತ್ತೆ ಆತಂಕ: ಬೆಂಗಳೂರು ಗ್ರಾಮಾಂತರ ಜೀವಜಲಕ್ಕೆ ಕುತ್ತು!



Read more