ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ‘ಬಿ’ ಖಾತಾ ಸ್ವತ್ತುಗಳನ್ನು ಸಕ್ರಮಗೊಳಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಕ್ರಮ – ಸಕ್ರಮ ಯೋಜನೆಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿದೆ. ಇದರಿಂದಾಗಿ ಅಕ್ರಮ – ಸಕ್ರಮ ಯೋಜನೆ ಜಾರಿಗೊಳಿಸಲಾಗಿಲ್ಲ. ಆ ಪ್ರಕರಣವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗಂಭೀರ ಪ್ರಯತ್ನ ನಡೆಸಿದೆ’ ಎಂದು ಹೇಳಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ 18,52,802 ಆಸ್ತಿಗಳನ್ನು ತೆರಿಗೆ ಜಾಲದಡಿ ತರಲಾಗಿದೆ. ನಗರದಲ್ಲಿರುವ ಹಲವು ರೀತಿಯ ಉಪಯೋಗದ ಕಟ್ಟಡಗಳನ್ನು ನಾನಾ ವರ್ಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ದರಗಳಲ್ಲಿ ಆಸ್ತಿ ತೆರಿಗೆ ನಿಗದಿಪಡಿಸಲಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಯೂನಿಟ್ ಏರಿಯಾ ವ್ಯಾಲ್ಯೂ ಮೌಲ್ಯದ ಶೇ. 25 ರಷ್ಟು ಹಾಗೂ ವಸತಿ ಕಟ್ಟಡಗಳಿಗೆ ಶೇ 20ರಷ್ಟು ತೆರಿಗೆ ವಿಧಿಸಲಾಗುತ್ತಿದೆ’ ಎಂದು ವಿವರಿಸಿದರು.
6.16 ಲಕ್ಷ ಬಿ ಖಾತಾ ಸ್ವತ್ತುಗಳು

ಬಿಬಿಎಂಪಿ ವ್ಯಾಪ್ತಿಯಲ್ಲಿ 18.52 ಲಕ್ಷ ಆಸ್ತಿಗಳಿಂದಷ್ಟೇ ತೆರಿಗೆ ಸಂಗ್ರಹವಾಗುತ್ತಿದೆ. ಈ ಪೈಕಿ 6.16 ಲಕ್ಷ ಬಿ ಖಾತಾ ಸ್ವತ್ತುಗಳಿವೆ. 2007ಕ್ಕಿಂತ ಮೊದಲು ನಗರದಲ್ಲಿ ‘ಬಿ’ ಖಾತಾ ವ್ಯವಸ್ಥೆಯೇ ಜಾರಿಯಲ್ಲಿರಲಿಲ್ಲ. ಅಲ್ಲಿಯವರೆಗೆ ಸುಧಾರಣಾ ಶುಲ್ಕ ಕಟ್ಟಿಸಿಕೊಂಡು ಎಲ್ಲ ಆಸ್ತಿಗಳಿಗೂ ‘ಎ’ ಖಾತಾ ನೀಡಲಾಗುತ್ತಿತ್ತು. 2006ರಲ್ಲಿ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ಭೂಪರಿವರ್ತನೆಯಾಗದ ನಿವೇಶನಗಳಿಗೆ ‘ಎ’ ಖಾತಾ ನೀಡಬಾರದೆಂದು ಸುಗ್ರೀವಾಜ್ಞೆ ಹೊರಡಿಸಲಾಯಿತು. ಆನಂತರ ಕೇವಲ ತೆರಿಗೆ ಸಂಗ್ರಹಿಸುವ ಸಲುವಾಗಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೆಯೇ ನಿರ್ಮಿಸಿರುವ ಬಡಾವಣೆಗಳ ನಿವೇಶನಗಳು, ಭೂಪರಿವರ್ತನೆ ಮಾಡದೆ ಕಟ್ಟಡ ನಿರ್ಮಿಸಿರುವ ನಿವೇಶನಗಳನ್ನು ಬಿ-ವಹಿಯಲ್ಲಿ ದಾಖಲಿಸುವ ಪದ್ಧತಿ ಆರಂಭವಾಯಿತು.
15 ವರ್ಷಗಳ ನರಳಾಟ

ಉದ್ಯಾನ ನಗರಿಯಲ್ಲಿ 2006ರಲ್ಲಿ ಭೂಮಿಯ ಬೆಲೆ ಗಗನಮುಖಿಯಾಯಿತು. ಪಾಲಿಕೆಗೆ ಹೊಸದಾಗಿ ನಗರಸಭೆ, ಪುರಸಭೆ ಸೇರಿ 110 ಹಳ್ಳಿಗಳು ಸೇರ್ಪಡೆಯಾದವು. ಈ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರಿಗಳಿಂದ ನಕ್ಷೆ ಮಂಜೂರಾತಿಗೆ ಅನುಮೋದನೆ ಪಡೆಯದೆ, ಭೂಪರಿವರ್ತನೆ ಮಾಡಿಸದೆಯೇ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲಾಯಿತು.
ಅವೈಜ್ಞಾನಿಕವಾಗಿ ಎಲ್ಲೆಡೆ ಅನಧಿಕೃತ ಬಡಾವಣೆಗಳು ತಲೆ ಎತ್ತಿದವು. ಇದರಿಂದ ಆದಾಯವೂ ಖೋತಾ ಆಗಿತ್ತು. ಹಾಗಾಗಿ, ಅನುಮೋದನೆ ಪಡೆಯದ ಬಡಾವಣೆಗಳಲ್ಲಿನ ನಿವೇಶನಗಳು ಮತ್ತು ಕಟ್ಟಡ ನಿರ್ಮಿಸಿರುವ ನಿವೇಶನಗಳಿಗೆ ಎ ಖಾತಾ ನೀಡದಂತೆ ಸರಕಾರ ಆದೇಶಿಸಿತು. ಇದಾಗಿ 15 ವರ್ಷ ಕಳೆದಿದ್ದು, ಇಲ್ಲಿಯವರೆಗೆ ‘ಬಿ’ ಖಾತಾ ನರಳಾಟದಿಂದ ಆಸ್ತಿ ಮಾಲೀಕರಿಗೆ ಮುಕ್ತಿ ಸಿಕ್ಕಿಲ್ಲ. ‘ಬಿ’ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವುದಕ್ಕೂ ಅಕ್ರಮ – ಸಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಕಟ್ಟಡ ಬೈಲಾ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳೂ ಇದರ ವ್ಯಾಪ್ತಿಯಲ್ಲಿ ಬರುವುದಿಲ್ಲ. ‘ಎ’ ಖಾತಾ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರೂ, ಅದು ಅಕ್ರಮ ಕಟ್ಟಡ ಎನಿಸಿಕೊಳ್ಳುತ್ತದೆ.
1200 ಕೋಟಿ ರೂ. ವೆಚ್ಚದಲ್ಲಿ ಕಿರು ಕಾಲುವೆಗಳ ವಿಸ್ತಾರ

ಬಿಬಿಎಂಪಿ ವ್ಯಾಪ್ತಿಯಲ್ಲಿ 1200 ಕೋಟಿ ರೂ. ವೆಚ್ಚದಲ್ಲಿ 128 ಕಿ.ಮೀ ಉದ್ದದ ಕಿರು ಕಾಲುವೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದೇ ವರ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಪರಿಷತ್‌ನಲ್ಲಿ ಸಿಎಂ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ಪಿ. ಆರ್. ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿ ‘ರಾಜಕಾಲುವೆಗಳ ಪುನರ್ ನಿರ್ಮಾಣ, ವಿಶೇಷವಾಗಿ ಕಿರು ಕಾಲುವೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ದೊಡ್ಡ ಮಟ್ಟದಲ್ಲಿ ಮಳೆಯಾದರೂ ಕಾಲುವೆಗಳಿಂದ ನೀರು ಹೊರ ಹರಿದು ಹೋಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ರಾಜಕಾಲುವೆಗಳ ಒತ್ತುವರಿ ತೆರವು

‘ರಾಜಕಾಲುವೆಗಳ 1912 ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. 98 ಮಾಲೀಕರು ಹಾಗೂ 20 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 382 ಎಕರೆಗೆ ಸಂಬಂಧಿಸಿದ 2626 ಒತ್ತುವರಿ ಪ್ರಕರಣಗಳಿವೆ. 2020 ಡಿಸೆಂಬರ್ 24ರವರೆಗೆ 1912 ಪ್ರಕರಣಗಳ ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ಸಿಎಂ ಮಾಹಿತಿ ನೀಡಿದರು.
ಕಾರ್ಯಪಡೆ ಪರಿಶೀಲನೆ ಬಳಿಕ ರಸ್ತೆ ನಿರ್ಮಾಣ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸುವುದಕ್ಕಿಂತ ಮುಂಚಿತವಾಗಿ ಕಾರ್ಯಪಡೆಯು ಸಾಧಕ – ಬಾಧಕಗಳ ಪರಿಶೀಲನೆ ನಡೆಸಲಿದೆ. ಅದರ ವರದಿ ಆಧರಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಪರಿಷತ್‌ನಲ್ಲಿ ಶಾಸಕಿ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ‘ಏಕಾಏಕಿ ರಸ್ತೆ ನಿರ್ಮಿಸುವುದಕ್ಕೆ ಮತ್ತು ಅನುದಾನ ಬಿಡುಗಡೆ ಮಾಡುವುದಕ್ಕೆ ಮುಂದಾಗುವುದರ ಬದಲು ಎಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆಯೋ ಅಲ್ಲಿ ಉದ್ಭವಿಸಬಹುದಾದ ಭೂಸ್ವಾಧೀನ ಸಮಸ್ಯೆಗಳು, ಸಂಚಾರ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಅಂಶಗಳ ಕುರಿತು ನೇಮಿಸಲಾದ ಸಮಿತಿ ಪರಿಶೀಲನೆ ನಡೆಸಲಿದೆ. ಬಳಿಕ ಕ್ರಿಯಾಯೋಜನೆ ಸಿದ್ದಪಡಿಸಿ ವರದಿ ನೀಡಲಿದೆ. ಅದರ ವರದಿ ಆಧರಿಸಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.