Karnataka news paper

ಮಾಜಿ ಚಾಂಪಿಯನ್ಸ್‌ ಪ್ಯಾಂಥರ್ಸ್‌ನ ಬೇಟೆಯಾಡಿದ ಜಯಂಟ್ಸ್‌!


ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ನಡೆಯುತ್ತಿರುವ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿ.
  • ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದ ಗುಜರಾತ್‌ ಜಯಂಟ್ಸ್‌.
  • 34- 27 ಅಂತರದ ಜಯ ದಕ್ಕಿಸಿಕೊಂಡ 2 ಬಾರಿಯ ರನ್ನರ್ಸ್‌ಅಪ್‌ ಗುಜರಾತ್‌ ತಂಡ.

ಬೆಂಗಳೂರು: ಟ್ಯಾಕಲ್‌ ಮತ್ತು ರೇಡಿಂಗ್‌ ಎರಡರಲ್ಲೂ ಮಿಂಚಿದ ಎರಡು ಬಾರಿಯ ರನ್ನರ್ಸ್‌ಅಪ್‌ ಗುಜರಾತ್‌ ಜಯಂಟ್ಸ್‌ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

ಇಲ್ಲಿನ ವೈಟ್‌ಫೀಲ್ಡ್‌ ಬಳಿ ಇರುವ ಐಶಾರಾಮಿ ಶೆರ್ಟನ್ ಗ್ರ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ 34-27 ಅಂಕಗಳ ಅಂತರದಿಂದ ಜೈಪುರ ತಂಡಕ್ಕೆ ಸೋಲುಣಿಸಿ ಸಂಪೂರ್ಣ ಐದು ಅಂಕಗಳನ್ನು ಬಾಚಿಕೊಂಡಿತು.

ಪ್ರಥಮಾರ್ಧಕ್ಕೆ 19-17ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ 2017, 2018ರ ರನ್ನರ್ಸ್‌ಅಪ್‌ ಗುಜರಾತ್‌ ಜಯಂಟ್ಸ್‌, ದ್ವಿತೀಯಾರ್ಧದಲ್ಲಿ ಪ್ರಬಲ ಪ್ರತಿರೋಧ ಎದುರಿಸಿ 20-20, 23-23ರ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಈ ನಡುವೆ, 32ನೇ ನಿಮಿಷದಲ್ಲಿ ಜೈಪುರ ತಂಡ 25-23ರಲ್ಲಿ ಅಲ್ಪ ಮೇಲುಗೈ ಸಾಧಿಸಿತಾದರೂ ಅದನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು.

ಆರಂಭದಲ್ಲೇ ಮುಗ್ಗರಿಸಿದ ಬುಲ್ಸ್, ಮುಂಬೈ ಎದುರು ತಬ್ಬಿಬ್ಬಾದ ಬೆಂಗಳೂರು!

ಈ ಮಧ್ಯೆ, ರೇಡರ್‌ ರಾಕೇಶ್‌ ನರ್ವಾಲ್‌ (7 ಅಂಕ), ಆಲ್‌ರೌಂಡರ್‌ ರಾಕೇಶ್‌ (6 ಅಂಕ) ಮತ್ತು ಡಿಫೆಂಡರ್‌ ಗಿರೀಶ್‌ ಮಾರುತಿ (7 ಅಂಕ) ಅವರ ಕೆಚ್ಚೆದೆಯ ಪ್ರದರ್ಶನದಿಂದ ಜಯಂಟ್ಸ್‌ ಮತ್ತೆ 27-27ರಲ್ಲಿ ಪುಟಿದೆದ್ದಿತು. ನಂತರ ಎಚ್ಚರಿಕೆ ಆಟವಾಡಿದ ಜಯಂಟ್ಸ್‌ ಆಟಗಾರರು ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಪಂದ್ಯವನ್ನು ತಮ್ಮತ್ತ ಒಲಿಸಿಕೊಂಡರು.

ಆರಂಭಿಕ ಸೋಲು ತಪ್ಪಿಸಲು ಕೊನೆಯ ಹಂತದವರೆಗೂ ಹೋರಾಟ ನಡೆಸಿದ ಪ್ಯಾಂಥರ್ಸ್‌ ಪರ ರೇಡರ್‌ ಅರ್ಜುನ್‌ ದೇಶ್ವಾಲ್‌ (10) ಗರಿಷ್ಠ ಅಂಕ ಗಳಿಸಿದರೆ, ಸ್ಟಾರ್‌ ಆಲ್‌ ರೌಂಡರ್‌ ದೀಪಕ್‌ ಹೂಡಾ (4) ಮತ್ತು ಡಿಫೆಂಡರ್‌ ಸಂದೀಪ್‌ ಧುಲ್‌ (3) ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಎಡವಿದರು.

ದಬಾಂಗ್‌ ದರ್ಬಾರ್‌: ಪಂದ್ಯದ ಉಭಯ ಅವಧಿಗಳಲ್ಲೂಸ್ಥಿರ ಪ್ರದರ್ಶನ ಕಾಯ್ದುಕೊಂಡ ದಬಾಂಗ್‌ ದಿಲ್ಲಿ ತಂಡ ಪಿಕೆಎಲ್‌ 8ನೇ ಆವೃತ್ತಿಯ 5ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವನ್ನು 41-30 ಅಂಕಗಳಿಂದ ಮಣಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿದೆ.

ಯು ಮುಂಬಾ ಸದ್ದಡಗಿಸಿ ಶುಭಾರಂಭ ಮಾಡುವ ತವಕದಲ್ಲಿ ಬುಲ್ಸ್‌!

ಪಂದ್ಯ ಆರಂಭದಿಂದಲೂ ಮೇಲುಗೈ ಸಾಧಿಸಿದ ದಬಾಂಗ್‌ ಆಟಗಾರರು ಮೊದಲಾರ್ಧಕ್ಕೆ 23-15ರಲ್ಲಿಮುನ್ನಡೆ ಕಾಯ್ದುಕೊಂಡರು. ಪಂದ್ಯದ 30ನೇ ನಿಮಿಷದಲ್ಲಿ23-30ರಲ್ಲಿಮರು ಹೋರಾಟ ಸಂಘಟಿಸಿದ ಕೋಚ್‌ ಅನೂಪ್‌ ಕುಮಾರ್‌ ಬಳಗ ಪಂದ್ಯ ಮುಕ್ತಾಯಕ್ಕೆ ಇನ್ನೈದು ನಿಮಿಷಗಳಿರುವಾಗ ಆಲ್‌ಔಟ್‌ಗೆ ಒಳಗಾಯಿತು. ಹೀಗಾಗಿ ಗೆಲುವಿನ ಅಂತರವನ್ನು 37-25ಕ್ಕೆ ಹೆಚ್ಚಿಸಿಕೊಂಡ ದಬಾಂಗ್‌ ಕೊನೆಯವರೆಗೂ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಗೊಂಡಿತು.

ಪಂದ್ಯದುದ್ದಕ್ಕೂ ಮಿಂಚಿದ ದಿಲ್ಲಿ ರೇಡರ್‌ ನವೀನ್‌ ಕುಮಾರ್‌ 16 ಅಂಕ ಹೆಕ್ಕಿದರೆ, ಆಲ್‌ರೌಂಡರ್‌ ವಿಜಯ್‌ 9 ಅಂಕಗಳ ಕಾಣಿಕೆ ನೀಡಿದರು. ಅತ್ತ ಪಲ್ಟನ್‌ ಪರ ನಾಯಕ ನೀತಿನ್‌ ತೋಮರ್‌ (7), ರಾಹುಲ್‌ ಚೌಧರಿ (5) ಮತ್ತು ಅಸ್ಲಾಮ್‌ (8) ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಬೆಂಗಳೂರಿನ ಪಂಚತಾರ ಹೋಟೆಲ್‌ನಲ್ಲಿ ಪ್ರೊ ಕಬಡ್ಡಿ ಲೀಗ್ ಆಯೋಜನೆ!

ಶುಕ್ರವಾರದ ಪಂದ್ಯಗಳು
ಯು ಮುಂಬಾ – ದಬಾಂಗ್‌ ದಿಲ್ಲಿ(ರಾತ್ರಿ 7.30ಕ್ಕೆ)
ತಮಿಳ್‌ ತಲೈವಾಸ್‌ – ಬೆಂಗಳೂರು ಬುಲ್ಸ್‌ (8.30ಕ್ಕೆ)
ಬೆಂಗಾಲ್‌ ವಾರಿಯರ್ಸ್‌ -ಗುಜರಾತ್‌ ಜಯಂಟ್ಸ್‌ (9.30ಕ್ಕೆ)
ಸ್ಥಳ: ಶೆರ್ಟನ್‌ ಗ್ರ್ಯಾಂಡ್‌, ಬೆಂಗಳೂರು
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್



Read more