Karnataka news paper

ಐತಿಹಾಸಿಕ ಗೆಲುವಿನ ರೋಮಾಂಚನಕಾರಿ ದೃಶ್ಯಕಾವ್ಯ- ’83’ ಸಿನಿಮಾ ವಿಮರ್ಶೆ


ಅವಿನಾಶ್ ಜಿ. ರಾಮ್
ಜೂನ್ 25, 1983- ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್‌ ಅನ್ನು ಎತ್ತಿ ಹಿಡಿದ ಐತಿಹಾಸಿಕ ಕ್ಷಣ. ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಮಣಿಸಿ, ಕಪ್ ಗೆಲ್ಲುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಅಂಥದ್ದೊಂದು ಐತಿಹಾಸಿಕ ಗೆಲುವಿಗೆ ಕಪಿಲ್ ದೇವ್ ಮತ್ತು ತಂಡ ಸಾಕ್ಷಿ ಆಗಿತ್ತು. ಇದೀಗ 38 ವರ್ಷಗಳ ಹಿಂದಿನ ಐತಿಹಾಸಿಕ ಗಳಿಗೆಗಳನ್ನು 2.43 ಗಂಟೆಯ ದೃಶ್ಯಕಾವ್ಯದ ಮೂಲಕ ’83’ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕ ಕಬೀರ್ ಖಾನ್.

1983ರ ವರ್ಲ್ಡ್‌ ಕಪ್‌ ಕ್ಷಣಗಳ ಮರುಸೃಷ್ಟಿ
ಆ್ಯಕ್ಷನ್‌ ಮತ್ತು ಎಮೋಷನಲ್ ಸಿನಿಮಾಗಳನ್ನು ಅದ್ಭುತವಾಗಿ ತೆರೆಮೇಲೆ ಕಟ್ಟಿಕೊಡುವ ಸಾಮರ್ಥ್ಯ ಇರುವ ನಿರ್ದೇಶಕ ಕಬೀರ್ ಖಾನ್. ಅದಕ್ಕೆ ಅವರ ಹಿಂದಿನ ಸಿನಿಮಾಗಳೇ ಸಾಕ್ಷಿ. ರಣ್‌ವೀರ್ ಸಿಂಗ್ ಎಂದಾಗ ತಕ್ಷಣಕ್ಕೆ ನೆನಪಾಗುವುದು ಅವರ ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳು, ಐತಿಹಾಸಿಕ ಸಿನಿಮಾಗಳು, ಅವರ ವಿಶಿಷ್ಠ ಮ್ಯಾನರಿಸಂ. ರಣ್‌ವೀರ್ ಮತ್ತು ಕಬೀರ್ ಸೇರಿಕೊಂಡು 1983ರ ವಿಶ್ವಕಪ್ ಪಂದ್ಯಾವಳಿ ಕುರಿತು ’83’ ಸಿನಿಮಾ ಮಾಡಲಿದ್ದಾರೆ ಎಂದಾಗ ಸಿನಿಪ್ರಿಯರಿಗೆ ಅಚ್ಚರಿ ತಂದಿತ್ತು. ಇದು ಯಾವ ರೀತಿ ಸಿನಿಮಾ ಆಗಬಹುದು? 80ರ ಕಾಲಘಟ್ಟವನ್ನು, ಅಂದಿನ ಕ್ರಿಕೆಟ್ ಜಗತ್ತನ್ನು ಯಾವ ರೀತಿ ಕಟ್ಟಿಕೊಡಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದನ್ನು ಯಶಸ್ವಿಯಾಗಿ ಕಟ್ಟಿಕೊಡುವಲ್ಲಿ ಕಬೀರ್ ಗೆದ್ದಿದ್ದಾರೆ ಎಂದೇ ಹೇಳಬಹುದು.

ಅದ್ಭುತ ಆಟದ ಅತ್ಯುತ್ತಮ ಸಿನಿಮಾ
ಕ್ರಿಕೆಟ್ ಅನ್ನೋದು ಭಾರತ ದೇಶಕ್ಕೆ ಒಂದು ಧರ್ಮವೇ ಆಗಿಹೋಗಿದೆ. 38 ವರ್ಷಗಳ ಹಿಂದೆ ಭಾರತದಲ್ಲಿ ಕ್ರಿಕೆಟ್‌ಗೆ ಅಷ್ಟೇನೂ ಮಹತ್ವ ಇರಲಿಲ್ಲ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾಗಿಯಾಗಲು ಭಾರತಕ್ಕೆ ಆಹ್ವಾನ ಕಳಿಸುವ ಒಂದು ದೃಶ್ಯವೇ ಸಾಕು, ಆಗ ಅಡಳಿತ ವರ್ಗದಿಂದ ಇಂಡಿಯಾ ಟೀಮ್‌ಗೆ ಯಾವ ಮಟ್ಟದ ಬೆಂಬಲ ಇತ್ತು ಎಂಬುದನ್ನು ತೋರಿಸಲು. ವಿಮಾನದಲ್ಲಿ ಹೆಚ್ಚುವರಿ ಲಗೇಜ್‌ ಒಯ್ಯಲು ಹಣ ನೀಡುವುದಕ್ಕೂ ತಂಡದ ಬಳಿ ಇರಲಿಲ್ಲ! ಅಂಥದ್ದೊಂದು ಸ್ಥಿತಿಯಿಂದ ಲಂಡನ್‌ ತಲುಪುವ ಭಾರತ ತಂಡ, ಆಗ ಕ್ರಿಕೆಟ್ ಲೋಕದ ದೈತ್ಯ ತಂಡವಾಗಿದ್ದ ವೆಸ್ಟ್‌ ಇಂಡೀಸ್‌ ಅನ್ನು ಹೇಗೆ ಸದೆಬಡಿದು, ವರ್ಲ್ಡ್ ಕಪ್‌ ಅನ್ನು ಎತ್ತಿ ಹಿಡಿಯುತ್ತದೆ ಎಂಬುದನ್ನು ಕಬೀರ್ ಖಾನ್ ಬಹಳ ರೋಚಕವಾಗಿ, ಭಾವನಾತ್ಮಕವಾಗಿ ದೃಶ್ಯ ರೂಪದಲ್ಲಿ ತೆರೆಮೇಲೆ ತಂದಿದ್ದಾರೆ. ಒಂದೇ ಒಂದು ವಿಶ್ವಕಪ್ ಗೆಲುವು ಏನೆಲ್ಲಾ ಬದಲಾಯಿಸುತ್ತದೆ, ಧರ್ಮ-ಧರ್ಮಗಳ ನಡುವೆ, ಭಾಷೆ-ಭಾಷೆಗಳ ನಡುವೆ ಕ್ರಿಕೆಟ್ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಕಬೀರ್ ಖಾನ್.

1983ರ ಕಾಲಘಟ್ಟವನ್ನು ಈಗ ಮರುಸೃಷ್ಟಿಸುವುದು ಅಷ್ಟು ಸುಲಭವಲ್ಲ. ರೆಟ್ರೋ ಕಾಲದ ಕಥೆ ಹೇಳುವಾಗ ಸಾಮಾನ್ಯವಾಗಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತದೆ. ಆದರೆ, ’83’ ಸಿನಿಮಾದ ಬಹುತೇಕ ಕಥೆ ಮೈದಾನದಲ್ಲೇ ನಡೆದಿದೆ. 1983ರ ವಿಶ್ವಕಪ್‌ ಪಂದ್ಯಾವಳಿ ನಡೆದ ಕ್ಷಣಗಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿರುವ ತಂಡ, ಅದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದೆ. ಕ್ರಿಕೆಟ್‌ ಒಳಗಿನ ಎಮೋಷನಲ್ ಅಂಶಗಳನ್ನು ತೆರೆಮೇಲೆ ತಂದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಇಷ್ಟವಾಗುತ್ತವೆ. ಭಾರತದಲ್ಲಿ ಆಗ ಕ್ರಿಕೆಟ್‌ಗೆ ಯಾವ ರೀತಿಯ ಅಭಿಮಾನಿಗಳಿದ್ದರು ಎಂಬುದನ್ನು ’83’ ಸಿನಿಮಾದಲ್ಲಿ ನೋಡಬಹುದು. ಕೋಮುಗಲಭೆ ನಿಯಂತ್ರಣಕ್ಕೂ, ಗಡಿಯಲ್ಲಿ ಗುಂಡಿನ ದಾಳಿ ನಿಲ್ಲುವುದಕ್ಕೂ ಕ್ರಿಕೆಟ್ ಕಾರಣವಾಗುವ ಸೀನ್‌ಗಳು ಖುಷಿ ನೀಡುತ್ತದೆ.

ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡುವುದರ ಜೊತೆಗೆ ಕಲಾವಿದರ ಆಯ್ಕೆಯಲ್ಲೇ ನಿರ್ದೇಶಕರು ಮೊದಲ ಗೆಲವು ಪಡೆದುಕೊಂಡಿದ್ದಾರೆ. ಸಣ್ಣ ಸಣ್ಣ ಪಾತ್ರಗಳಿಗೂ ಬಹಳ ನಿಖರವಾಗಿ ಕಲಾವಿದರನ್ನು ಆಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ ಟೀಮ್‌ನ ಆಟಗಾರರ ಪಾತ್ರಗಳ ಆಯ್ಕೆ ಗಮನ ಸೆಳೆಯುತ್ತದೆ. ’83’ ಸಿನಿಮಾವು ಸಾಕಷ್ಟು ಸಿದ್ಧತೆಗಳನ್ನು ಬೇಡುತ್ತದೆ. ಅದನ್ನೆಲ್ಲ ಕಬೀರ್ ಮತ್ತು ತಂಡ ಅಗತ್ಯ ಶ್ರಮವಹಿಸಿ ಮಾಡಿದೆ. ಪ್ರೀತಮ್ ಹಿನ್ನೆಲೆ ಸಂಗೀತಕ್ಕೆ ರೋಮಾಂಚನಗೊಳಿಸುವ ಶಕ್ತಿ ಇದೆ. ಆಸೀಮ್ ಮಿಶ್ರಾ ಛಾಯಾಗ್ರಹಣಕ್ಕೂ ಚಪ್ಪಾಳೆ ಸಲ್ಲಲೇಬೇಕು.

ದೊಡ್ಡ ಮೊತ್ತದ ಸಂಭಾವನೆ ಜೊತೆಗೆ ’83’ ಸಿನಿಮಾ ಮಾಡಿದ ಲಾಭದಲ್ಲಿ ಶೇರ್ ಕೇಳಿದ ನಟ ರಣವೀರ್ ಸಿಂಗ್

ರಣ್‌ವೀರ್ ಸಿಂಗ್ ಕಾಣಿಸೋಲ್ಲ!
ಬಹುಶಃ ನಟ ರಣ್‌ವೀರ್ ಸಿಂಗ್‌ಗೆ ’83’ ಸಿನಿಮಾವು ಒಂದು ದೊಡ್ಡ ತಿರುವು ಎಂದರೆ ತಪ್ಪಾಗಲಿಕ್ಕಿಲ್ಲ. ಇದುವರೆಗೂ ತೆರೆಮೇಲೆ ಮಿಂಚಿದ್ದ ರಣ್‌ವೀರ್ ಸಿಂಗ್ ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ. ಬದಲಿಗೆ, 1983ರ ಕಪಿಲ್ ದೇವ್‌ ಕಾಣಿಸುತ್ತಾರೆ. ಕಪಿಲ್‌ರ ಹೋಲಿಕೆ ರಣ್‌ವೀರ್‌ ಸಿಂಗ್‌ರಲ್ಲಿ ಬಹುತೇಕ ಕಾಣಿಸುತ್ತದೆ. ಒಬ್ಬ ನುರಿತ ಕ್ರಿಕೆಟ್ ಪಟುವಾಗಿ, ಶಿಸ್ತಿನ ಟೀಮ್‌ ಇಂಡಿಯಾದ ಕ್ಯಾಪ್ಟನ್‌ ಆಗಿ ಅದ್ಭುತ ಅಭಿನಯ ನೀಡಿದ್ದಾರೆ ರಣ್‌ವೀರ್ ಸಿಂಗ್. ಹಾಗೆಯೇ, ಶ್ರೀಕಾಂತ್ ಪಾತ್ರದಲ್ಲಿ ತಮಿಳು ನಟ ಜೀವಾ ನಟನೆ ಕೂಡ ಮೆಚ್ಚುವಂತೆ ಇದೆ. ಪಂಕಜ್ ತ್ರಿಪಾಠಿ ಎಂದಿನಂತೆ ಅತ್ಯುತ್ತಮವಾದುದನ್ನೇ ನೀಡಿದ್ದಾರೆ. ಕಪಿಲ್ ಪತ್ನಿ ಪಾತ್ರ ಮಾಡಿರುವ ದೀಪಿಕಾ ಪಡುಕೋಣೆಗೆ ಜಾಸ್ತಿ ದೃಶ್ಯಗಳಿಲ್ಲ. ಆದರೂ ತೆರೆಮೇಲೆ ಇದ್ದಷ್ಟು ಹೊತ್ತು ಮಿಂಚುತ್ತಾರೆ. ವಿಶ್ವಕಪ್ ತಂಡದಲ್ಲಿದ್ದ ಆಟಗಾರರ ಪಾತ್ರಗಳನ್ನು ನಿಭಾಯಿಸಿರುವ ಕಲಾವಿದರು, ತಮ್ಮ ಸಿಕ್ಕ ಪಾತ್ರಗಳನ್ನು ಜೀವಿಸಿದ್ದಾರೆ. ಉಳಿದಂತೆ, ವಿವಿಯನ್ ರಿಚರ್ಡ್ಸ್ ಪಾತ್ರಧಾರಿಯ ಲುಕ್ ಇಷ್ಟವಾಗುತ್ತದೆ. 1983ರ ವಿಶ್ವಕಪ್‌ ಪಂದ್ಯಾವಳಿಯನ್ನು ಈಗ ನೋಡಲು ಸಾಧ್ಯವಿಲ್ಲ. ಆದರೆ, ಸಿನಿಮಾರೂಪದಲ್ಲಿ ಇಲ್ಲಿ ನೋಡಬಹುದಾಗಿದೆ.

83 Movie: ಬಾಲಿವುಡ್ ನಟ ರಣ್‌ವೀರ್ ಸಿಂಗ್‌ಗೆ ಕನ್ನಡ ಹೇಳಿಕೊಟ್ಟ ‘ಕಿಚ್ಚ’ ಸುದೀಪ್‌

’83’ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬಂದಿದೆ. ಆಭಾಸ ಎನಿಸಿದೇ, ಉತ್ತಮ ಡಬ್ಬಿಂಗ್ ಕಲಾವಿದರಿಂದ ಅಚ್ಚುಕಟ್ಟಾಗಿ ಡಬ್ಬಿಂಗ್ ಮಾಡಿಸಲಾಗಿದೆ.



Read more