Karnataka news paper

ಕೃಷ್ಣಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯೆಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ: ಸಚಿವ ಕಾರಜೋಳ


Online Desk

ಬೆಳಗಾವಿ: ಕೃಷ್ಣಾ  ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರದ ಮೇಲೆ ಎಲ್ಲಾ ರೀತಿಯ ಒತ್ತಡ ತರಲಾಗಿದೆ. ನ್ಯಾಯಾಲಯದ ವ್ಯಾಜ್ಯ ಇತ್ಯರ್ಥವಾದ ಬಳಿಕ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಗುರುವಾರ ಮೇಲ್ಮನೆಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ಪ್ರಕಾಶ್‍ ರಾಥೋಡ್‍ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಅಧಿಸೂಚನೆ ಪ್ರಕಟವಾದ ಬಳಿಕ ಕೃಷ್ಣ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ತರಲಾಗಿದೆ. ತಾವು ಹಾಗೂ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ರಾಷ್ಟ್ರೀಯ ಯೋಜನೆ ಎಂದು ಘೋಷಣೆಯಾದರೆ ಕೇಂದ್ರ ಸರ್ಕಾರದಿಂದ ಶೇ. 60ರಷ್ಟು ಅನುದಾನ ಸಿಗಲಿದೆ ಎಂದರು.

ಇದನ್ನು ಓದಿ: ಶಾಸಕರಿಗೆ ಕಾಗೇರಿ ಭಾವನಾತ್ಮಕ ಪಾಠ! ಕಟ್ಟುನಿಟ್ಟಿನಿಂದ ನಡೆಸಲು ಬಿಎಸ್ ವೈಸಲಹೆ: ನಿಯಮಾವಳಿಯಂತೆ ಸದನ ನಡೆಯಲಿ-ಸಿಎಂ

ಏಷ್ಯಾ ಖಂಡದಲ್ಲೇ ದೊಡ್ಡದಾದ ಯೋಜನೆಯ ಭೂ ಸ್ವಾದೀನಕ್ಕೆ 950 ಕೋಟಿ ನೀಡಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡುವರೆ ಸಾವಿರ ಕೋಟಿ ನೀಡಿದ್ದಾರೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ 60 ವರ್ಷ ಕಾಂಗ್ರೆಸ್‍ ಸರ್ಕಾರ ಆಡಳಿತ ನಡೆಸಿದೆ. ಆರಂಭದಲ್ಲಿ ಯೋಜನೆಯ ವೆಚ್ಚ 58 ಕೋಟಿ ರೂ.ಗಳಿತ್ತು. 2017ರಲ್ಲಿ ಅಂದಾಜು ವೆಚ್ಚ 51,148 ಕೋಟಿ ರೂ. ಏರಿಕೆಯಾಗಿದೆ. 2020ರಲ್ಲಿ ಮತ್ತೊಮ್ಮೆ ಯೋಜನಾ ವೆಚ್ಚ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಯೋಜನೆ ಘೋಷಣೆಗೆ ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ನಡೆಸಲಾಗಿದ್ದು, ಅಧಿಸೂಚನೆ ಹೊರಡಿಸಲು ಮತ್ತು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ಪ್ರಸ್ತುತ ಕಾನೂನಾತ್ಮಕ ಸಮಸ್ಯೆಗಳಿವೆ, ರಾಷ್ಟ್ರಿಯ ಯೋಜನೆ ಘೋಷಣೆಗೆ ಮುನ್ನಾ ಯಾವ ವ್ಯಾಜ್ಯಗಳು ಇರಬಾರದು ಎಂಬ ಷರತ್ತಿದೆ. ಈಗ ಮೂರು ವ್ಯಾಜ್ಯಗಳು ಬಾಕಿ ಇವೆ. ಅಧಿಸೂಚನೆ ಜಾರಿ ವಿರುದ್ಧವೂ ವಾಜ್ಯ ಇದೆ ಎಂದು ಹೇಳಿದರು.



Read more