Source : Online Desk
ನವದೆಹಲಿ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ನಡೆದ ಹೆಲಿಕಾಫ್ಟರ್ ಪತನದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ಡಿ.10 ರಂದು ದೆಹಲಿಯ ಕಂಟೋನ್ಮೇಂಟ್ ನಲ್ಲಿ ನಡೆಯಲಿದೆ.
ಗುರುವಾರ ಸಂಜೆ ವೇಳೆಗೆ ಮೃತರ ಪಾರ್ಥಿವ ಶರೀರ ರಾಷ್ಟ್ರ ರಾಜಧಾನಿ ತಲುಪಲಿದ್ದು, ತಮಿಳುನಾಡಿಗೆ ಏರ್ ಮಾರ್ಷಲ್ ವಿ. ಆರ್ ಚೌಧರಿ ಈಗಾಗಲೇ ತಲುಪಿದ್ದಾರೆ.
ಶುಕ್ರವಾರದಂದು ರಾವತ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗುವುದು ಈ ಬಳಿಕ ಕಾಮರಾಜ್ ಮಾರ್ಗ್ ನಿಂದ ಬ್ರಾರ್ ಸ್ಕ್ವೇರ್ ಚಿತಾಗಾರದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಜನರಲ್ ರಾವತ್ ಹಾಗೂ ಅವರ ಪತ್ನಿ ಇನ್ನೂ 11 ಮಂದಿ ಸೇನಾ ಅಧಿಕಾರಿಗಳು ರಕ್ಷಣಾ ಕಾಲೇಜಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಯಿಂದ ತಮಿಳುನಾಡಿಗೆ ಸೇನಾ ಹೆಲಿಕಾಫ್ಟರ್ ನಲ್ಲಿ ತೆರಳುತ್ತಿದ್ದಾಗ ಕೂನೂರು ಬಳಿ ಹೆಲಿಕಾಫ್ಟರ್ ಪತನಗೊಂಡು ಈ ದುರ್ಘಟನೆ ನಡೆದಿದೆ.