ಹೈಲೈಟ್ಸ್:
- ವೋಲ್ಟೇಜ್‌ನಲ್ಲಿ ಏರುಪೇರಿನಿಂದ ಎಲೆಕ್ಟ್ರಾನಿಕ್ ಉಪಕರಣಗಳು ಹಾಳು
- ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ತೊಂದರೆ
- ಮನೆ ಕೆಲಸಗಳಿಗೂ ತೊಂದರೆಯಾಗುತ್ತಿದೆ ಎಂದು ಗೃಹಿಣಿಯರ ದೂರು
ಕೊರೊನಾ ರೂಪಾಂತರಿ ತಳಿ ಓಮ್ರಿಕಾನ್ ವೈರಾಣು ಮಂದಗತಿಯಲ್ಲಿ ಹರಡುತ್ತಿರುವುದರಿಂದ ಈಗಲೂ ಅನೇಕ ಶಾಲೆಗಳಲ್ಲಿ ಆನ್‌ಲೈನ್ ತರಗತಿಗಳು ಮುಂದುವರಿದಿದೆ. ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರಿಸಿವೆ.
‘ನನ್ನ 8 ವರ್ಷದ ಮಗನಿಗೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಪದೇ ಪದೆ ಕರೆಂಟ್ ಹೋಗುವುದರಿಂದ ಕತ್ತಲಲ್ಲಿ ಅಥವಾ ಮಂದ ಬೆಳಕಿನಲ್ಲಿ ತರಗತಿಗಳಿಗೆ ಭಾಗಿಯಾಗುವುದು ಮಾಮೂಲಿಯಾಗಿದೆ. ತುಂತುರು ಮಳೆ ಬಂದರೂ ಸಾಕು ಇದನ್ನೇ ನೆಪವಾಗಿಸಿಕೊಂಡು ಇಡೀ ದಿನ ಪವರ್ ಕಟ್ ಮಾಡಲಾಗುತ್ತದೆ’ ಎಂದು ಶಾಂತಿನಗರ ನಿವಾಸಿ ಮನೋಜ್ ಜೋಶಿ ಬೇಸರ ವ್ಯಕ್ತಪಡಿಸಿದರು.
ಜೋಶಿ ಅವರಂತೆಯೇ ಅನೇಕ ಪೋಷಕರು ವಿದ್ಯುತ್ ಕಡಿತದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಶಾಲೆಗಳು ಈಗಲೂ ಆಫ್‌ಲೈನ್ ತರಗತಿಗಳನ್ನು ಆರಂಭಿಸಿಲ್ಲ. ಅಲ್ಲದೇ ಮನೆ ಕೆಲಸಗಳಿಗೂ ತೊಂದರೆಯಾಗುತ್ತಿದೆ ಎಂದು ಅನೇಕ ಗೃಹಿಣಿಯರು ದೂರಿದ್ದಾರೆ.
‘ವರ್ಕ್ ಫ್ರಮ್ ಹೋಮ್ ಇರುವುದರಿಂದ ಮನೆಯಿಂದಲೇ ಕಚೇರಿಯ ಸಭೆಗಳು ಇರುತ್ತದೆ. ಅಗಿಂದಾಗ್ಗೆ ವಿದ್ಯುತ್ ಕಡಿತಗೊಳ್ಳುವುದರಿಂದ ಡೆಡ್‌ಲೈನ್ ಒಳಗೆ ಕೆಲಸ ಪೂರ್ಣಗೊಳಿಸುವುದು ಕಷ್ಟವಾಗಲಿದೆ. ವಿದ್ಯುತ್ ಸಮಸ್ಯೆ ಸರಿಪಡಿಸುವ ಬಗ್ಗೆ ಯಾರನ್ನು ಸಂಪರ್ಕಿಸುವುದು ಎಂಬುದು ತಿಳಿಯುತ್ತಿಲ್ಲ’ ಎಂದು ಶ್ರೀರಾಮ್‌ಪುರ ನಿವಾಸಿ ಎಸ್. ವರುಣ್ ಅವಲತ್ತುಕೊಂಡರು.
ಎಲೆಕ್ಟ್ರಾನಿಕ್ ಉಪಕರಣಗಳು ಹಾಳು
‘ವಿದ್ಯುತ್ ವೋಲ್ಟೇಜ್‌ನಲ್ಲಿ ಏರುಪೇರಾಗಿ 10 ದಿನಗಳಲ್ಲಿ ಎರಡು ಅಡಾಪ್ಟರ್‌ಗಳು ಹಾಳಾಗಿವೆ. ಅಲ್ಲದೇ ನಮ್ಮ ನೆರೆಮನೆಯಲ್ಲಿ ಫ್ರಿಡ್ಜ್ ಹಾಳಾಗಿದ್ದು, ರಿಪೇರಿ ಮಾಡಿಸಲು 5,000 ರೂ. ಖರ್ಚು ಮಾಡಿದರು. ವೋಲ್ಟೇಜ್ ಸಮಸ್ಯೆಯಿಂದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಗ್ಯಾಡ್ಜೆಟ್ಸ್‌ಗಳು ಹಾಳಾಗುತ್ತಿವೆ. ಬೆಸ್ಕಾಂನವರು ಕುಡಲೇ ವೋಲ್ಟೇಜ್ ಸಮಸ್ಯೆಯನ್ನು ಸರಿಪಡಿಸಬೇಕು’ ಎಂದು ಸಂಜಯನಗರ ನಿವಾಸಿ ಸಿದ್ಧಾರ್ಥ ಮನವಿ ಮಾಡಿದರು.
ಶೀಘ್ರ ಸಮಸ್ಯೆ ಬಗೆಹರಿಸಿ
‘ಕಳೆದ ಕೆಲವು ತಿಂಗಳಿನಿಂದ ಪವರ್ ಕಟ್ ಸಮಸ್ಯೆ ತೀವ್ರವಾಗಿದೆ. ಯುಪಿಎಸ್ ಬ್ಯಾಕ್ ಅಪ್ ಹೆಚ್ಚು ಸಮಯ ಬರುವುದಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಇಡೀ ಕಟ್ಟಡಕ್ಕೆ ಇರುವ ಜನರೇಟರ್ ಮೇಲೆ ನಾವು ಹೆಚ್ಚು ಅವಲಂಬಿತವಾಗಿರಾದ್ದೇವೆ. ಕೆಲವೊಮ್ಮೆ ಲ್ಯಾಪ್‌ಟಾಪ್, ಮೊಬೈಲ್ ಚಾರ್ಚ್ ಮಾಡುವುದನ್ನು ಮರೆತಿರುತ್ತೇವೆ. ಕಚೇರಿಯ ಕರ್ತವ್ಯದ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಇಲ್ಲದಿರುವುದರಿಂದ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ರಾತ್ರಿವರೆಗೆ ಆನ್‌ಲೈನ್ ಕಚೇರಿ ಸಭೆಗಳು ಇರುತ್ತವೆ. ಹಾಗಾಗಿ ಬೆಸ್ಕಾಂನವರು ಶೀಘ್ರ ಸಮಸ್ಯೆ ಪರಿಹರಿಸಬೇಕು’ ಎಂದು ಐಟಿ ಉದ್ಯೋಗಿ ನಿಧಿ ಎಸ್. ಮನವಿ ಮಾಡಿದರು.
ಆನ್‌ಲೈನ್ ತರಗತಿಗೆ ಅಡ್ಡಿ
‘ಪದೇ ಪದೆ ವಿದ್ಯುತ್ ಕಡಿತಗೊಳ್ಳುವುದರಿಂದ ವೈ – ಫೈ ಸಂಪರ್ಕದ ಮೇಲೂ ಪರಿಣಾಮ ಬೀಳುತ್ತದೆ. ಇದರಿಂದ ಆನ್‌ಲೈನ್ ತರಗತಿಗಳನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಸುಗಮವಾಗಿ ಪಾಠ ಮಾಡಲು ಸಹ ತೊಂದರೆಯಾಗುತ್ತಿದೆ,” ಎಂದು ಶಿಕ್ಷಕಿ ಅಮೀನಾ ಬೇಗಂ ಹೇಳಿದರು.