Karnataka news paper

ನನ್ನದು, ಈಶ್ವರಪ್ಪನದ್ದು ಲವ್ ಆಂಡ್ ಹೇಟ್ ರಿಲೇಷನ್‌ಶಿಪ್ ಎಂದ ಸಿದ್ದರಾಮಯ್ಯ!


ಹೈಲೈಟ್ಸ್‌:

  • ಚರ್ಚೆಯ ಸಂದರ್ಭದಲ್ಲಿ ‘ನಿಮ್ಮ ಹಾಗೂ ಈಶ್ವರಪ್ಪ ನಡುವಿನ ಸ್ನೇಹದ ಗುಟ್ಟೇನು’ ಎಂದು ಕಿಚಾಯಿಸಿದ ಸ್ಪೀಕರ್
  • ನನ್ನದು ಹಾಗೂ ಈಶ್ವರಪ್ಪನದ್ದು ಲವ್ ಆಂಡ್ ಹೇಟ್ ರಿಲೇಷನ್ ಶಿಪ್ ಎಂದ ಸಿದ್ದರಾಮಯ್ಯ
  • ಮತಾಂತರ ನಿಷೇಧ ವಿಧೇಯಕದ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಮಾಜಿ ಸಿಎಂ ಹಾಸ್ಯ ಚಟಾಕಿಗೆ ಸದನದಲ್ಲಿ ನಗು

ಬೆಳಗಾವಿ: ನನ್ನದು ಹಾಗೂ ಸಚಿವ ಕೆ.ಎಸ್, ಈಶ್ವರಪ್ಪನದ್ದು ಲವ್ ಆಂಡ್ ಹೇಟ್ ರಿಲೇಷನ್ ಶಿಪ್! ಹೀಗಂದವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

ವಿಧಾನಸಭೆಯಲ್ಲಿ ಗುರುವಾರ ಮತಾಂತರ ನಿಷೇಧ ವಿಧೇಯಕದ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾರಿಸಿದ ಹಾಸ್ಯ ಚಟಾಕಿ ಸದನದಲ್ಲಿ ಗಮನ ಸೆಳೆಯಿತು.

ಚರ್ಚೆಯ ಸಂದರ್ಭದಲ್ಲಿ, ನಿಮ್ಮ ಹಾಗೂ ಈಶ್ವರಪ್ಪ ನಡುವಿನ ಸ್ನೇಹದ ಗುಟ್ಟೇನು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲೆಳೆದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನನ್ನದು ಹಾಗೂ ಈಶ್ವರಪ್ಪನದ್ದು ಲವ್ ಆಂಡ್ ಹೇಟ್ ರಿಲೇಷನ್ ಶಿಪ್. ಬಹಳ ಸಾರಿ ಹೇಳಿದ್ದೇನೆ ಇದನ್ನು ಸದನದಲ್ಲಿ ಎಂದರು.

ಈ ಸಂದರ್ಭ ಮಧ್ಯಪ್ರವೇಶ ಮಾಡಿದ ಕಂದಾಯ ಸಚಿವ ಆರ್. ‌ಅಶೋಕ್, ಲವ್ ಯಾಕೆ? ಹೇಟ್ ಯಾಕೆ? ಎಂದು ನಮಗೆಲ್ಲಾ ಹೇಳಿ ಎಂದರು.

‘ನಿಮ್ಗೆ ವಯಸ್ಸಾಗಿದೆ ಎಂದು ಯಾರು ಹೇಳಿದ್ರು?’; ಸದನದಲ್ಲಿ ಸಿದ್ದರಾಮಯ್ಯಗೆ ಈಶ್ವರಪ್ಪ ಪ್ರಶ್ನೆ
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಇದಕ್ಕಾಗಿ ನಾನು, ನೀವು ಮತ್ತು ಈಶ್ವರಪ್ಪ ಭೇಟಿ ಮಾಡೋಣ. ಅವಾಗ ಎಲ್ಲವನ್ನೂ ಹೇಳುತ್ತೇನೆ ಎಂದರು. ಈ ವೇಳೆ, ನೀವೆಲ್ಲಾ ಒಟ್ಟಾಗಿ ಸೇರಿದಾಗ ನನ್ನನ್ನೂ ಕರೆಯಿರಿ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯೂ ಹೇಳಿದರು.

ನಾನು ಹಿಂದೂ, ಹಿಂದೂ ಆಗಿದ್ದೇನೆ!

ಚರ್ಚೆಯ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ನಾನು ಹಿಂದೂ, ಹಿಂದೂ ಆಗಿದ್ದೇನೆ. ನಮ್ಮಪ್ಪ ಸಿದ್ದರಾಮಯ್ಯ ಅಂತಾ ಹೆಸರು ಇಟ್ಟಿರೋದು ಎಂದರು.

ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದರು? ಸಿದ್ದುಗೆ ಈಶ್ವರಪ್ಪ ಪ್ರಶ್ನೆ

ಇದಕ್ಕೂ ಮೊದಲು ವಿಧೇಯದಲ್ಲಿರುವ ಅಂಶಗಳನ್ನು ಉಲ್ಲೇಖ ಮಾಡುತ್ತಿದ್ದ ಸಿದ್ದರಾಮಯ್ಯ, “ನಾನು ಲವ್ ಮಾಡಿ ಒಬ್ಬಳನ್ನು ಮದುವೆಯಾಗುತ್ತೇನೆ ಎಂದಿಟ್ಟುಕೊಳ್ಳಿ,” ಎಂದವರೇ, “ನಾನು ಬಿಡಿ, ನನಗೆ ವಯಸ್ಸಾಗಿದೆ ಇವಾಗ” ಎಂದರು.

ಈ ವೇಳೆ ವಯಸ್ಸಿಗೂ ಪ್ರೀತಿಗೂ ಸಂಬಂಧ ಇದೆಯಾ? ಎಂದು ಸ್ಪೀಕರ್ ಪ್ರಶ್ನಿಸಿದರು. ಇದಕ್ಕೆ, “ಪ್ರೀತಿ ಬೇರೆ ಮದುವೆ ಬೇರೆ” ಎಂದ ಸಿದ್ದರಾಮಯ್ಯ, “ಪ್ರೀತಿ ಯಾವ ವಯಸ್ಸಿಗೂ ಮಾಡಬಹುದು. ಅದಕ್ಕೆ ಅಡ್ಡಿ ಇಲ್ಲ,” ಎಂದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕೆ.ಎಸ್‌. ಈಶ್ವರಪ್ಪ, “ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದರು?” ಎಂದು ಪ್ರಶ್ನೆ ಮಾಡಿದರು.

ಇದಕ್ಕೆ, “ನಾನೇ ಹೇಳಿದ್ದೇನೆ” ಎಂದು ಸಿದ್ದರಾಮಯ್ಯ ಹೇಳಿದರು. “ನಿಮ್ಮ ಮನೆಯವರು ಹೇಳಿಲ್ಲ ಅಲ್ವಾ?” ಎಂದು ಈಶ್ವರಪ್ಪ ಕಾಲೆಳೆದಾಗ, “ಮನೆಯವರು ಹೇಳಿಲ್ಲ, ನಾನೇ ಅಂದಕೊಂಡಿದ್ದೇನೆ” ಎಂದರು. “ನಿಮಗೇನಾದರೂ ಅನ್ನಿಸಿದ್ಯಾ?” ಎಂದು ಈಶ್ವರಪ್ಪಗೆ ಮರು ಪ್ರಶ್ನೆ ಹಾಕಿದಾಗ, “ಯಾವ ಕಾರಣಕ್ಕೂ ಇಲ್ಲ” ಎಂದು ಈಶ್ವರಪ್ಪ ಉತ್ತರಿಸಿದರು.

ಮತಾಂತರದ ಬಿಸಿ ಬಿಸಿ ಚರ್ಚೆಯ ಸಂದರ್ಭದಲ್ಲಿ ಪ್ರೀತಿ, ಮದುವೆ, ವಯಸ್ಸಿನ ವಿಚಾರವಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು.



Read more