ಇನ್ನು, ಈ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಕುರಿತು ಮಾತನಾಡಿದ ಉಪೇಂದ್ರ, ‘ನಾನು ಶಾಲೆಯಲ್ಲಿದ್ದಾಗಲೇ ಅರ್ಜುನ್ ಸರ್ಜಾ ಅವರು ಕರ್ನಾಟಕದಲ್ಲಿ ‘ಆ್ಯಕ್ಷನ್ ಕಿಂಗ್’ ಎಂದು ಜನಪ್ರಿಯರಾಗಿದ್ದರು. ಕರಾಟೆಗೆ ಬಹಳ ಜನಪ್ರಿಯರಾಗಿದ್ದರು. ಭಾರತದಲ್ಲಿ ಬ್ರೂಸ್ ಲೀ ಇದ್ದಂತೆ. ಎರಡ್ಮೂರು ಚಿತ್ರಗಳು ಹಿಟ್ ಆಗಿ, ಒಂದು ವರ್ಷ ಸುದ್ದಿಯೇ ಇರಲಿಲ್ಲ. ಅವರು ತಮಿಳಿನಲ್ಲಿ ದೊಡ್ಡ ಆ್ಯಕ್ಷನ್ ಸ್ಟಾರ್ ಆಗಿದ್ದರು. ಆಗಲೇ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ನಾನು ಕಾಲೇಜಿನಲ್ಲಿದ್ದಾಗಲೇ, ನನಗೆ ಸಂಭಾಷಣೆ ಬರೆಯುವುದಕ್ಕೆ ಅವರು ಆಫರ್ ಕೊಟ್ಟಿದ್ದರು. ನನಗೆ ಅವರು ದೊಡ್ಡ ಪ್ರೇರಣೆಯಾದವರು. ಅವರ ಜೊತೆಗೆ ಈ ವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಬಹಳ ಹೆಮ್ಮೆ ಆಗುತ್ತಿದೆ. ನನಗೆ ಅಂಥದ್ದೊಂದು ಅವಕಾಶವನ್ನು ನೀಡಿದ್ದಾರೆ. ಅದೇ ರೀತಿ ನನ್ನ ಅಣ್ಣನ ಮಗನಿಗೆ ಈ ಚಿತ್ರದಲ್ಲಿ ನಾಯಕನಾಗುವ ಅವಕಾಶ ನೀಡಿದ್ದಾರೆ’ ಎಂದರು.