Karnataka news paper

ಮತಾಂತರ ನಿಷೇಧ ಮಸೂದೆಯ ಪ್ರತಿ ಹರಿದ ಡಿಕೆಶಿ ಕ್ಷಮೆ ಯಾಚಿಸಬೇಕು: ಬಿಎಸ್‌ವೈ


ಬೆಳಗಾವಿ (ಸುವರ್ಣ ವಿಧಾನಸೌಧ): ‘ಮತಾಂತರ ನಿಷೇಧ ಕಾಯ್ದೆ ಬಗ್ಗೆ ಇಂದು ಚರ್ಚೆಯಾಗುತ್ತಿದೆ. ಡಿ.ಕೆ ಶಿವಕುಮಾರ್ ಮಸೂದೆಯ ಪ್ರತಿ ಹರಿದು, ಅಪಮಾನ ಮಾಡಿದ್ದಾರೆ. ಅದಕ್ಕೆ ಅವರು ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು. 

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಎಲ್ಲ ಕಡೆ ಸೋತಿದೆ. ಆದರೂ ಅವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ಲ’ ಎಂದರು. 

‘ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹೋಗಬೇಡಿ. ಮತಾಂತರ ನಿಷೇಧ ಕಾಯ್ದೆ ಅಂಗೀಕಾರಕ್ಕೆ ಸಹಕಾರ ಕೊಡಿ’ ಎಂದು ಕಾಂಗ್ರೆಸ್ ನಾಯಕರಿಗೆ ಅವರು ಮನವಿ ಮಾಡಿದರು. 

‘ದೇಶದಲ್ಲಿ 400 ಇದ್ದ ಕಾಂಗ್ರೆಸ್ ನವರು 46ಕ್ಕೆ ಬಂದಿದೆ. ಈಗ ಕರ್ನಾಟಕದಲ್ಲಿ ಅಲ್ಪಸ್ವಲ್ಪ ಉಸಿರಾಡುತ್ತಿದ್ದಾರೆ. ಕಾಯ್ದೆ ವಿರೋಧಿಸಿದರೆ ಅದನ್ನೂ‌ ಕಳೆದುಕೊಳ್ಳುತ್ತಾರೆ’ ಎಂದರು. 

ಎಂಇಎಸ್ ನಿಷೇಧಿಸಿ: ‘ ಎಂಇಎಸ್ ನವರು ಬುಧವಾರ ಮತ್ತೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಾರೆ. ಮುಖ್ಯಮಂತ್ರಿಯ ಪ್ರತಿಕೃತಿ ದಹನ‌ ಮಾಡಿದ್ದಾರೆ. ಎಂಇಎಸ್ ಹಾಗೂ ಶಿವಸೇನೆ ಉದ್ಧಟತನ ಹೆಚ್ಚಾಗಿದೆ‌’ ಎಂದು ಜೆಡಿಎಸ್ ಶಾಸಕ ಅನ್ನದಾನಿ ಹೇಳಿದರು. 

‘ಎಂಇಎಸ್ ನಿಷೇಧಕ್ಕೆ ಈಗಾಗಲೇ ನಾವು ಒತ್ತಾಯ ಮಾಡಿದ್ದೇವೆ’ ಎಂದರು. 

ಈಶ್ವರಪ್ಪ ಕಿಡಿ: ಸಚಿವ ಈಶ್ವರಪ್ಪಗೆ ಆರ್ಟಿಕಲ್ 21 ಬಗ್ಗೆ ಗೊತ್ತಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ‘ನಾವು ಇವರನ್ನು ಕೇಳಿ ಮಸೂದೆ ತರಬೇಕಾ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮುಂದೆ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಕಿಡಿಕಾರಿದರು.



Read more from source