ಹೈಲೈಟ್ಸ್:
- ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಒಮಿಕ್ರಾನ್ ಸೋಂಕು
- ಹಾವಳಿ ನಿಯಂತ್ರಣಕ್ಕೆ ಕೇಂದ್ರ ಸರಕಾರದಿಂದ ತ್ವರಿತ ಕ್ರಮ
- ಮುನ್ನೆಚ್ಚರಿಕೆ ವಹಿಸುವಂತೆ ದೇಶವಾಸಿಗಳಿಗೆ ಸರಕಾರ ಮನವಿ
ಭವಿಷ್ಯದಲ್ಲಿ ಕೊರೊನಾ ಅಲೆಗಳು ಪುನಃ ಅಪ್ಪಳಿಸಿದಲ್ಲಿ ಆರೋಗ್ಯ ಸೇವಾ ಕ್ಷೇತ್ರವು ತತ್ತರಿಸದಂತೆ ಮುನ್ನೆಚ್ಚರಿಕೆ ಕ್ರಮವು ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ಪ್ರತಿ ಜಿಲ್ಲೆಯಲ್ಲಿ ಒಬ್ಬರು ಆಮ್ಲಜನಕ ಆಡಳಿತ ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದವರು ಇರಲಿದ್ದಾರೆ. ಅವರಿಂದ ಅಗತ್ಯ ಮಾರ್ಗದರ್ಶನವನ್ನು ವೈದ್ಯಾಧಿಕಾರಿಗಳು, ಆಸ್ಪತ್ರೆಗಳು ಪಡೆಯಲು ಅನುಕೂಲವಾಗಲಿದೆ.
ದೇಶದ ವಿವಿಧ ಜಿಲ್ಲೆಗಳಲ್ಲಿ ಇದುವರೆಗೂ ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ 1,225 ಆಮ್ಲಜನಕ ಉತ್ಪಾದನೆ ಘಟಕಗಳನ್ನು ಕೇಂದ್ರ ಸರಕಾರವು ಸ್ಥಾಪಿಸಿದೆ. ಬೂಸ್ಟರ್ ಡೋಸ್ ಬೇಡ, ಎರಡೇ ಸಾಕು: ಸದ್ಯ ಕೊರೊನಾ ನಿರೋಧಕ ಲಸಿಕೆ ಎರಡೂ ಡೋಸ್‌ಗಳನ್ನು ಪಡೆದಿರುವವರಿಗೆ ಬೂಸ್ಟರ್ ಡೋಸ್ (ಮೂರನೇ ಡೋಸ್) ನೀಡುವ ಅಗತ್ಯವಿಲ್ಲ. ಪ್ರಾಕೃತಿಕವಾಗಿ ಉಂಟಾಗುವ ಸೋಂಕಿಗೆ ದೇಹದಲ್ಲಿ ರೋಗ ನಿರೋಧಕತೆಯನ್ನು ಸದೃಢವಾಗಿಸುವ ಶಕ್ತಿ ಲಸಿಕೆಗಳಿಗಿಂತ ಹೆಚ್ಚಿರುತ್ತದೆ ಎಂದು ಲಸಿಕೆ ಅಭಿಯಾನ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಸದಸ್ಯ ಡಾ. ಜಯಪ್ರಕಾಶ್ ಮುಳಿಯಿಲ್ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದಲ್ಲಿ ತ್ರಿಶತಕ ದಾಟಿದ ಕೋವಿಡ್ ಸೋಂಕು! ಬುಧವಾರ 321 ಹೊಸ ಪ್ರಕರಣ!
”ಬಹಳ ಬಾರಿ ರಚನೆ ಮಾರ್ಪ ಡಿಸಿಕೊಂಡಿರುವ ಕೊರೊನಾ ರೂಪಾಂತರಿಯಾದ ಓಮಿಕ್ರಾನ್ ಮಾರಣಾಂತಿವಲ್ಲ ಎನ್ನುವುದು ತಪ್ಪು ಭಾವನೆ. ಒಂದೇ ಒಂದು ಬಾರಿ ರೂಪಾಂತರಗೊಂಡರೂ ಕೊರೊನಾ ಮಾರಣಾಂತಿಕವಾಗಬಲ್ಲದು. ಅದರ ರಚನೆಯ ಸೂಕ್ಷ್ಮ ಅಧ್ಯಯನ ಬಾಕಿ ಇದೆ,” ಎಂದು ಅವರು ತಿಳಿಸಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರ ಮರೆಯಬೇಡಿ!
ದೇಶಾದ್ಯಂತ ಓಮಿಕ್ರಾನ್ ಸೋಂಕಿನ ಪ್ರಕರಣಗಳು ದ್ವಿಶತಕ ಬಾರಿಸಿದ ಬೆನ್ನಲ್ಲೇ ದಿಲ್ಲಿಏಮ್ಸ್ ನಿರ್ದೇಶಕ ಹಾಗೂ ಹಿರಿಯ ಶ್ವಾಸ ಕೋಶ ತಜ್ಞವೈದ್ಯ ಡಾ. ರಣದೀಪ್ ಗುಲೇರಿಯಾ ಅವರು ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ”ರೂಪಾಂತರಿ ವೈರಾಣುವನ್ನು ನಿಯಂತ್ರಿಸುವ ಲಸಿಕೆಗಳ ಮಿಶ್ರಣ ‘ಬೈವೆಲೆಂಟ್ ಲಸಿಕೆ’ ಗಳು ಶೀಘ್ರವೇ ಮಾರುಕಟ್ಟೆಗೆ ಬರಲಿವೆ. ಇದನ್ನು ಸೆಕೆಂಡ್ ಜನರೇಷನ್ ವ್ಯಾಕ್ಸಿನ್ ಎನ್ನಲಾಗುತ್ತದೆ. ಇವುಗಳಿಂದ ಕೊರೊನಾದ ಹೊಸ ರೂಪಾಂತರಿಗಳಿಗೆ ಪರಿಣಾಮಕಾರಿ ಅಂಕುಶ ಸಾಧ್ಯವಾಗಲಿದೆ. ಅಲ್ಲಿಯವರೆಗೂ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ತಪ್ಪದೇ ಪಾಲಿಸಬೇಕು,” ಎಂದು ಗುಲೇರಿಯಾ ಸೂಚಿಸಿದ್ದಾರೆ.