Karnataka news paper

ಒಕ್ಕಲಿಗರ ಸಂಘದ ಚುನಾವಣೆಗೂ ರಾಜಕೀಯ ಎಂಟ್ರಿ; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತದಾನಕ್ಕೆ ಕ್ಷಣಗಣನೆ!


ಹೈಲೈಟ್ಸ್‌:

  • ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ನಾಳೆ ನಡೆಯಲಿದೆ ಮತದಾನ; ಈ ಚುನಾವಣೆಯಲ್ಲೂ ಈಗ ರಾಜಕೀಯ ನುಸುಳಿರುವುದು ಕುತೂಹಲ ಕೆರಳುವಂತೆ ಮಾಡಿದೆ.
  • ಜಿಲ್ಲಾದ್ಯಂತ ಕೊನೆ ಸುತ್ತಿನ ಮತಬೇಟೆ ಜೋರು; ಜಿಲ್ಲೆಯಿಂದ ಮೂರು ನಿರ್ದೇಶಕ ಸ್ಥಾನಗಳಿಗೆ 12 ಮಂದಿ ಚುನಾವಣ ಕಣದಲ್ಲಿದ್ದಾರೆ
  • ಸದ್ಯದ ಮಟ್ಟಿಗೆ ಎರಡೂ ಜಿಲ್ಲೆಗಳಲ್ಲಿ ಸಚಿವ ಸುಧಾಕರ್‌ ಅವರು ಘೋಷಿಸಿರುವ ಸಿಂಡಿಕೇಟ್‌ ಬಿಟ್ಟರೆ ಬೇರೆ ಸಿಂಡಿಕೇಟ್‌ಗಳು ಇಲ್ಲ.

ಕಣಿತಹಳ್ಳಿ ಎನ್‌.ಚಂದ್ರೇಗೌಡ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ:ವಿಧಾನ ಪರಿಷತ್‌ ಚುನಾವಣೆ ಮತದಾನ ಮುಗಿದಿದೆ. ಈಗ ಈ ಚುನಾವಣೆಯನ್ನು ಮೀರಿಸುವಂತಹ ಮತ್ತೊಂದು ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ನಾಳೆ ನಡೆಯಲಿರುವ ಒಕ್ಕಲಿಗರ ಸಂಘದ ಚುನಾವಣೆಗೆ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈ ಚುನಾವಣೆಯಲ್ಲೂ ಈಗ ರಾಜಕೀಯ ನುಸುಳಿರುವುದು ಕುತೂಹಲ ಕೆರಳುವಂತೆ ಮಾಡಿದೆ.

ಗುರುವಾರದಿಂದ ಜಿಲ್ಲಾಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅಧಿಕೃತವಾಗೇ ಒಕ್ಕಲಿಗರ ಸಂಘದ ಚುನಾವಣಾ ಧುಮುಕಿ ಭರ್ಜರಿ ಪ್ರಚಾರ ಸಭೆಯನ್ನೂ ನಡೆಸಿದ್ದಾರೆ. ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಡಾ.ಡಿ.ಕೆ.ರಮೇಶ್‌, ಎಂ.ಪ್ರಕಾಶ್‌ ಹಾಗೂ ಟಿ.ಕೋನಪ್ಪರೆಡ್ಡಿಯವರನ್ನೊಳಗೊಂಡ ಸಿಂಡಿಕೇಟ್‌ಗೆ ಮತಚಲಾಯಿಸುವಂತೆ ಮನವಿ ಮಾಡಿದ್ದಾರೆ. ಇದಿಷ್ಟೇ ಅಲ್ಲ ಎಲ್ಲರೂ ಸಿಂಡಿಕೇಟ್‌ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದ್ದಾರೆ.

ಸಚಿವ ಸುಧಾಕರ್‌ ಪ್ರಚಾರ
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಜಿಲ್ಲೆಯಿಂದ ಮೂರು ನಿರ್ದೇಶಕ ಸ್ಥಾನಗಳಿಗೆ 12 ಮಂದಿ ಚುನಾವಣ ಕಣದಲ್ಲಿದ್ದಾರೆ. ಇವರ ಪೈಕಿ ಮೂವರ ಸಿಂಡಿಕೇಟ್‌ ಮಾಡಿ ಮತ ಚಲಾಯಿಸುವಂತೆ ಸಚಿವ ಡಾ.ಕೆ.ಸುಧಾಕರ್‌ ಪ್ರಚಾರ ನಡೆಸಿದ್ದು, ನಾಳೆ ಬೆಳಗ್ಗೆವರೆಗೂ ಈ ಮೂವರ ಪರ ಮತಚಲಾಯಿಸಲು ಸಮುದಾಯದ ಜನರ ಮನವೊಲಿಸುತ್ತೇನೆ. ನೀವೆಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಸಮುದಾಯದ ಮುಖಂಡರಿಗೆ ಕರೆ ಕೊಟ್ಟಿದ್ದಾರೆ.
ರಂಗೇರಿದ ಒಕ್ಕಲಿಗರ ಸಂಘದ ಚುನಾವಣೆ; ಬಾಡೂಟ, ಹಣ, ಗಿಫ್ಟ್‌ ಹಂಚಿಕೆಗೆ ಪೈಪೋಟಿ!
ರಾಜಕೀಯ ಬೇಡವಾಗಿತ್ತು
ಸದ್ಯದ ಮಟ್ಟಿಗೆ ಎರಡೂ ಜಿಲ್ಲೆಗಳಲ್ಲಿ ಸಚಿವ ಸುಧಾಕರ್‌ ಅವರು ಘೋಷಿಸಿರುವ ಸಿಂಡಿಕೇಟ್‌ ಬಿಟ್ಟರೆ ಬೇರೆ ಸಿಂಡಿಕೇಟ್‌ಗಳು ಇಲ್ಲ. ಬಹುತೇಕ ಮಂದಿ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಬೇರೆ ಪಕ್ಷಗಳವರು ಯಾವುದೇ ಸಿಂಡಿಕೇಟ್‌ ಮಾಡಿಲ್ಲ. ಒಕ್ಕಲಿಗರ ಸಂಘದ ಚುನಾವಣೆ ಒಂದು ಸಮುದಾಯಕ್ಕೆ ಸಂಬಂಧಿಸಿದ್ದು, ಈ ಚುನಾವಣೆಯಲ್ಲಿ ರಾಜಕೀಯದ ಅವಶ್ಯಕತೆ ಇಲ್ಲ. ಹೀಗಾಗೇ ನಾವು ಸಿಂಡಿಕೇಟ್‌ಗಳನ್ನು ಮಾಡಿಲ್ಲ. ಅರ್ಹ ಅಭ್ಯರ್ಥಿಗಳಿಗೆ ಸಮುದಾಯದ ಮುಖಂಡರು ಮತ ಹಾಕುತ್ತಾರೆ. ಇಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎನ್ನುತ್ತಾರೆ ಬೇರೆ ಪಕ್ಷದ ಮುಖಂಡರು.

64 ಸಾವಿರ ಮತದಾರರು
ವಿಧಾನ ಪರಿಷತ್‌ ಚುನಾವಣೆಯಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5600 ಮತಗಳು ಇದ್ದವು. ಆದರೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಿಂದ ಒಟ್ಟು 64,261 ಮತದಾರರಿದ್ದಾರೆ. ಕೋಲಾರ ತಾಲೂಕಿನಲ್ಲಿ ಅತಿಹೆಚ್ಚು 13033 ಮತದಾರರಿದ್ದಾರೆ. ಶಿಡ್ಲಘಟ್ಟ ತಾಲೂಕಿನಲ್ಲಿ11130, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 10205, ಚಿಂತಾಮಣಿ ತಾಲೂಕಿನಲ್ಲಿ10207 ಮತದಾರರಿದ್ದಾರೆ.

ಜಿಲ್ಲೆಯ ಯಲುವಳ್ಳಿ ಎನ್‌.ರಮೇಶ್, ಟಿ. ಕೋನಪ್ಪ ರೆಡ್ಡಿ, ಎಂ. ಪ್ರಕಾಶ್‌ ಕಣದಲ್ಲಿ ಇದ್ದಾರೆ. ಈ ಮೂವರನ್ನು ಹೊರತುಪಡಿಸಿ ಉಳಿದ 9 ಮಂದಿ ಕೋಲಾರ ಜಿಲ್ಲೆಯವರಾಗಿದ್ದಾರೆ. ಯಲುವಳ್ಳಿ ಎನ್‌.ರಮೇಶ್‌ ಮೂರು ಬಾರಿ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆ ಆಗಿದ್ದವರು. ಸಂಘದ ಖಜಾಂಚಿ ಆಗಿಯೂ ಕೆಲಸ ಮಾಡಿದ್ದಾರೆ. ಈಗ ಅವರು ನಾಲ್ಕನೇ ಬಾರಿ ಆಯ್ಕೆ ಬಯಸಿ ಕಣದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆ ಮಾಜಿ ಅಧ್ಯಕ್ಷ ಎಂ. ಪ್ರಕಾಶ…, ಕೋಲಾರದ ವೈದ್ಯ ಡಾ.ಡಿ.ಕೆ. ರಮೇಶ್‌ ಹಾಗೂ ಚಿಂತಾಮಣಿಯ ನಿವೃತ್ತ ಡಿವೈಎಸ್ಪಿ ಟಿ. ಕೋನಪ್ಪ ರೆಡ್ಡಿ ತಮ್ಮದೇ ಸಿಂಡಿಕೇಚ್‌ ರಚಿಸಿಕೊಂಡಿದ್ದು ಪ್ರಚಾರ ನಡೆಸಿದ್ದಾರೆ. ಈಗ ಸಚಿವ ಡಾ.ಕೆ.ಸುಧಾಕರ್‌ ಬಹಿರಂಗವಾಗೇ ಈ ಸಿಂಡಿಕೇಟ್‌ಗೆ ಬೆಂಬಲ ಸೂಚಿಸಿದ್ದಾರೆ.

ಉಳಿದಂತೆ ಟಿ.ಎಸ್ ಅಂಜಿನಪ್ಪ, ಎನ್‌.ಈಶ್ವರರೆಡ್ಡಿ, ಪಿ.ಎನ್‌.ಪರಮೇಶ, ರಘುನಾಥರೆಡ್ಡಿ, ಬಿ.ಆರ್‌.ಲಕ್ಷ್ಮಣ, ಸೊಣ್ಣಪ್ಪ, ವಿ.ರಮೇಶ್‌ ಬಾಬು, ಕೆ.ಎಸ್. ವೇಣುಗೋಪಾಲ್‌ ಸ್ಪರ್ಧೆಯಲ್ಲಿಇದ್ದಾರೆ. ಇವರೆಲ್ಲರೂ ಕೋಲಾರ ಜಿಲ್ಲೆಯವರಾಗಿದ್ದು, ಏಕಾಂಗಿ ಪ್ರಚಾರ ನಡೆಸುತ್ತಿದ್ದಾರೆ.

ಕಳೆದ ಬಾರಿ ಈ ಎರಡೂ ಜಿಲ್ಲೆಗಳಿಂದ ಯಲುವಳ್ಳಿ ರಮೇಶ…, ವಕ್ಕಲೇರಿ ರಾಮು ಮತ್ತು ಸತೀಶ್‌ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಯಲುವಳ್ಳಿ ರಮೇಶ್‌ ಮತ್ತು ಸತೀಶ್‌ ಆಯ್ಕೆ ಆಗುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಇಬ್ಬರು ಗೆಲುವು ಸಾಧಿಸಿದ್ದರು. ವಕ್ಕಲೇರಿ ರಾಮು ಕೋಲಾರ ಜಿಲ್ಲೆಯವರು. ವಕ್ಕಲೇರಿ ರಾಮು ಈಗ ಕೋಲಾರ ಚಿಕ್ಕಬಳ್ಳಾಪುರ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆಯೇ ಒಕ್ಕಲಿಗರ ಸಂಘದ ಚುನಾವಣೆ ಕಾವು ಏರುತ್ತಿತ್ತು. ಆದರೆ ಕೊರೊನಾ ಕಾರಣ ಮುಂದೂಡಲ್ಪಟ್ಟಿತ್ತು. ಆದರೂ ಆಗಿನಿಂದಲೇ ಸ್ಪರ್ಧಿಗಳು ಸಂಘದ ಸದಸ್ಯರ ಜೊತೆ ಸಂಪರ್ಕದಲ್ಲಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದಂತೆ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಫೋನ್‌ಗಳ ಮೂಲಕ ಕರೆ ಮತ್ತು ಸಂದೇಶಗಳನ್ನು ರವಾನಿಸಿದ್ದಾರೆ. ಅಲ್ಲದೇ ಆಟೋಗಳ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಮತಯಾಚಿಸುತ್ತಿದ್ದಾರೆ. ಒಂದಷ್ಟು ಕಡೆ ವೋಟಿಗಿಷ್ಟು ಎನ್ನುವ ಹಣದ ಆಮಿಷವನ್ನೂ ಒಡ್ಡಲಾಗುತ್ತಿದೆ.

ಪ್ರಮುಖಾಂಶ

ಒಕ್ಕಲಿಗರ ಸಂಘದ ಚುನಾವಣೆಗೆ ನಾಳೆ ಮತದಾನ
3 ನಿರ್ದೇಶಕ ಸ್ಥಾನಗಳಿಗೆ 12 ಮಂದಿ ಸ್ಪರ್ಧೆ
12 ಮಂದಿ ಸ್ಪರ್ಧಿಗಳ ಪೈಕಿ 9 ಮಂದಿ ಕೋಲಾರ ಜಿಲ್ಲೆಯವರು
ಜಿಲ್ಲೆಯಿಂದ ಮೂವರು ಅಭ್ಯರ್ಥಿಗಳ ಸ್ಪರ್ಧೆ
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ64,261 ಮತದಾರರ

ಒಕ್ಕಲಿಗರ ಸಂಘದ ಮತದಾರರ ವಿವರ

ಕೋಲಾರದಲ್ಲಿ13033, ಶಿಡ್ಲಘಟ್ಟದಲ್ಲಿ 11130, ಚಿಕ್ಕಬಳ್ಳಾಪುರದಲ್ಲಿ 10205, ಚಿಂತಾಮಣಿಯಲ್ಲಿ 10207, ಶ್ರೀನಿವಾಸಪುರದಲ್ಲಿ 3971, ಬಾಗೇಪಲ್ಲಿಯಲ್ಲಿ 3802, ಮುಳಬಾಗಿಲಲ್ಲಿ 3221, ಮಾಲೂರಲ್ಲಿ 3060, ಬಂಗಾರಪೇಟೆಯಲ್ಲಿ 2392, ಗೌರಿಬಿದನೂರರಲ್ಲಿ 1448, ಗುಡಿಬಂಡೆಯಲ್ಲಿ 1228, ಕೆಜಿಎಫ್‌ನಲ್ಲಿ 584 ಮಂದಿ ಮತದಾರರಿದ್ದು, ಒಟ್ಟು 64,261 ಮಂದಿ ಇದ್ದಾರೆ.



Read more