Karnataka news paper

ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ, ಪುಂಡಾಟಿಕೆ: ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನ, ನಾಳೆ ಬೆಳಿಗ್ಗೆಯವರೆಗೆ ನಿಷೇಧಾಜ್ಞೆ ಮುಂದುವರಿಕೆ


The New Indian Express

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಪುಂಡರು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಕಪ್ಪುಮಸಿ ಬಳಿದ ನಂತರ ಅದಕ್ಕೆ ಪ್ರತಿಯಾಗಿ ನಿನ್ನೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕಿಯರು ಹಾಗೂ ಬಿಜೆಪಿ ಮುಖಂಡ ಕಿರಣ್ ಜಾಧವ್ ಸೇರಿದಂತೆ ಅನೇಕರು ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು.

ಈಗ ಬೆಳಗಾವಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿದ ಪುಂಡರಿಗೆ ಪೊಲೀಸರು ತಕ್ಕ ಶಿಕ್ಷೆ ನೀಡಿದ್ದು ಈಗಾಗಲೇ 27 ಮಂದಿಯನ್ನು ಬಂಧಿಸಿ ಹಲವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಇನ್ನೊಂದು ಕಡೆ ಕನ್ನಡಪರ ಹೋರಾಟಗಾರರು ಇಂದು ಕೂಡ ಹೋರಾಟ ಮುಂದುವರಿಸಿದ್ದಾರೆ.

ಈ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯಲ್ಲಿ 27 ಮಂದಿಯನ್ನು ಹಾಗೂ ಬೆಂಗಳೂರಿನಲ್ಲಿ ಮೂವರನ್ನು ಬಂಧಿಸಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ನಾಳೆಯವರೆಗೆ ನಿಷೇಧಾಜ್ಞೆ ಮುಂದುವರಿಕೆ: ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಮುಂದುವರಿಸಿ ಪೊಲೀಸರು ಸೆಕ್ಷನ್ 144 ಜಾರಿಮಾಡಿದ್ದಾರೆ.

ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ: 27 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ, ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿ

ಬೆಳಗಾವಿಯಲ್ಲಿ ಕಿಡಿಗೇಳಿಗಳು ಮತ್ತು ಎಂಇಎಸ್ ಕಾರ್ಯಕರ್ತರು ಕೆಲ ದಿನಗಳ ಹಿಂದೆ ಕನ್ನಡ ಬಾವುಟವನ್ನು ಸುಟ್ಟು ಹಾಕಿದ ನಂತರ ಇಷ್ಟೆಲ್ಲಾ ದುರ್ಘಟನೆ ನಡೆಯಿತು. ಮುಯ್ಯಿಗೆ-ಮುಯ್ಯಿಗೆ ಎಂಬಂತೆ ಕನ್ನಪರ ಹೋರಾಟಗಾರರು ಮತ್ತು ಶಿವಸೇನೆ, ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.  ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸದಲ್ಲಿ ಎಂಇಎಸ್ ತೊಡಗಿದ್ದು ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಇಂದು ಪ್ರತಿಭಟನಾ ರ್ಯಾಲಿಯನ್ನು ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದಾರೆ. 

ಕಲ್ಲು ತೂರಾಟ, ಪ್ರತಿಭಟನೆಗೆ ಸಂಬಂಧಿಸಿದಂತೆ ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆಯ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ, ಎಂಇಎಸ್ ಯುವ ಘಟಕದ ಅಧ್ಯಕ್ಷ ಶುಭಂ ಶಳಕೆ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಲಯ ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಬಂಧಿತರಲ್ಲಿ ಬಹುತೇಕರು ಎಂಇಎಸ್ ಕಾರ್ಯಕರ್ತರಾಗಿದ್ದಾರೆ. 



Read more