Karnataka news paper

ಪಿಎಚ್‌.ಡಿಗಳ ಗುಣಮಟ್ಟ ವಿಶ್ಲೇಷಣೆ: ಉನ್ನತ ಶಿಕ್ಷಣ ಸಚಿವರಿಗೆ ಮುಖ್ಯಮಂತ್ರಿ ಸೂಚನೆ


ಬೆಳಗಾವಿ: ‘10 ವರ್ಷಗಳಲ್ಲಿ ಪಿಎಚ್‌.ಡಿ ಪದವಿಗೆ ನೀಡಲಾದ ಪ್ರಬಂಧಗಳ ಗುಣಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ತಾಲ್ಲೂಕಿನ ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನಗುಡ್ಡದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ದ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ, ಶಿಲಾನ್ಯಾಸ ಮತ್ತು ಸಂಗೊಳ್ಳಿರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಲಯದ 2ನೇ ಹಂತದ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರೆವೇರಿಸಿ ಅವರು ಮಾತನಾಡಿದರು.

‘ಪಿಎಚ್‌.ಡಿ ಪ್ರಬಂಧಗಳಿಂದ ಉಪಯೋಗ ಇದೆಯೇ, ಇಲ್ಲವೇ? ಎಲ್ಲಿಂದ ಕಟ್ ಅಂಡ್ ಪೇಸ್ಟ್ ಮಾಡಿದ್ದಾರೆ ಎನ್ನುವುದನ್ನು ಪರಿಶೀ
ಲಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣಗೆ ತಿಳಿಸಿದರು.

‘ಯಾವುದಾದರೂ ಪಿಎಚ್‌.ಡಿ ಪ್ರಬಂಧ ಕೊಡಿ. ಎಲ್ಲಿಂದ ಕಾಪಿ ಮಾಡಿದ್ದಾರೆ ಎಂದು ಹೇಳಬಲ್ಲೆ. ಪಿಎಚ್‌.ಡಿ ಪದವಿಗಳಲ್ಲಿ ಸ್ವಂತಿಕೆ ಇರಬೇಕು. ಏನನ್ನೂ ಕೊಡುಗೆ ಕೊಡದಿದ್ದರೆ ಅದೆಂತಹ ಪ್ರಬಂಧ? ಅಂಥವನ್ನು ಎಸ್ಸೆಸ್ಸೆಲ್ಸಿ ಹುಡುಗರು ಬೇಕಾದರೂ ಸಿದ್ಧಪಡಿಸುತ್ತಾರೆ’ ಎಂದರು.

‘ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದ ಬಲ ನೀಡಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಲಾಗಿದೆ. ಪೂರಕವಾಗಿ ವಿ.ವಿ.ಯವರ ಮನಸ್ಥಿತಿಯೂ ಬದಲಾಗಬೇಕು. ಕ್ಯಾಂಪಸ್‌ನಿಂದ ಹೊರ ಬಂದು ಜಗತ್ತು ನೋಡಬೇಕು. ಸ್ವಾಭಿಮಾನ ಉಳಿಸಿಕೊಳ್ಳುವಂತಹ ಸಂಶೋಧನೆಗಳನ್ನು ಮಾಡಬೇಕು. ಈ ವಿಷಯದಲ್ಲಿ ಕುಲಪತಿಗಳು ಸೇರಿದಂತೆ ವಿಶ್ವವಿದ್ಯಾಲಯದವರು ಚರ್ಚೆಗೆ ಬರಲಿ’ ಎಂದು ಸಲಹೆ ನೀಡಿದರು.

ಸಿ.ಎನ್. ಅಶ್ವತ್ಥನಾರಾಯಣ, ‘ರಾಜ್ಯದ 7 ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.



Read more from source