
ಬರ್ಲಿನ್, ಪ್ಯಾರಿಸ್ (ಪಿಟಿಐ, ರಾಯಿಟರ್ಸ್): ಫ್ರಾನ್ಸ್, ಜರ್ಮನಿ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿ ‘ಓಮೈಕ್ರಾನ್’ ವಿಸ್ತರಿಸುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಜರ್ಮನಿಯಲ್ಲಿ ಸೋಂಕು ಪ್ರಬಲವಾಗಲಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ದೇಶದಲ್ಲಿ ಬುಧವಾರ ಒಂದೇ ದಿನ 45,659 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಡಿಸೆಂಬರ್ 28ರಿಂದ ಖಾಸಗಿ ಸಮಾರಂಭಗಳು, ನೈಟ್ ಕ್ಲಬ್, ಡಿಸ್ಕೊ, ಬಾರ್ ಹಾಗೂ ಫುಟ್ಬಾಲ್ ಪಂದ್ಯಗಳಿಗೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ.
ಫ್ರಾನ್ಸ್‌ನಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಪ್ರತಿನಿತ್ಯ 1 ಲಕ್ಷ ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಪ್ರಕರಣಗಳಲ್ಲಿ ಓಮೈಕ್ರಾನ್ ಪ್ರಕರಣಗಳ ಪ್ರಮಾಣ ಶೇ 20ರಷ್ಟಿದ್ದು, ಪ್ಯಾರಿಸ್‌ನಲ್ಲಿ ಈ ಪ್ರಮಾಣ ಶೇ 35ರಷ್ಟಿದೆ ಎಂದು ಫ್ರಾನ್ಸ್ ಆರೋಗ್ಯ ಸಚಿವ ಒಲಿವರ್ ಹೇಳಿದ್ದಾರೆ.
ಹೊಸ ವರ್ಷದ ಮುನ್ನಾದಿನದ ದೊಡ್ಡ ಕಾರ್ಯಕ್ರಮಗಳನ್ನು ಈಗಾಗಲೇ ಲಂಡನ್ ಮತ್ತು ಎಡಿನ್‌ಬರ್ಗ್‌ನಲ್ಲಿ ರದ್ದುಗೊಳಿಸಲಾಗಿದೆ. ವೇಲ್ಸ್‌ನಲ್ಲಿ ಡಿ.26ರಿಂದ ಹೊಸ ನಿರ್ಬಂಧಗಳು ಜಾರಿಗೆ ಬರಲಿವೆ. ಆದರೆ, ಕುಟುಂಬದ ಕ್ರಿಸ್‌ಮಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ, ಕ್ವಾರಂಟೈನ್ ಅವಧಿಯನ್ನು 10 ದಿನಗಳಿಂದ 7 ದಿನಗಳಿಗೆ ಇಳಿಸಿ ಬ್ರಿಟನ್ ಸರ್ಕಾರ ಆದೇಶಿಸಿದೆ.
ಲಸಿಕಾ ಕಾರ್ಯಕ್ರಮಕ್ಕೆ ವೇಗ
5 ವರ್ಷದಿಂದ 11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಫ್ರಾನ್ಸ್ ಬುಧವಾರ ಚಾಲನೆ ನೀಡಿದೆ. 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಫಿನ್ಲೆಂಡ್ ನಿರ್ಧರಿಸಿದೆ.
ಓಮೈಕ್ರಾನ್ ವಿರುದ್ಧ ಕೆಲಸ ಮಾಡಬಲ್ಲ 8 ಕೋಟಿ ಲಸಿಕೆ ಡೋಸ್‌ಗಳನ್ನು ಪೂರೈಸುವಂತೆ ಬಯೊಎನ್‌ಟೆಕ್ ಜೊತೆ ಜರ್ಮನಿ ಬುಧವಾರ ಒಪ್ಪಂದ ಮಾಡಿಕೊಂಡಿದೆ. ನೊವೊವ್ಯಾಕ್ಸ್‌ನ 40 ಲಕ್ಷ ಡೋಸ್, ವಾಲ್‌ನೆವಾ ಸಂಸ್ಥೆಯ 1.1 ಕೋಟಿ ಡೋಸ್‌ಗೂ ಬೇಡಿಕೆ ಸಲ್ಲಿಸಲಾಗಿದೆ. ಲಾಕ್‌ಡೌನ್ ತಡೆಯುವ ಉದ್ದೇಶದಿಂದ, 60 ವರ್ಷ ದಾಟಿದವರಿಗೆ 4ನೇ ಡೋಸ್ ಲಸಿಕೆ ನೀಡಲು ಇಸ್ರೇಲ್ ಸರ್ಕಾರ ಮುಂದಾಗಿದೆ.
ದೇಶವನ್ನು ಓಮೈಕ್ರಾನ್ ಬಾಧಿಸುತ್ತಿದ್ದು, ವೈರಾಣು ನಿರೋಧಕವಾಗಿ ಕೆಲಸ ಮಾಡಬಲ್ಲ 42 ಲಕ್ಷ ಮಾತ್ರೆಗಳನ್ನು ಖರೀದಿಸಲು ಬ್ರಿಟನ್ ನಿರ್ಧರಿಸಿದೆ