ಬೆಂಗಳೂರು: ಸಂಗೀತ ಸಂಯೋಜಕ, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ಹೊಸ ಆಲ್ಬಂ ‘ಡಿವೈನ್ ಟೈಡ್ಸ್’ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಖ್ಯಾತ ರಾಕ್ ಸಂಗೀತಗಾರ ಸ್ಟುವರ್ಟ್ ಕೋಪ್ಲ್ಯಾಂಡ್ ಅವರ ಜೊತೆಗೂಡಿ ರಿಕಿ ಕೇಜ್ ಈ ಆಲ್ಬಂ ನಿರ್ಮಾಣ ಮಾಡಿದ್ದಾರೆ. 9 ಹಾಡು ಹಾಗೂ 8 ಮ್ಯೂಸಿಕ್ ವಿಡಿಯೊ ಹೊಂದಿರುವ ಈ ಆಲ್ಬಂನಲ್ಲಿ ದೇಶವಿದೇಶದ ಖ್ಯಾತ ಕಲಾವಿದರು ಹಾಡಿದ್ದಾರೆ. ಲಹರಿ ಮ್ಯೂಸಿಕ್ ಸಂಸ್ಥೆ ಈ ಆಲ್ಬಂ ಹೊರತಂದಿದೆ. 64ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‌ನಲ್ಲಿ 2022ರ ಜ.31ರಂದು ನಡೆಯಲಿದ್ದು, ಇಲ್ಲಿ ವಿಜೇತರ ಘೋಷಣೆಯಾಗಲಿದೆ.
2015ರಲ್ಲಿ ರಿಕಿ ಕೇಜ್ ಅವರ ‘ವಿಂಡ್ಸ್ ಆಫ್ ಸಂಸಾರ’ ಎಂಬ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಆದರ್ಶಗಳನ್ನು ಆಧರಿಸಿ ಇದನ್ನು ನಿರ್ಮಾಣ ಮಾಡಲಾಗಿತ್ತು. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ಡಿವೈನ್ ಟೈಡ್ಸ್’ ನಮ್ಮ ನಿಸರ್ಗದ ಕುರಿತಾಗಿದ್ದು, ಹಿಮಾಲಯದ ಸೌಂದರ್ಯದಿಂದ ಹಿಡಿದು ಸ್ಪೇನ್‌ನ ಹಿಮಾವೃತ ಕಾಡುಗಳನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ.