Karnataka news paper

ಆರಂಭದಲ್ಲೇ ಮುಗ್ಗರಿಸಿದ ಬುಲ್ಸ್, ಮುಂಬೈ ಎದುರು ತಬ್ಬಿಬ್ಬಾದ ಬೆಂಗಳೂರು!


ಹೈಲೈಟ್ಸ್‌:

  • ಬೆಂಗಳೂರು ಬುಲ್ಸ್‌ ಎದುರು ಅಭಿಷೇಕ್ ಸಿಂಗ್ ಮಿಂಚಿನ ರೇಡಿಂಗ್.
  • ಮಾಜಿ ಚಾಂಪಿಯನ್ ಯು ಮುಂಬಾಗೆ 46-30 ಅಂತರದ ಭರ್ಜರಿ ಜಯ
  • ನಿರೀಕ್ಷಿತ ಪ್ರದರ್ಶನ ಹೊರತರಲು ವಿಫಲವಾದ ಪವನ್ ಕುಮಾರ್‌ ಪಡೆ.

ಬೆಂಗಳೂರು: ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂ ನಿಸ್ತೇಜ ಪ್ರದರ್ಶನ ನೀಡಿದ 2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ಎರಡು ವರ್ಷಗಳ ಬಳಿಕ ಆರಂಭವಾದ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಟೂರ್ನಿಯ 8ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಮುಗ್ಗರಿಸಿದೆ.

ವೈಟ್ ಫೀಲ್ಡ್ ನಲ್ಲಿರುವ ಐಶಾರಾಮಿ ಪಂಚಾತಾರ ಹೋಟೆಲ್‌ನಲ್ಲಿ ನಿರ್ಮಿಸಲಾಗಿರುವ ಬಯೋ ಬಬಲ್‌ ಒಳಗೆ ಬುಧವಾರ ನಡೆದ ಮೊದಲ ಹಣಾಹಣಿಯಲ್ಲಿ ರೇಡರ್ ಪವನ್ ಕುಮಾರ್ ಸೆಹ್ರಾವತ್ ನೇತೃತ್ವದ ಬುಲ್ಸ್ 30-46 ಅಂಕಗಳಿಂದ ಫಜಲ್ ಅತ್ರಾಚಲಿ ಸಾರಥ್ಯದ ಮುಂಬಾಗೆ ಶರಣಾಯಿತು.

ರೇಡರ್ ಪವನ್ ಕುಮಾರ್ ತಂದ ಬೋನಸ್ ಅಂಕದೊಂದಿಗೆ ಖಾತೆ ತೆರೆದ ಬೆಂಗಳೂರು ತಂಡ 4-1ರಲ್ಲಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ ಆನಂತರದ ರೇಡರ್ ಅಭಿಷೇಕ್ ಸಿಂಗ್ ಅವರ ಸಾಹಸದಿಂದ ಮುಂಬಾ ತಂಡ ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂ ಮಿಂಚುವ ಮೂಲಕ 7ನೇ ನಿಮಿಷದಲ್ಲಿ ಬುಲ್ಸ್ ತಂಡವನ್ನು ಕಟ್ಟಿಹಾಕಿ 5-11ರಲ್ಲಿ ಮುನ್ನಡೆ ಸಾಧಿಸಿತು.

ಬೆಂಗಳೂರಿನ ಪಂಚತಾರ ಹೋಟೆಲ್‌ನಲ್ಲಿ ಪ್ರೊ ಕಬಡ್ಡಿ ಲೀಗ್ ಆಯೋಜನೆ!

ನಂತರ ಪವನ್ (12 ಅಂಕ) ಹಾಗೂ ಚಂದ್ರನ್ ರಂಜಿತ್ (13 ಅಂಕ ) ದಿಟ್ಟ ಹೋರಾಟ ನಡೆಸಿದ ಪರಿಣಾಮ ಪ್ರಥಮಾರ್ಧಕ್ಕೂ ಮುನ್ನ ಬುಲ್ಸ್ 17-18ರಲ್ಲಿ ಮರು ಹೋರಾಟ ಸಂಘಟಿಸಿತು. ಆದರೆ 22ನೇ ನಿಮಿಷದಲ್ಲಿ ಮತ್ತೆ ಆಲೌಟ್‌ಗೆ ಒಳಗಾದ ಬುಲ್ಸ್ 18-28ರಲ್ಲಿ ಭಾರಿ ಅಂತರದ ಹಿನ್ನಡೆ ಅನುಭವಿ ಸೋಲಿನ ಸುಳಿಗೆ ಸಿಲುಕಿತು.

ನಂತರ ಏಕಪಕ್ಷೀಯ ಪ್ರದರ್ಶನ ನೀಡಿದ ಮುಂಬಾ 38ನೇ ನಿಮಿಷದಲ್ಲಿ ಮತ್ತೊಮ್ಮೆ ಬುಲ್ಸ್ ಅಂಗಣವನ್ನು ಖಾಲಿ ಮಾಡಿಸಿ ಗೆಲುವು ಖಚಿತಪಡಿಸಿಕೊಂಡಿತು. ಮುಂಬಾ ಪರ ಏಕಾಂಗಿ ಹೋರಾಟ ನೀಡಿದ ಅಭಿಷೇಕ್ 15 ಟಚ್ ಪಾಯಿಂಟ್ಸ್ ಹಾಗೂ ನಾಲ್ಕು ಬೋನಸ್ ಅಂಕ ಸೇರಿ 19 ಅಂಕ ಗಳಿಸಿ ಗೆಲುವಿನ ರೂವಾರಿಯೆನಿಸಿದರು.

ಯು ಮುಂಬಾ ಸದ್ದಡಗಿಸಿ ಶುಭಾರಂಭ ಮಾಡುವ ತವಕದಲ್ಲಿ ಬುಲ್ಸ್‌!

ರಾಷ್ಟ್ರಗೀತೆ ಹಾಡಿದ ನೀರಜ್
ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಜೋಪ್ರಾ ವರ್ಚುವಲ್ ವೇದಿಕೆ ಮೂಲಕ ರಾಷ್ಟ್ರಗೀತೆ ಹಾಡುವುದರೊಂದಿಗೆ ಪಿಕೆಎಲ್ 8ನೇ ಆವೃತ್ತಿಗೆ ಚಾಲನೆ ನೀಡಿದರು. ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇದೇ ಮೊದಲ ಬಾರಿ ಪ್ರೇಕ್ಷಕ ರಹಿತ ಹಾಗೂ ಬಯೋ ಬಬಲ್ ವಾತಾವರಣದಲ್ಲಿ ಟೂರ್ನಿ ಆಯೋಜಿಸಲಾಗಿದೆ.

ಫ್ಯಾನ್ ವಾಲ್‌ಗೆ ಆದ್ಯತೆ
ಪ್ರೇಕ್ಷಕ ರಹಿತವಾಗಿ ಟೂರ್ನಿ ಆಯೋಜಿಸಿರುವುದರಿಂದ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸಲು ಫ್ಯಾನ್ ವಾಲ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ವಿವಿಧ ಭಾಗಗಳಿಂದ ಅಭಿಮಾನಿಗಳು ತಮ್ಮ ತಂಡಗಳನ್ನು ಪ್ರೋತ್ಸಾಹಿಸುವ ದೃಶ್ಯಾವಳಿಗಳನ್ನು ಮೈದಾನದ ಗ್ಯಾಲರಿಯಲ್ಲಿ ಅಳವಡಿಸಲಾಗಿರುವ ಫ್ಯಾನ್ ವಾಲ್ ನಲ್ಲಿ ಪಂದ್ಯದುದ್ದಕ್ಕೂ ಬಿತ್ತರಿಸಲಾಗುತ್ತದೆ.

ಬೆಂಗಳೂರು ಬುಲ್ಸ್‌ ಪಂದ್ಯಗಳ ವೇಳಾಪಟ್ಟಿ
ಮೊದಲ ಚರಣದ ಹನ್ನೊಂದು ಪಂದ್ಯಗಳ ವಿವರ

  • ಬೆಂಗಳೂರು ಬುಲ್ಸ್‌ vs ಯು ಮುಂಬಾ (ಡಿ.22): ಬೆಂಗಳೂರಿಗೆ 30-46 ಅಂತರದ ಸೋಲು
  • ಬೆಂಗಳೂರು ಬುಲ್ಸ್‌ vs ತಮಿಳ್‌ ತಲೈವಾಸ್‌ (ಡಿ.24)
  • ಬೆಂಗಳೂರು ಬುಲ್ಸ್‌ vs ಬೆಂಗಾಲ್‌ ವಾರಿಯರ್ಸ್‌ (ಡಿ.26)
  • ಬೆಂಗಳೂರು ಬುಲ್ಸ್‌ vs ಹರಿಯಾಣ ಸ್ಟೀಲರ್ಸ್‌ (ಡಿ.30)
  • ಬೆಂಗಳೂರು ಬುಲ್ಸ್‌ vs ತೆಲುಗು ಟೈಟನ್ಸ್‌ (ಜ.01)
  • ಬೆಂಗಳೂರು ಬುಲ್ಸ್‌ vs ಪುಣೇರಿ ಪಲ್ಟನ್‌ (ಜ.02)
  • ಬೆಂಗಳೂರು ಬುಲ್ಸ್‌ vs ಜೈಪುರ ಪಿಂಕ್‌ ಪ್ಯಾಂಥರ್ಸ್‌ (ಜ.06)
  • ಬೆಂಗಳೂರು ಬುಲ್ಸ್‌ vs ಯುಪಿ ಯೋಧಾ (ಜ.09)
  • ಬೆಂಗಳೂರು ಬುಲ್ಸ್‌ vs ದಬಾಂಗ್‌ ಡೆಲ್ಲಿ (ಜ.12)
  • ಬೆಂಗಳೂರು ಬುಲ್ಸ್‌ vs ಗುಜರಾತ್‌ ಜಯಂಟ್ಸ್‌ (ಜ.14)
  • ಬೆಂಗಳೂರು ಬುಲ್ಸ್‌ vs ಪಟನಾ ಪೈರೇಟ್ಸ್‌ (ಜ.16)



Read more