Karnataka news paper

ಕ್ರಿಸ್‌ಮಸ್‌ ಪ್ರಾರ್ಥನೆ: ಹೈಕೋರ್ಟ್ ಷರತ್ತುಬದ್ಧ ಅನುಮತಿ


ಬೆಂಗಳೂರು: ‘ಕ್ರಿಸ್‌ಮಸ್‌ ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ಚಟುವಟಿಕೆ ನಡೆಸಲಾಗುತ್ತಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗಣಪತಿ ಕಟ್ಟೆ ರಸ್ತೆಯ ಎಸ್ತೆಲಾ ಲೂಯಿಸ್ ಅವರು ತಮ್ಮ ಮನೆಯಲ್ಲಿ ಹಮ್ಮಿಕೊಂಡಿರುವ ಕ್ರಿಸ್‌ಮಸ್‌ ಪ್ರಾರ್ಥನೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

‘ಕ್ರಿಸ್‌ಮಸ್‌ ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ಚಟುವಟಿಕೆ ನಡೆಸಲಾಗುತ್ತಿದೆ’ ಎಂದು ಆರೋಪಿಸಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಜಾರಿಗೊಳಿಸಿದ್ದ ನೋಟಿಸ್ ಪ್ರಶ್ನಿಸಿ ಎಸ್ತೆಲಾ ಲೂಯಿಸ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಕುರಿತ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ಸರ್ಕಾರಿ ವಕೀಲ ವಿನೋದ್ ಕುಮಾರ್, ‘ಅರ್ಜಿದಾರರು ಕ್ರಿಸ್‌ಮಸ್‌ ಪ್ರಾರ್ಥನೆ ಹೆಸರಿನಲ್ಲಿ ಅನ್ಯ ಧರ್ಮದವರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಪೊಲೀಸರು ನೋಟಿಸ್ ನೀಡಿದ್ದಾರೆ. ಆದ್ದರಿಂದ, ಅರ್ಜಿದಾರರ ಮನೆಯಲ್ಲಿ ಕ್ರಿಸ್‌ಮಸ್‌ ಪ್ರಾರ್ಥನೆಗೆ ಅನುಮತಿ ನೀಡಬಾರದು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ‘ಎಸ್ತೆಲಾ ಮನೆಯಲ್ಲಿ ಕ್ರಿಸ್‌ಮಸ್‌ ಪಾರ್ಥನೆ ವೇಳೆ ಯಾವುದೇ ಮತಾಂತರ ಚಟುವಟಿಕೆ ನಡೆಯಲಿದೆ ಎಂಬ ಸಂಶಯ ಬೇಡ. ಅಲ್ಲಿ ಕೇವಲ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಪ್ರಾರ್ಥನೆ ಮಾಡಲಾಗುತ್ತಿದೆ’ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಅರ್ಜಿದಾರರು ತಮ್ಮ ಮನೆಯಲ್ಲಿ ಕ್ರಿಸ್‌ಮಸ್‌ ಪ್ರಾರ್ಥನೆ ಮಾಡಬಹುದು. ಈ ಸಂದರ್ಭದಲ್ಲಿ ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕ ತೊಂದರೆ ಉಂಟು ಮಾಡಬಾರದು. ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಬಾರದು’ ಎಂದು ಷರತ್ತು ವಿಧಿಸಿ ಅನುಮತಿ ನೀಡಿತು. ‘ಪ್ರಾರ್ಥನೆ ಸಂದರ್ಭದಲ್ಲಿ ಪೊಲೀಸರು ಮನೆಯ ಮೇಲೆ ನಿಗಾ ವಹಿಸಬಹುದು’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

 

 



Read more from source