Karnataka news paper

‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದ ಮೂಲಕ ದಾಖಲೆ ಬರೆದ ‘ಜೊತೆ ಜೊತೆಯಲಿ’ ನಟ ಅನಿರುದ್ಧ


ಹೈಲೈಟ್ಸ್‌:

  • ಭಾರತಿ ವಿಷ್ಣುವರ್ಧನ್‌ ಅವರ ಬದುಕು ಹಾಗೂ ಚಿತ್ರ ಜೀವನ ಕುರಿತ ಸಾಕ್ಷ್ಯಚಿತ್ರ
  • ಸಾಕ್ಷ್ಯಚಿತ್ರಕ್ಕೆ ‘ಬಾಳೇ ಬಂಗಾರ’ ಎಂಬ ಶೀರ್ಷಿಕೆ ನೀಡಿದ್ದ ಅನಿರುದ್ಧ
  • ಹಲವು ದಾಖಲೆಗಳನ್ನು ಬರೆದಿರುವ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರ

ಜೊತೆ ಜೊತೆಯಲಿ‘ ಧಾರಾವಾಹಿ ಮೂಲಕ ಕರುನಾಡಿನ ಕಿರುತೆರೆ ವೀಕ್ಷಕರ ಮನಗೆದ್ದ ನಟ ಅನಿರುದ್ಧ ಜತ್ಕರ್ ಈಗ ಒಂದು ಸಾಧನೆ ಮಾಡಿದ್ದಾರೆ. ಈಚೆಗಷ್ಟೇ ಅವರು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಕುರಿತು ‘ಬಾಳೇ ಬಂಗಾರ’ ಎಂಬ ಸಾಕ್ಷ್ಯಚಿತ್ರವನ್ನು ಮಾಡಿದ್ದರು. ಇದೀಗ ಆ ಸಾಕ್ಷ್ಯಚಿತ್ರಕ್ಕೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಜೊತೆಗೆ ಹೊಸ ದಾಖಲೆಗಳನ್ನು ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರ ಸೃಷ್ಟಿಸಿದೆ. ಈ ಬಗ್ಗೆ ಅನಿರುದ್ಧ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಕೊಂಡಿರುವ ಅನಿರುದ್ಧ ಅವರು, ‘ನನ್ನ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆಗಳನ್ನು ಸ್ಥಾಪಿಸಿರುವೆನೆಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತ್ಯಂತ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ದಾಖಲೆ, ಶೀರ್ಷಿಕೆ ಮತ್ತು ವರ್ಣನೆ ಬದುಕಿರುವ ಮೇರು ನಟಿಯೊಬ್ಬರ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ಇದಾಗಿದೆ’ ಎಂದು ಹೇಳಿದ್ದಾರೆ.

ಭಾರತದ ಮೇರು ನಟಿಯ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ದ ಪರಿಕಲ್ಪನೆ, ಸಂಶೋಧನೆ, ಲೇಖನ, ನಿರೂಪಣೆ ಹಾಗೂ ನಿರ್ದೇಶನದ ದಾಖಲೆಯನ್ನು ಅನಿರುದ್ಧ ಸ್ಥಾಪಿಸಿದ್ದಾರೆ. ಕೀರ್ತಿ ಇನ್ನೋವೇಷನ್ಸ್ ನಿರ್ಮಾಣದ ಕನ್ನಡ ಭಾಷೆಯ ಆಂಗ್ಲ ಅಡಿಬರಹಗಳನ್ನು ಹೊಂದಿದ, 141 ನಿಮಿಷಗಳ ಕಾಲಾವಧಿಯ ಸಾಕ್ಷ್ಯಚಿತ್ರವು ಹೊಂದಿದೆ. ಈ ಸಾಕ್ಷ್ಯಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್‌ ಅವರ ಖ್ಯಾತ ಚಿತ್ರಗಳ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಇದುವರೆಗೂ ಯಾರೂ ನೋಡದ ಒಂದಷ್ಟು ಫೋಟೋಗಳು ಸಹ ಈ ಸಾಕ್ಷ್ಯಚಿತ್ರದಲ್ಲಿ ಇವೆ. ಗುರುಕಿರಣ್‌ ಇದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ‘ಅಮ್ಮಾ ಅವರ ಸಾಕಷ್ಟು ಚಿತ್ರಗಳನ್ನು ನೋಡಿ, ರಿಸರ್ಚ್ ಮಾಡಿ ಇದನ್ನು ನಿರ್ದೇಶನ ಮಾಡಿದ್ದೇನೆ. ನಿರ್ದೇಶನದ ಜತೆಗೆ ಸ್ಕ್ರಿಪ್ಟ್‌ ಮತ್ತು ನಿರೂಪಣೆಯೂ ನನ್ನದೇ ಆಗಿದೆ. ಭಾರತಿ ಅವರ ಜತೆ ನಟಿಸಿದ ಕೆಲ ಕಲಾವಿದರು ಅವರ ಬಗೆಗೆ ಆಡಿದ ಮಾತುಗಳು ಸಹ ಇವೆ. ಅವರನ್ನು ಹೊರತುಪಡಿಸಿದರೆ ಅವರ ಅಣ್ಣ, ತಮ್ಮ, ತಂಗಿ, ಸ್ನೇಹಿತರು, ಕಾಲೇಜು ಪ್ರಾಂಶುಪಾಲರು ಹೀಗೆ ಭಾರತಿ ವಿಷ್ಣುವರ್ಧನ್‌ ಅವರ ಒಟ್ಟು ಬದುಕನ್ನು ಸೆರೆಹಿಡಿದಿದ್ದೇನೆ’ ಎನ್ನುತ್ತಾರೆ ಅನಿರುದ್ಧ.

‘ಯಾಣ’ ಅಂತಾರಾಷ್ಟ್ರೀಯ ಮಟ್ಟದ ಸ್ಥಳ, ಆದಷ್ಟು ಬೇಗ ಅಲ್ಲಿ ರೂಪ್‌ವೇ ಆಗಬೇಕು: ನಟ ಅನಿರುದ್ಧ

‘ಬಾಳೇ ಬಂಗಾರ ಸಾಕ್ಷ್ಯಚಿತ್ರವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಭಾರತಿ ವಿಷ್ಣುವರ್ಧನ್ ಅವರ ಜೀವನವನ್ನು ಕಟ್ಟಿಕೊಡುತ್ತದೆ. ಈ ಸಾಕ್ಷ್ಯಚಿತ್ರವನ್ನು ನೋಡಲು ನೀವು ಕಾತುರರಾಗಿದ್ದೀರಿ ಎಂದು ನನಗೆ ಗೊತ್ತು. ಅತಿ ಶೀಘ್ರದಲ್ಲೇ ನಿಮ್ಮ ನೆಚ್ಚಿನ ವೇದಿಕೆಗಳಲ್ಲಿ ಇದನ್ನು ತಾವು ನೋಡಬಹುದು…’ ಎಂದು ಅನಿರುದ್ಧ ಹೇಳಿದ್ದಾರೆ. ಈ ದಾಖಲೆಗಳೂ ಸೇರಿದಂತೆ, ಇದುವರೆಗೂ ಇಪ್ಪತ್ತು ದಾಖಲೆಗಳನ್ನು ಅನಿರುದ್ಧ ಅವರು ಸೃಷ್ಟಿಸಿದ್ದಾರಂತೆ!

ಆ ಪಾರ್ಟಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೆಣ್ಣುಮಕ್ಕಳನ್ನು ಹೊಗಳಿದ್ರು: ಅನಿರುದ್ಧ



Read more