ಹೈಲೈಟ್ಸ್:
- ಚೀನಾದ ಗಂಝೌ ಪ್ರಾಂತ್ಯದಲ್ಲಿ ಪತ್ತೆಯಾದ ಅಪರೂಪದ ಡೈನೋಸಾರ್ ಮೊಟ್ಟೆ
- ಮೊಟ್ಟೆಯಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿ ಇರುವ ಭ್ರೂಣ ಕಂಡು ವಿಜ್ಞಾನಿಗಳ ಅಚ್ಚರಿ
- ಡೈನೋಸಾರ್‌ಗಳ ಉಗಮ ಹಾಗೂ ಬೆಳವಣಿಗೆ ಅಧ್ಯಯನಕ್ಕೆ ಮಹತ್ವದ ತಿರುವು
- ಡೈನೋಸಾರ್ ಭ್ರೂಣ ಇರುವ ಸ್ಥಿತಿ, ಈಗಿನ ಕಾಲದ ಹಕ್ಕಿಗಳ ಭ್ರೂಣಗಳಿಗೆ ಹೋಲಿಕೆ
ಚೀನಾದ ದಕ್ಷಿಣ ಭಾಗದಲ್ಲಿರುವ ಗಂಝೌ ಪ್ರಾಂತ್ಯದ ಕಲ್ಲುಬಂಡೆಗಳ ನಡುವೆ ದೊರೆತ ಡೈನೋಸಾರ್ ಮೊಟ್ಟೆಯ ಒಳಗೆ ಭ್ರೂಣವನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ವಿಜ್ಞಾನ ಲೋಕದಲ್ಲಿ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ. ಈ ಮೊಟ್ಟೆಯು 72 ರಿಂದ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಈ ಭ್ರೂಣಕ್ಕೆ ‘ಬೇಬಿ ಯಿಂಗ್ಲಿಯಾಂಗ್’ ಎಂದು ಹೆಸರಿಡಲಾಗಿದೆ. ಇದು ಒವಿರಾಪ್ಟೊರೊಸಾರ್ (Oviraptorosaur) ಎಂದು ಕರೆಯಲಾಗುವ ಹಲ್ಲುರಹಿತ ಥೆರೋಪಾಡ್ ಡೈನೋಸರ್ ಸಮೂಹಕ್ಕೆ ಸೇರಿದ್ದಾಗಿದೆ. ಒವಿರಾಪ್ಟೊರೊಸಾರ್ ಪ್ರಾಣಿಗಳು ಏಷ್ಯಾ ಮತ್ತು ಉತ್ತರ ಅಮೆರಿಕಗಳಲ್ಲಿ ಕ್ರಿಟೇಷಿಯಸ್ (Cretaceous Period) ಯುಗದಲ್ಲಿ (145- 66 ಮಿಲಿಯನ್ ವರ್ಷಗಳ ಹಿಂದೆ) ಜೀವಿಸಿದ್ದವು.
ಈ ಭ್ರೂಣ ಇದ್ದ ಸ್ಥಿತಿ ವಿಜ್ಞಾನಿಗಳಲ್ಲಿ ಸಾಕಷ್ಟು ಆಸಕ್ತಿ ಮೂಡಿಸಿದೆ. ಭ್ರೂಣದ ತಲೆಯು ಅದರ ದೇಹದ ಅಡಿಯಲ್ಲಿ ಇತ್ತು. ಅದರ ಕಾಲುಗಳು ಎರಡೂ ಬದಿಗೆ ಹಿಂದಕ್ಕೆ ಚಾಚಿಕೊಂಡಿದ್ದು, ಮೊಟ್ಟೆಯ ತುದಿಯವರೆಗೂ ಇವೆ ಎಂದು ಸಂಶೋಧಕರ ತಂಡ ತಿಳಿಸಿದೆ.
ಡೈನೋಸಾರ್ ಭ್ರೂಣದ ಈ ಸ್ಥಿತಿಯು ಆಧುನಿಕ ದಿನದ ಪಕ್ಷಿಗಳ ಭ್ರೂಣದಲ್ಲಿಯೂ ಇರುವಂತೆ ಇದೆ. ‘ಈ ಡೈನೋಸಾರ್ ಭ್ರೂಣ ಅದರ ಮೊಟ್ಟೆಯ ಒಳಗೆ ಇರುವುದು ನಾನು ಕಂಡ ಅತ್ಯಂತ ಸುಂದರ ಪಳೆಯುಳಿಕೆಗಳಲ್ಲಿ ಒಂದು. ಈ ಪುಟಾಣಿ ಪ್ರಸವಪೂರ್ವ ಡೈನೋಸಾರ್, ತನ್ನ ಮೊಟ್ಟೆಯೊಳಗೆ ಸುರುಳಿ ಸುತ್ತಿಕೊಂಡಿರುವ ಪಟ್ಟ ಹಕ್ಕಿಯಂತೆ ಇದೆ. ಇಂದಿನ ಹಕ್ಕಿಗಳು ಅವುಗಳ ಪೂರ್ವಜ ಡೈನೋಸಾರ್‌ಗಳ ಅನೇಕ ಗುಣಗಳನ್ನು ಹೊಂದಿರುವುದಕ್ಕೆ ಮತ್ತಷ್ಟು ಪುರಾವೆಗಳು ಸಿಕ್ಕಿದೆ’ ಎಂದು ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಟೀವ್ ಬ್ರುಸೇಟ್ ತಿಳಿಸಿದ್ದಾರೆ.
ಸಂಶೋಧಕರು ಕಂಡುಕೊಂಡ ಅಂಶಗಳು ‘ಐಸೈನ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಡೈನೋಸಾರ್ ಭ್ರೂಣವು 17 ಸೆಂಮೀ ಉದ್ದದ ಮೊಟ್ಟೆಯ ಒಳಗೆ ಸುರುಳಿ ಸುತ್ತಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ತಲೆಯಿಂದ ಬಾಲದವರೆಗೆ 27 ಸೆಂಮೀ ಉದ್ದ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಅಪರೂಪದ ಮೊಟ್ಟೆಯನ್ನು ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂನಲ್ಲಿ ಇರಿಸಲಾಗಿದೆ.
‘ಡೈನೋಸಾರ್ ಭ್ರೂಣಗಳು ಅತ್ಯಂತ ಅಪರೂಪದ ಪಳೆಯುಳಿಕೆಗಳಾಗಿವೆ ಮತ್ತು ಹೆಚ್ಚಿನವು ಮೂಳೆಗಳು ತಪ್ಪಿಹೋದ ಅಪೂರ್ಣ ಸ್ಥಿತಿಯಲ್ಲಿದ್ದವು. ಈಗ ಬೇಬಿ ಯಿಂಗ್ಲಿಯಾಂಗ್ ಪತ್ತೆಯಿಂದ ನಮ್ಮಲ್ಲಿ ಕೌತುಕ ಹೆಚ್ಚಿದೆ. ಅದು ಇಷ್ಟು ವರ್ಷಗಳ ಕಾಲ ಅತ್ಯದ್ಭುತ ಸ್ಥಿತಿಯಲ್ಲಿ ಸಂರಕ್ಷಿತವಾಗಿತ್ತು. ಡೈನೋಸಾರ್‌ಗಳ ಬೆಳವಣಿಗೆ ಮತ್ತು ಮರು ಸಂತಾನೋತ್ಪತ್ತಿಯ ಕುರಿತು ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯವಾಗಲಿದೆ. ಡೈನೋಸಾರ್ ಭ್ರೂಣ ಮತ್ತು ಕೋಳಿಯ ಭ್ರೂಣಗಳು ಮೊಟ್ಟೆಯ ಒಳಗೆ ಒಂದೇ ರೀತಿ ಇರುವುದು ಆಸಕ್ತಿಕರವಾಗಿದೆ’ ಎಂದು ಬರ್ಮಿಂಗ್‌ಹ್ಯಾಮ್ ವಿವಿಯ ಪಿಎಚ್‌ಡಿ ಸಂಶೋಧಕಿ ಫಿಯಾನ್ ವೈಸುಮ್ ಮಾ ತಿಳಿಸಿದ್ದಾರೆ.