Karnataka news paper

‘ಮೇರೆ ಪಾಸ್ ಬೆಹೆನ್ ಹೈ’: ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಸಿನಿಮಾ ಡೈಲಾಗ್!


ಹೈಲೈಟ್ಸ್‌:

  • ದೀವಾರ್ ಚಿತ್ರದ ಜನಪ್ರಿಯ ಸಂಭಾಷಣೆಯನ್ನು ನೆನಪಿಸಿಕೊಂಡ ಪ್ರಿಯಾಂಕಾ ಗಾಂಧಿ
  • ನನ್ನ ಜತೆ ಸಹೋದರಿಯರಿದ್ದಾರೆ, ಅವರು ರಾಜಕೀಯದಲ್ಲಿ ಬದಲಾವಣೆ ತರಲಿದ್ದಾರೆ
  • ಮಹಿಳಾ ಮತದಾರರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಸ್ಪರ್ಧೆ

ಲಕ್ನೋ: ಚುನಾವಣೆ ಸನ್ನಿಹಿತವಾಗುತ್ತಿರುವ ಉತ್ತರ ಪ್ರದೇಶದಲ್ಲಿ ನಿರಂತರ ಸಂಚರಿಸುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ, ಬಾಲಿವುಡ್ ಸಿನಿಮಾದ ಜನಪ್ರಿಯ ಡೈಲಾಗ್‌ನ ಹೊಡೆಯುವ ಮೂಲಕ, ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಗೆಲುವು ತಂದುಕೊಡುವುದರಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಆಡಳಿತಾರೂಢ ಬಿಜೆಪಿ ಒಂದರ ಹಿಂದೊಂದು ಯೋಜನೆಗಳನ್ನು ಉದ್ಘಾಟನೆ ಮಾಡುವ ಮೂಲಕ ಹಾಗೂ ಹೊಸ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಉತ್ತರ ಪ್ರದೇಶ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿದ್ದೇವೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ವಿರೋಧಪಕ್ಷಗಳಾದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ತಮ್ಮ ಅಸ್ತಿತ್ವವನ್ನು ಮರಳಿ ಕಂಡುಕೊಳ್ಳಲು ಹರಸಾಹಸ ಪಡುತ್ತಿವೆ.
ಹಿಂದಿನ ಸರ್ಕಾರಗಳನ್ನು ಮತ್ತೆ ತರಲು ಮಹಿಳೆಯರು ಬಯಸುವುದಿಲ್ಲ: ಪ್ರಧಾನಿ ಮೋದಿ
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಿಂದ ಅಧಿಕಾರವನ್ನು ತನ್ನ ಕೈಗೆ ಕಿತ್ತುಕೊಳ್ಳಲು ಕಾಂಗ್ರೆಸ್ ಹೇಗೆ ಪ್ರಯತ್ನಿಸಲಿದೆ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸುವ ವಿಡಿಯೋವನ್ನು ಪ್ರಿಯಾಂಕಾ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ಸಮಾವೇಶಗಳಲ್ಲಿಯೂ ಕಾಂಗ್ರೆಸ್ ಮಹಿಳೆಯರ ಬಗ್ಗೆ ಮಾತನಾಡುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ಅದಕ್ಕೆ ನೆಲೆಯೇ ಉಳಿದಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರಿಯಾಂಕಾ, 1975ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಮತ್ತು ಶಶಿ ಕಪೂರ್ ಅಭಿನಯದ ‘ದೀವಾರ್’ ಚಿತ್ರದ ಬಹು ಜನಪ್ರಿಯ ಸಂಭಾಷಣೆಯನ್ನು ಹೇಳಿದ್ದಾರೆ.

”ನೀವು ದೀವಾರ್‌ನ ಈ ಡೈಲಾಗ್ ಅನ್ನು ಕೇಳಿದ್ದೀರಾ? ಅಮಿತಾಬ್ ಬಚ್ಚನ್ ಮತ್ತು ಶಶಿ ಕಪೂರ್ ಅವರು ಈ ಚಿತ್ರದಲ್ಲಿ ಸಹೋದರರು. ‘ಮೇರೆ ಪಾಸ್ ಗಾಡಿ ಹೈ, ಮೇರೆ ಪಾಸ್ ಬಂಗ್ಲಾ ಹೈ, ಯೇ ಹೈ, ವೋ ಹೈ’ ಎಂದು ಅಮಿತಾಬ್ ಹೇಳುತ್ತಾರೆ. ಆಗ ಶಶಿ ಕಪೂರ್ ‘ಮೇರೆ ಪಾಸ್ ಮಾ ಹೈ’ (ನನ್ನ ಜೊತೆ ಅಮ್ಮ ಇದ್ದಾಳೆ) ಎಂದು ಹೇಳುತ್ತಾರೆ. ಅದೇ ರೀತಿ ನಾನು ಹೇಳುತ್ತೇನೆ, ಮೇರೆ ಪಾಸ್ ಬೆಹೆನ್ ಹೈ’ (ನನ್ನ ಜೊತೆ ಸಹೋದರಿಯರು ಇದ್ದಾರೆ)” ಎಂದು ಪ್ರಿಯಾಂಕಾ ಹೇಳಿದ್ದಾರೆ.
ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಹೆಚ್ಚಲು ಹಿಂದುತ್ವವಾದಿಗಳ ಆಡಳಿತವೇ ಕಾರಣ; ರಾಹುಲ್ ಗಾಂಧಿ
‘ನನ್ನ ಜತೆ ಸಹೋದರಿಯರಿದ್ದಾರೆ… ಸಹೋದರಿಯರು ರಾಜಕಾರಣದಲ್ಲಿ ಬದಲಾವಣೆ ತರಲಿದ್ದಾರೆ. ಮಹಿಳೆಯರು, ಮಹಿಳಾ ಶಕ್ತಿಯೂ ಆಗಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ 40ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ಈಗಾಗಲೇ ಪ್ರಕಟಿಸಿದೆ. ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಉತ್ತರ ಪ್ರದೇಶ ಉಸ್ತುವಾರಿಯಾಗಿರುವ ಪ್ರಿಯಾಂಕಾ ಗಾಂಧಿ ಮುಂದಾಳತ್ವದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದೆ. ಇನ್ನೊಂದೆಡೆ ಬಿಜೆಪಿ ಕೂಡ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಅದಕ್ಕಾಗಿ ಸ್ವಸಹಾಯ ಗುಂಪುಗಳಿಗೆ 1,000 ಕೋಟಿ ರೂ ನೀಡುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದ್ದರು.



Read more