Karnataka news paper

ವಿಡಿಯೋ ನೋಡಿ: ಮಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಿ ಮೆರವಣಿಗೆ ಮಾಡಿದ ಚಾಯ್ ವಾಲಾ!


PTI

ಶಿವಪುರಿ: ಮಧ್ಯಪ್ರದೇಶದಲ್ಲಿ ಟೀ ಮಾರುವ ವ್ಯಕ್ತಿಯೊಬ್ಬರು ತಮ್ಮ ಐದು ವರ್ಷದ ಮಗಳಿಗೆ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಸಂಭ್ರಮಾಚರಣೆ ಮಾಡಿದ್ದು, ಬಾಲಕಿಯನ್ನು ಅಲಂಕರಿಸಿದ ಕುದುರೆ ಗಾಡಿಯ ಮೇಲೆ ಕೂರಿಸಿಕೊಂಡು ಡ್ರಮ್ ಬೀಟ್‌ಗಳಿಗೆ ನೃತ್ಯ ಮಾಡುವ ಮೂಲಕ ಮೆರವಣಿಗೆ ಮಾಡಿದ್ದಾರೆ.

12,500 ರೂಪಾಯಿ ವೆಚ್ಚದಲ್ಲಿ ಖರೀದಿಸಿದ ತನ್ನ ಕುಟುಂಬದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

ಸೋಮವಾರ ರಾತ್ರಿ ನಡೆದ ಈ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಕ್ಲಿಪ್‌ನಲ್ಲಿ, ಹುಡುಗಿ ಮತ್ತು ಅವಳ ಒಡಹುಟ್ಟಿದವರು ದೀಪಗಳಿಂದ ಅಲಂಕರಿಸಲ್ಪಟ್ಟ ಕುದುರೆ ಗಾಡಿಯ ಮೇಲೆ ಕುಳಿತುಕೊಂಡಿದ್ದಾರೆ, ಮೆರವಣಿಗೆಯಲ್ಲಿ ಹಾಡೊಂದಕ್ಕೆ ಜನ ನೃತ್ಯ ಮಾಡುತ್ತಿದ್ದಾರೆ.

ಚಹಾ ಮಾರಿ ಜೀವನ ಸಾಗಿಸುತ್ತಿರುವ ಮುರಾರಿ ಕುಶ್ವಾಹ ಅವರು ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಹ್ಯಾಂಡ್ ಸೆಟ್ ಖರೀದಿಸಿದ ನಂತರ ಮೊಬೈಲ್ ಫೋನ್ ಅಂಗಡಿಯಿಂದ ಶಿವಪುರಿ ಪಟ್ಟಣದ ಹಳೆಯ ಪ್ರದೇಶದಲ್ಲಿರುವ ಅವರ ಮನೆವರೆಗೆ ಮೆರವಣಿಗೆ ಮಾಡಲಾಯಿತು ಮತ್ತು ಪಟಾಕಿ ಸಿಡಿಸಲಾಯಿತು ಎಂದಿದ್ದಾರೆ.

ನಂತರ, ತಮ್ಮ ಮನೆಯಲ್ಲಿ ಸ್ನೇಹಿತರಿಗೆ ಪಾರ್ಟಿ ನೀಡಿರುವುದಾಗಿ ಮುರಾರಿ ತಿಳಿಸಿದ್ದಾರೆ.

ತನ್ನ ಐದು ವರ್ಷದ ಮಗಳು ತನಗೆ ಮೊಬೈಲ್ ಫೋನ್ ಕೊಡಿಸುವಂತೆ ಬಹಳ ದಿನಗಳಿಂದ ಮನವಿ ಮಾಡುತ್ತಿದ್ದಳು ಎಂದಿರುವ ಮುರಾರಿ, ತಾನು ಮಗಳಿಗೆ ಫೋನ್ ಖರೀದಿಸಿದ್ದು ಇಡೀ ನಗರಕ್ಕೆ ತಿಳಿಯಲಿದೆ ಎಂದು ಭರವಸೆ ನೀಡಿದ್ದಾಗಿ ಹೇಳಿದ್ದಾರೆ.





Read more