Karnataka news paper

ICC Rankings: ಕುಸಿದ ಕೊಹ್ಲಿ, ರೂಟ್‌ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಲಾಬುಶೇನ್‌!


ಹೈಲೈಟ್ಸ್‌:

  • ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ ಮಾರ್ನಸ್‌ ಲಾಬುಶೇನ್‌.
  • ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಅವರನ್ನು ಹಿಂದಿಕ್ಕಿದ ಆಸೀಸ್‌ ಬ್ಯಾಟರ್‌.
  • ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಜಂಟಿ ಅಗ್ರ ಸ್ಥಾನಕ್ಕೇರಿದ ಆಝಮ್, ಮಲಾನ್‌.

ಹೊಸದಿಲ್ಲಿ: ಕಳೆದ ಆಗಸ್ಟ್ ತಿಂಗಳಿನಿಂದ ಟೆಸ್ಟ್‌ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿ ಉಳಿದಿದ್ದ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಅವರನ್ನು ಹಿಂದಿಕ್ಕುವ ಮೂಲಕ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಅಗ್ರ ಸ್ಥಾನಕ್ಕೇರಿದ್ದಾರೆ. ಆದರೆ, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 6 ರಿಂದ 7ನೇ ಸ್ಥಾನಕ್ಕೆ ಇಳಿದಿದ್ದಾರೆ.

ಕಳೆದ ಸೋಮವಾರ ಅಂತ್ಯವಾಗಿದ್ದ ಅಡಿಲೇಡ್‌ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮಾರ್ನಸ್‌ ಲಾಬುಶೇನ್‌ ಆಷಸ್‌ ಸರಣಿಯ ಮೊದಲ ಶತಕ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ(103 ಮತ್ತು 51) ಅರ್ಧಶತಕ ಸಿಡಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡದ 275 ರನ್‌ಗಳ ಭರ್ಜರಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಮಾರ್ನಸ್‌ ಲಾಬುಶೇನ್‌ ಐಸಿಸಿ ಟೆಸ್ಟ್ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ 900ಕ್ಕೂ ಹೆಚ್ಚಿನ ಅಂಕಗಳನ್ನು ಕಲೆ ಹಾಕಿದ ಆಸ್ಟ್ರೇಲಿಯಾದ 9ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆ ಮೂಲಕ ಈ ಹಿಂದೆ ಈ ಸಾಧನೆ ಮಾಡಿದ್ದ ಆಸ್ಟ್ರೇಲಿಯಾದ ದಿಗ್ಗಜರಾದ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌, ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್, ಸ್ಟೀವನ್‌ ಸ್ಮಿತ್‌ ಹಾಗೂ ಮೈಕಲ್‌ ಕ್ಲಾರ್ಕ್‌ ಅವರನ್ನೊಳಗೊಂಡ ಎಲೈಟ್‌ ಪಟ್ಟಿಗೆ ಹೊಸದಾಗಿ ಲಾಬುಶೇನ್‌ ಸೇರ್ಪಡೆಯಾದರು.

ಕನ್ನಡಿಗರೇ ಓಪನರ್ಸ್‌! ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI ಇಂತಿದೆ..

ಕಳೆದ ಜನವರಿ ಬಳಿಕ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ತಂಡದ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಐಸಿಸಿ ಟೆಸ್ಟ್‌ ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಲಗ್ಗೆ ಇಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಆಡದ ಹೊರತಾಗಿಯೂ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್ ಟೆಸ್ಟ್‌ ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ತವರು ಟೆಸ್ಟ್‌ ಸರಣಿಯಲ್ಲಿ ಕೊನೆಯ ಪಂದ್ಯವಾಡಿದ್ದ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದ್ದರು. ಕಳೆದ ಬಾರಿ ಬಿಡುಗಡೆಯಾಗಿದ್ದ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ 6ನೇ ಸ್ಥಾನಲ್ಲಿಯೇ ಉಳಿದಿದ್ದ ಕೊಹ್ಲಿಇದೀಗ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮತ್ತೊಂದೆಡೆ ರೋಹಿತ್‌ ಶರ್ಮಾ 5ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.

ಇಗ್ಲೆಂಡ್‌ ತಂಡದ ಓಲ್ಲೀ ರಾಬಿನ್ಸನ್‌ 597 ಅಂಕಗಳನ್ನು ಪಡೆಯುವ ಮೂಲಕ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಅಗ್ರ 25 ಬೌಲರ್‌ಗಳ ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಇನ್ನು ಇಂಗ್ಲೆಂಡ್‌ ನಾಯಕ ಜೋ ರೂಟ್‌ ವೃತ್ತಿ ಜೀವನದ 111ನೇ ಪಂದ್ಯದ ಮೂಲಕ ಟಾಪ್‌ 10 ಆಲ್‌ರೌಂಡರ್‌ಗಳ ಒಳಗೆ ಚೊಚ್ಚಲ ಪ್ರವೇಶ ಮಾಡಿದ್ದಾರೆ.

ಅಗ್ರ ಸ್ಥಾನವನ್ನು ಹಂಚಿಕೊಂಡ ಆಝಮ್‌-ಮಲಾನ್‌

ಐಸಿಸಿ ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಝಮ್‌ ಹಾಗೂ ಇಂಗ್ಲೆಂಡ್‌ ತಂಡದ ಡಾವಿಡ್‌ ಮಲಾನ್ ಅವರು ಜಂಟಿಯಾಗಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಆಝಮ್‌ ಆರಂಭಿಕ ಜೊತೆಗಾರ ಮೊಹಮ್ಮದ್‌ ರಿಝ್ವಾನ್ ಬ್ಯಾಟ್ಸ್‌ಮನ್‌ಗಳ ಅಗ್ರ ಮೂರರಲ್ಲಿ ಸ್ಥಾನ ಪಡೆದ ಪಾಕಿಸ್ತಾನದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್‌ 0-3 ಅಂತರದಲ್ಲಿ ಸೋಲು ಅನುಭವಿಸಿದ ಹೊರತಾಗಿಯೂ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ನಿಕೋಲಸ್‌ ಪೂರನ್‌ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಆಡಿದ್ದ ಮೂರು ಪಂದ್ಯಗಳಲ್ಲಿ 147.94 ಸ್ಟ್ರೈಕ್‌ ರೇಟ್‌ನೊಂದಿಗೆ ಅವರು 108 ರನ್‌ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು 30 ರಿಂದ 27ನೇ ಸ್ಥಾನಕ್ಕೇರಿದ್ದಾರೆ.



Read more