Karnataka news paper

ಕೋವಿಶೀಲ್ಡ್‌ ಬೂಸ್ಟರ್‌ ಡೋಸ್‌ ಸದ್ಯಕ್ಕೆ ಬೇಡ – ಕೇಂದ್ರ ಸ್ಪಷ್ಟನೆ; ಸೀರಂ ಪ್ರಸ್ತಾವನೆ ತಿರಸ್ಕೃತ


ಹೈಲೈಟ್ಸ್‌:

  • ಕೋವಿಶೀಲ್ಡ್‌ ಕೊರೊನಾ ಲಸಿಕೆಯ 3ನೇ ಡೋಸ್‌ ನೀಡುವ ಅಗತ್ಯ ಸದ್ಯಕ್ಕಿಲ್ಲ
  • ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ರಚಿಸಿರುವ ವಿಷಯ ತಜ್ಞರ ಸಮಿತಿ ಸದಸ್ಯರು ಅಭಿಪ್ರಾಯ
  • 3ನೇ ಡೋಸ್‌ ನೀಡಲು ಅನುಮತಿ ಕೇಳಿದ್ದ ಸೀರಂ ಇನ್ಸ್‌ಟ್ಯೂಟ್‌ನ ಪ್ರಸ್ತಾವನೆ ತಿರಸ್ಕೃತ

ಹೊಸದಿಲ್ಲಿ: ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ರಚಿಸಿರುವ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಸದಸ್ಯರು ಕೋವಿಶೀಲ್ಡ್‌ ಮೂರನೇ ಡೋಸ್‌ ನೀಡುವ ಅಗತ್ಯ ಸದ್ಯಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ 3ನೇ ಡೋಸ್‌ ನೀಡಲು ಅನುಮತಿ ಕೇಳಿದ್ದ ಆದರ್‌ ಪೂನಾವಾಲಾ ಅವರ ಸೀರಂ ಇನ್ಸ್‌ಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕಂಪನಿಯ ಪ್ರಸ್ತಾವನೆ ತಿರಸ್ಕೃತಗೊಂಡಿದೆ.

ಇನ್ನೂ ಹೆಚ್ಚಿನ ದಾಖಲೆಗಳನ್ನು ಎಸ್‌ಐಐನಿಂದ ಸಮಿತಿಯು ಬಯಸಿದೆ. ಹೊಸ ರೂಪಾಂತರಿ ಕಾಣಿಸಿಕೊಂಡಿದೆ. ಜತೆಗೆ ಬೂಸ್ಟರ್‌ ಡೋಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂಬ ನೆಪವೊಡ್ಡಿ ಎಸ್‌ಐಐ, 3ನೇ ಡೋಸ್‌ಗೆ ಪ್ರಸ್ತಾವನೆ ಸಲ್ಲಿಸಿತ್ತು. ಬ್ರಿಟನ್‌ನ ಆರೋಗ್ಯ ಸೇವೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಬೂಸ್ಟರ್‌ ಡೋಸ್‌ಗೆ ಅನುಮತಿ ನೀಡಿರುವುದನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿತ್ತು.

ಇದೇ ವೇಳೆ, ‘ಬಯೊಲಾಜಿಕಲ್‌ ಇ’ ಕಂಪನಿಯು ತನ್ನ ದೇಶೀಯ ಕೊರೊನಾ ಲಸಿಕೆ ಕಾರ್ಬಿವ್ಯಾಕ್ಸ್‌ನ ಹೆಚ್ಚುವರಿ ಡೋಸ್‌ ಕ್ಲಿನಿಕಲ್‌ ಪ್ರಯೋಗಕ್ಕೆ ಕೋರಿದ್ದ ಮನವಿಯನ್ನು ಕೂಡ ಸಮಿತಿ ತಿರಸ್ಕರಿಸಿದೆ.

ಜಿಲ್ಲಾ ಮಟ್ಟದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ
ಜಿಲ್ಲೆಗಳಲ್ಲಿ ನಿಗಾ ವಹಿಸಿ

ಕೇರಳ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿಕೊರೊನಾ ಸೋಂಕಿನ ಪಾಸಿಟಿವಿಟಿ ದರವು ಶೇ. 10 ದಾಟಿರುವುದಕ್ಕೆ ಕೇಂದ್ರ ಸರಕಾರ ಕಳವಳ ವ್ಯಕ್ತಪಡಿಸಿದೆ. ಈ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು, ”ಜಿಲ್ಲಾ ಮಟ್ಟದಲ್ಲೇ ಕೊರೊನಾ ಪ್ರಸರಣ ಹತ್ತಿಕ್ಕುವುದು ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಸಂಚಾರ ನಿರ್ಬಂಧ, ಮಾಸ್ಕ್‌ಗಳ ಕಡ್ಡಾಯ ಧಾರಣೆ ಕ್ರಮಗಳನ್ನು ಬಿಗಿಗೊಳಿಸಿ,” ಎಂದು ನಿರ್ದೇಶನ ನೀಡಿದ್ದಾರೆ.

ದೇಶದಲ್ಲಿ 25 ಓಮಿಕ್ರಾನ್‌ ಕೇಸ್‌ ಪತ್ತೆ, ಎಲ್ಲರಲ್ಲೂ ಸೌಮ್ಯ ರೋಗ ಲಕ್ಷಣ – ಕೇಂದ್ರ ಮಾಹಿತಿ
“ಪಾಸಿಟಿವಿಟಿ ದರವು ಶೇ. 10 ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಕರ್ಫ್ಯೂ ಜಾರಿ ಮಾಡಬಹುದು. ಸಾಮಾಜಿಕ, ರಾಜಕೀಯ, ಧಾರ್ಮಿಕ ಸಭೆಗಳನ್ನು ನಿರ್ಬಂಧಿಸಬಹುದು. ವಿವಾಹ ಅಥವಾ ಸಾವಿನ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆ ಕನಿಷ್ಠ ಪ್ರಮಾಣಕ್ಕೆ ಇಳಿಸಬಹುದು,” ಎಂದು ಕೇಂದ್ರ ಸರಕಾರವು ರಾಜ್ಯಗಳಿಗೆ ಸಲಹೆ ನೀಡಿದೆ. ಜತೆಗೆ, ಕೊರೊನಾ ತಪಾಸಣೆ (ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌) ಹೆಚ್ಚಳ ಮಾಡಿ, ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವ ಆದೇಶ ಜಾರಿಗೆ ತರುವಂತೆಯೂ ಸೂಚಿಸಲಾಗಿದೆ.

ಈ ಮಧ್ಯೆ, ದೇಶದಲ್ಲಿ ಶನಿವಾರ 7,992 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 393 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 302 ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.



Read more