Source : The New Indian Express
ತುಮಕೂರು: ಚಿಕ್ಕಮಗಳೂರಿನಲ್ಲಿರುವ ದತ್ತಪೀಠ ಯಾತ್ರೆಗೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಮೆರವಣಿಗೆ ನಡೆಸುವ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡನೊಬ್ಬನ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ತುಮಕೂರು ಮುಖಂಡ ಶ್ರೀನಿವಾಸ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಮಧ್ಯೆ ಪರಸ್ಪರ ಮಾತಿನ ಚಕಮಕಿ ಉಂಟಾಗಿದ್ದು, ಮೆರವಣಿಗೆ ಹೋಗುವಂತೆ ಸೊಗಡು ಶಿವಣ್ಣ ಪಟ್ಟು ಹಿಡಿದಿದ್ದಾರೆ. ಈ ವೇಳೆ ಮೆರವಣಿಗೆ ವಿರೋಧಿಸಿದ್ದಕ್ಕೆ ವಿಎಚ್‌ಪಿ ಮುಖಂಡ ಜಿ.ಕೆ ಶ್ರೀನಿವಾಸ್ ಅನ್ನು ತಳ್ಳಿದ ಸೊಗಡು ಶಿವಣ್ಣ ಅವರ ಮೇಲೆ ಹಲ್ಲೆಗೆ ಮುಂದಾದರು. ಆಗ ಪಕ್ಕದಲ್ಲಿದ್ದವರು ಸೊಗಡು ಶಿವಣ್ಣರನ್ನು ಹಲ್ಲೆ ಮಾಡದಂತೆ ತಡೆದಿದ್ದಾರೆ.
ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿರುವ ದತ್ತಪೀಠಕ್ಕೆ ಏಳೆಂಟು ಬಸ್‌ಗಳಲ್ಲಿ ಯಾತ್ರೆ ಹೊರಡುವುದೆಂದು ಹಿಂದೂ ಸಂಘಟನೆಯ ಮುಖಂಡರು ನಿರ್ಧರಿಸಿದ್ದರು. ಅದಕ್ಕೆ ಪೂರಕವಾಗಿ ತಯಾರಿಯನ್ನೂ ನಡೆಸಿದ್ದರು.
ಆದರೆ ದಿಢೀರನೇ ಯಾತ್ರೆಯ ರೂಪುರೇಷೆಯನ್ನು ಬದಲಿಸಲು ಸೊಗಡು ಶಿವಣ್ಣ ಒತ್ತಾಯ ಮಾಡಿದ್ದು, ತುಮಕೂರು ನಗರದಲ್ಲಿ ಟೌನ್ ಹಾಲ್ ವೃತ್ತದಿಂದ ಗುಬ್ಬಿಗೇಟ್‌ವರೆಗೂ ಮೆರವಣಿಗೆ ನಡೆಸಿ ಬಳಿಕ ಯಾತ್ರೆಗೆ ಹೋಗುವಂತೆ ಸೊಗಡು ಶಿವಣ್ಣ ಪಟ್ಟು ಹಿಡಿದಿದ್ದಾರೆ.
ಆದರೆ ಮೆರವಣಿಗೆಗೆ ಅನುಮತಿ ಪಡೆಯದ ಕಾರಣ ಹಿಂದೂಪರ ಸಂಘಟನೆಗಳು ಮೆರವಣಿಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಸೊಗಡು ಶಿವಣ್ಣ ವಿಹಿಪಂ ಮುಖಂಡನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
2023 ರ ಚುನಾವಣೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಿವಣ್ಣ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು. ಹಿಂದೂ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.