Karnataka news paper

ದೇಶ ಇಂದು ಅನುಭವಿಸುತ್ತಿರುವ ನೋವು, ದುಃಖಕ್ಕೆ ಹಿಂದುತ್ವವಾದಿಗಳೇ ಕಾರಣ: ರಾಹುಲ್ ಗಾಂಧಿ


Source : The New Indian Express

ಲಖನೌ: ‘ಹಿಂದುತ್ವ’ವಾದಿಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಪ್ರಸ್ತುತ ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ‘ಹಿಂದುತ್ವವಾದಿಗಳೇ ನೇರ ಹೊಣೆ’ ಎಂದು ಶನಿವಾರ ಆರೋಪಿಸಿದ್ದಾರೆ.

ತಮ್ಮ ಹಿಂದಿನ ಲೋಕಸಭಾ ಕ್ಷೇತ್ರವಾದ ಅಮೇಥಿಯಲ್ಲಿ 6-ಕಿಮೀ ಉದ್ದದ ಪಾದಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನೋವು ಮತ್ತು ದುಃಖಕ್ಕೆ ಹಿಂದುತ್ವವಾದಿಗಳು ಕಾರಣ ಎಂದು ಹೇಳಿದರು.

ಇದನ್ನು ಓದಿ: ಅಮೇಥಿಗಿಂದು ರಾಹುಲ್ ಗಾಂಧಿ ಭೇಟಿ: ‘ಬಿಜೆಪಿ ಓಡಿಸಿ, ಹಣದುಬ್ಬರ ತೊಲಗಿಸಿ’ ಪಾದಯಾತ್ರೆಗೆ ಚಾಲನೆ

ಇಂದು ನಮ್ಮ ದೇಶದಲ್ಲಿ ಹಣದುಬ್ಬರ, ನೋವು, ದುಃಖ ಇದ್ದರೆ ಅದು ಹಿಂದುತ್ವವಾದಿಗಳ ಕೈವಾಡದಿಂದ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಪ್ರಧಾನಿ ನರೇಂದ್ರ ಮೋದಿ ಗಂಗಾಸ್ನಾನ ಮಾಡುತ್ತಾರೆಯೇ ಹೊರತು ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‍ಟಿಯ ಕಳಪೆ ಅನುಷ್ಠಾನ ಮತ್ತು ಕೋವಿಡ್ -19 ಬಿಕ್ಕಟ್ಟಿನಂತಹ ತಪ್ಪು ನಿರ್ಧಾರದಿಂದಾಗಿ ಇಂದು ಬಡವರು ದುಃಖ ಅನುಭವಿಸುವಂತಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ನಿಮಗೆ ಇಂದಿನ ಪರಿಸ್ಥಿತಿಯ ಅರಿವಿದೆಯೇ? ನಿರುದ್ಯೋಗ ಮತ್ತು ಹಣದುಬ್ಬರ ದೊಡ್ಡ ಪ್ರಶ್ನೆಗಳಾಗಿದ್ದು, ಸಿಎಂ ಆಗಲಿ ಅಥವಾ ಪ್ರಧಾನಿಯಾಗಲಿ ಈ ಬಗ್ಗೆ ಉತ್ತರಿಸುವುದಿಲ್ಲ. ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಮಧ್ಯಮ ವರ್ಗದ ಜನರು ಮತ್ತು ಬಡವರ ಮೇಲೆ ಕೆಟ್ಟ ಪರಿಣಾಮ ಬೀರಿದೆ. ನೋಟು ಅಮಾನ್ಯೀಕರಣ, ತಪ್ಪಾಗಿ ಜಾರಿಗೊಳಿಸಲಾದ ಜಿಎಸ್‍ಟಿ, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಸಹಾಯ ಮಾಡದಿರುವುದು ಭಾರತದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣಗಳಾಗಿವೆ ಎಂದರು.

ನಾನು ರಾಜಕೀಯ ಜಗತ್ತಿಗೆ ಮೊದಲ ಹೆಜ್ಜೆ ಇಡುವಂತೆ ಮಾಡಿದ್ದು ಅಮೇಥಿ ಕ್ಷೇತ್ರ. 2004ರಲ್ಲಿ ರಾಜಕೀಯಕ್ಕೆ ಬಂದೆ. ನನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ನಗರ ಅಮೇಥಿ. ಅಮೇಥಿಯ ಜನರು ನನಗೆ ರಾಜಕೀಯದ ಬಗ್ಗೆ ಸಾಕಷ್ಟು ಕಲಿಸಿದ್ದಾರೆ. ನೀವು ನನಗೆ ರಾಜಕೀಯಕ್ಕೆ ದಾರಿ ತೋರಿಸಿದ್ದೀರಿ. ಹಾಗಾಗಿ ನಾನು ಅಮೇಥಿ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ರಲ್ಲಿ ಕಾಂಗ್ರೆಸ್ ಭದ್ರಕೋಟೆ ಅಮೇಥಿಯನ್ನು ಕಳೆದುಕೊಂಡ ನಂತರ ಸುಮಾರು ಎರಡೂವರೆ ವರ್ಷಗಳ ನಂತರ ಮೊದಲ ಬಾರಿಗೆ ಅಮೇಥಿಗೆ ಆಗಮಿಸಿದ್ದಾರೆ.



Read more