Karnataka news paper

‘ಕರ್ನಾಟಕ ತನ್ನ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ, ಗಡಿ ವಿವಾದಕ್ಕೆ ಗಟ್ಟಿ ನಿಲುವು ತಳೆಯಲು ಇದು ಸೂಕ್ತ ಸಮಯ’: ಸಿಎಂ ಬೊಮ್ಮಾಯಿ


Source : The New Indian Express

ಬೆಳಗಾವಿ: ಕರ್ನಾಟಕದ ಗಡಿಭಾಗಗಳ ಹಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಅದರ ಬೇಡಿಕೆಗೆ ಬಲವಾದ ಸಂದೇಶ ಕಳುಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕರ್ನಾಟಕ ಒಂದು ಇಂಚು ನೆಲವನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದೆ. 

ಇದನ್ನೂ ಓದಿ: ಎಂಇಎಸ್ ಗಲಾಟೆ ಚರ್ಚೆಗೆ ಜೆಡಿಎಸ್ ಪಟ್ಟು, ಶಾಸಕ ಭೈರತಿ ಬಸವರಾಜು ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ; ಕಲಾಪ ಮುಂದೂಡಿಕೆ

ಈ ಬಗ್ಗೆ ನಿನ್ನೆ ಸದನದಲ್ಲಿ ಕಲಾಪದಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನ ಸೌಧ ಕರ್ನಾಟಕದ ಮತ್ತೊಂದು ಶಕ್ತಿ ಕೇಂದ್ರವಾಗಿದ್ದು ಸೂರ್ಯ-ಚಂದ್ರ ಇರುವವರೆಗೆ ಕರ್ನಾಟಕದ ಭಾಗವಾಗಿಯೇ ಇರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಮಸೂದೆ ಮಂಡನೆಗೆ ಸಚಿವ ಸಂಪುಟ ಅಸ್ತು

ಮಹಾರಾಷ್ಟ್ರ ಏಕೀಕರಣ ಸಮಿತಿ(MES) ವಿರುದ್ಧ ಗಡಿಭಾಗದಲ್ಲಿ ಎರಡೂ ರಾಜ್ಯಗಳ ಮಧ್ಯೆ ಗಲಭೆ, ಉದ್ವಿಗ್ನ ಪರಿಸ್ಥಿತಿ ನಿರ್ಮಿಸುವುದಕ್ಕೆ ಕಿಡಿಕಾರಿದ ಮುಖ್ಯಮಂತ್ರಿ ಬೊಮ್ಮಾಯಿ. ಮಹಾರಾಷ್ಟ್ರದ ಜಾಟ್ ಪ್ರದೇಶದಲ್ಲಿ 40 ಗ್ರಾಮ ಪಂಚಾಯತ್ ಗಳು ಕರ್ನಾಟಕಕ್ಕೆ ಸೇರಲು ಈಗಾಗಲೇ ತಮ್ಮ ಆಶಯ ವ್ಯಕ್ತಪಡಿಸಿ ನಿರ್ಣಯ ಹೊರಡಿಸಿವೆ. ಮಹಾರಾಷ್ಟ್ರ ಸರ್ಕಾರ ಅವರಿಗೆ ನೀರು ಸಹ ಕೊಡಲು ವಿಫಲವಾಗಿದೆ ಎಂದರು. 

ಇದನ್ನೂ ಓದಿ: ನಾಳೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ: ಸಭಾಪತಿ ಬಸವರಾಜ ಹೊರಟ್ಟಿ ತೀರ್ಮಾನ

ಕರ್ನಾಟಕಕ್ಕೆ ಬರಲು ಇಚ್ಛಿಸುವ ಗಡಿಭಾಗದ ಜನರನ್ನು ಸ್ವಾಗತಿಸಲು ಸರ್ಕಾರ ಸದಾ ಸಿದ್ದವಿದೆ. ಗಡಿ ವಿವಾದಕ್ಕೆ ಸುದೀರ್ಘವಾದ ದೃಢ ನಿಲುವು ತಳೆಯಲು ಇದು ಸರಿಯಾದ ಸೂಕ್ತ ಸಮಯ ಎಂದರು.

ಬೆಳಗಾವಿಯಲ್ಲಿ ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದೆ. ಈ ಸಂದರ್ಭದಲ್ಲಿ ನಿನ್ನೆ ಸದನದಲ್ಲಿ ಉತ್ತರಿಸಿದ ಮುಖ್ಯಮಂತ್ರಿ, ಕರ್ನಾಟಕದ ವಿಷಯ ಬಂದಾಗ ಮಹಾರಾಷ್ಟ್ರ ಜೊತೆಗಿನ ಗಡಿ ವಿವಾದದಲ್ಲಿ ಮಹಾಜನ್ ಸಮಿತಿಯ ವರದಿಯೇ ಅಂತಿಮ ಎಂದರು. 

ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮತ್ತು ಛತ್ರಪತಿ ಶಿವಾಜಿ ಪ್ರತಿಮೆ ವಿರೂಪಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವು ಶಾಸಕರು ಆಗ್ರಹಿಸುತ್ತಿದ್ದಾರೆ. ದೇಶಭಕ್ತರ ಪ್ರತಿಮೆಗಳನ್ನು ಧ್ವಂಸಗೊಳಿಸುವುದು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು ಖಂಡನೀಯ ಎಂಬ ನಿರ್ಣಯವನ್ನು ನಿನ್ನೆ ವಿಧಾನಸಭೆಯಲ್ಲಿ ಹೊರಡಿಸಲಾಯಿತು.

ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದವನ್ನು ಪದೇ ಪದೇ ಕೆರಳಿಸುವ ಸಂಘಟನೆಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ಗಡಿ ಸಮಸ್ಯೆಯನ್ನು ಜೀವಂತವಾಗಿಡಲು ಕೆಲವು ವಿಭಾಗಗಳು (ಮಹಾರಾಷ್ಟ್ರ ಪರ ಸಂಘಟನೆಗಳು) ಎರಡು ರಾಜ್ಯಗಳ ನಡುವಿನ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು. ಗಡಿಯಲ್ಲಿನ ಯಾವುದೇ ಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದದ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಘಟನೆಗಳು ಭಾವಿಸಿದರೆ, ಅದು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಉದ್ದೇಶವು ಅಂತಿಮವಾಗಿ ಶಾಶ್ವತ ಸೋಲನ್ನು ಎದುರಿಸುತ್ತದೆ ಎಂದರು.

ಪ್ರತಿಮೆಗಳನ್ನು ಅಪವಿತ್ರಗೊಳಿಸಿರುವುದನ್ನು ಖಂಡಿಸಿದ ಬೊಮ್ಮಾಯಿ, ಸರ್ಕಾರವು ಇದಕ್ಕೆ ಕಾರಣರಾದವರ ವಿರುದ್ಧ ದೇಶದ್ರೋಹದ ಕೇಸನ್ನು ಹಾಕಲಿದೆ. ಗೂಂಡಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸುತ್ತದೆ ಎಂದು ಹೇಳಿದರು. ದುಷ್ಕರ್ಮಿಗಳು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಇದು ದೇಶ ವಿರೋಧಿ ಅಂಶಗಳ ಪೂರ್ವ ಯೋಜಿತ ಪಿತೂರಿ ಎಂದು ನನಗೆ ತಿಳಿದಿದೆ ಎಂದು ಹೇಳಿದರು. ಗಡಿಯಲ್ಲಿನ ಪರಿಸ್ಥಿತಿಯನ್ನು ಸುಧಾರಿಸಲು ಎರಡೂ ರಾಜ್ಯಗಳ ಉನ್ನತ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಇತ್ತೀಚಿನ ಹಿಂಸಾಚಾರ ಮತ್ತು ಅಹಿತಕರ ಘಟನೆಗಳ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡುವುದಾಗಿ ಸಿಎಂ ಹೇಳಿದರು.

ಇದಕ್ಕೂ ಮುನ್ನ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರತಿಮೆ ಧ್ವಂಸವನ್ನು ಖಂಡಿಸಿ, ಇದು ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದರು. ಪ್ರತಿಮೆಗಳ ಅವಮಾನದ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ಇಂತಹ ಕೃತ್ಯ ಎಸಗುವವರ ವಿರುದ್ಧ ಗುಂಡು ಹಾರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಟೀಕಿಸಿದರು. 

ಸುವರ್ಣ ಸೌಧದಲ್ಲಿ ಹೊಸ ಪ್ರತಿಮೆಗಳು
ಸುವರ್ಣಸೌಧದ ಆವರಣದಲ್ಲಿರುವ ಪ್ರಮುಖ ಸ್ಥಳದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ನಿನ್ನೆ ಘೋಷಿಸಿದರು. ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನಮ್ಮ ರಾಜ್ಯ ಮತ್ತು ಪ್ರದೇಶದ ಹೆಮ್ಮೆ. ಸೂರ್ಯ ಮತ್ತು ಚಂದ್ರರು ಇರುವವರೆಗೆ ಪ್ರತಿಮೆಗಳು ಸುವರ್ಣ ವಿಧಾನಸೌಧದಲ್ಲಿ ಇರುತ್ತವೆ ಎಂದರು. 



Read more