Karnataka news paper

ರಾಜ್ಯದ ಮರಾಠರು ಅಪ್ಪಟ ಕನ್ನಡಿಗರು: ಠಾಕ್ರೆಗೆ ಪತ್ರ ಬರೆದ ಮರಾಠ ಮಹಾ ಒಕ್ಕೂಟ


ಬೆಂಗಳೂರು: ‘ಕರ್ನಾಟಕದಲ್ಲಿರುವ ಮರಾಠರು ಅಪ್ಪಟ ಕನ್ನಡಿಗರಾಗಿ, ಶಾಂತಿ ಸೌಹಾರ್ದದಿಂದ ಬದುಕುತ್ತಿದ್ದೇವೆ. ಕೆಲ ಪುಂಡರ ಕೃತ್ಯದಿಂದ ಕರ್ನಾಟಕ, ಮಹಾರಾಷ್ಟ್ರದಲ್ಲಿ ಶಾಂತಿ ಕದಡುವ ಕೆಲಸಗಳು ನಡೆಯುತ್ತಿವೆ. ಇವುಗಳನ್ನು ನಿಲ್ಲಿಸಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟವು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದೆ.

‘ಕರ್ನಾಟಕದಲ್ಲಿ ನೆಲೆಸಿರುವ ಮರಾಠರು ಅಪ್ಪಟ ಕನ್ನಡಿಗರು. ವಲಸೆ ಬಂದವರಲ್ಲ. ಕೆಲ ಕಿಡಿಗೇಡಿಗಳು ಭಾಷೆಯನ್ನು ಮುಂದಿಟ್ಟುಕೊಂಡು ಎರಡೂ ರಾಜ್ಯಗಳ ನಡುವೆ ದ್ವೇಷದ ಬೀಜ ಬಿತ್ತಿ, ಹಿಂದೂಗಳ ಒಗ್ಗಟ್ಟಿನಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ವಿ.ಎಸ್.ಶಾಮಸುಂದರ್ ಗಾಯಕ್‌ವಾಡ್ ಖಂಡನೆ ವ್ಯಕ್ತಪಡಿಸಿದ್ದಾರೆ.

‘ಮಖ್ಯಮಂತ್ರಿಯಾಗಿ ತಾವು ಇಂತಹ ಕೃತ್ಯ ತಡೆಯದೇ, ‍ಪ್ರಚೋದನೆ ನೀಡುವುದು ಸರಿಯಲ್ಲ.  ಮಹಾರಾಷ್ಟ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿ, ಅಲ್ಲಿರುವ ಕನ್ನಡಿಗರಿಗೆ ರಕ್ಷಣೆ ಒದಗಿಸುವುದು ನಿಮ್ಮ ಜವಾಬ್ದಾರಿ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಈಗಾಗಲೇ ತೀರ್ಮಾನವಾಗಿದೆ. ಮತ್ತೆ ಬೆಳಗಾವಿ ವಿಷಯ ಮುಂದಿಟ್ಟುಕೊಂಡು ಕ್ಯಾತೆ ತೆಗೆಯಬೇಡಿ’ ಎಂದೂ ಕೋರಿದ್ದಾರೆ.

‘ಕೆಲ ಪುಂಡರು ವೀರರಾದ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ‍ಪ್ರತಿಮೆಗಳನ್ನು ಭಗ್ನಗೊಳಿಸಿರುವುದು, ಅವುಗಳಿಗೆ ಮಸಿ ಬಳಿಯುವುದು ಹಾಗೂ ಧ್ವಜಗಳನ್ನು ಸುಟ್ಟು ಹಾಕುವ ಹೇಯಕೃತ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಒಕ್ಕೂಟವು ಆಗ್ರಹಿಸಿದೆ.



Read more from source