ಹೈಲೈಟ್ಸ್:
- ಸ್ಪೆಷಲ್ ರಿಸರ್ವ್ ಎಸ್‌ಐ ಹುದ್ದೆಗಳಿಗೆ ಅರ್ಜಿ ಆಹ್ವಾನ
- ತೃತೀಯ ಲಿಂಗಿಗಳಿಂದಲೂ ಅರ್ಜಿ ಸಲ್ಲಿಸಲು ಅವಕಾಶ
- ಕೆಎಸ್‌ಆರ್‌ಪಿ ಮತ್ತು ಐಆರ್‌ಬಿನ ವಿಶೇಷ ಮೀಸಲು ಪಡೆಗೆ ಅರ್ಜಿ ಆಹ್ವಾನ
ಕೆಎಸ್‌ಆರ್‌ಪಿ ಮತ್ತು ಐಆರ್‌ಬಿನ ವಿಶೇಷ ಮೀಸಲು ಸಬ್ – ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಕರೆದಿದ್ದು, ಪುರುಷ, ಮಹಿಳೆ ಮತ್ತು ಮಂಗಳಮುಖಿಯರು ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖೆಯ ಪ್ರತಿ ವಿಭಾಗದಲ್ಲಿಯೂ ಮಂಗಳಮುಖಿಯರಿಗೆ ಶೇ.1 ರಷ್ಟು ಸಮತಲ ಮೀಸಲಾತಿ (ಹಾರಿಜಾಂಟಲ್ ರಿಸರ್ವೇಷನ್) ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ತೃತೀಯ ಲಿಂಗಿಗಳೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬಹುದಾಗಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೊರಡಿಸಿರುವ ಅಧಿಸೂಚನೆ ಪ್ರಕಾರ 70 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಇದರಲ್ಲಿ ಐದು ಹುದ್ದೆಗಳಿಗೆ ಮಂಗಳಮುಖಿಯರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 12ರಿಂದಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಜನವರಿ 18 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ಯಾವುದೇ ಸಹಾಯ ಅಥವಾ ಸ್ಪಷ್ಟೀಕರಣಕ್ಕಾಗಿ ದೂರವಾಣಿ ಸಂಖ್ಯೆ 080-22943346 ಗೆ ಕರೆ ಮಾಡಬಹುದಾಗಿದೆ.
ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ 206 ಹುದ್ದೆಗಳಿಗೂ ಅರ್ಜಿ ಕರೆಯಲಾಗಿದೆ. ಈ ಪೈಕಿ ಮೂರು ಹುದ್ದೆಗಳಿಗೆ ಮಂಗಳ ಮುಖಿಯರು ಅರ್ಜಿ ಸಲ್ಲಿಸಬಹುದಾಗಿದೆ. ಆಕಾಂಕ್ಷಿಗಳು ಜನವರಿ 15ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ.
ತೃತೀಯಲಿಂಗಿ ಪ್ರಮಾಣ ಪತ್ರ ಕಡ್ಡಾಯ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 2020ರಲ್ಲಿ ಹೊರಡಿಸಿರುವ ಅಧಿಸೂಚನೆಯಡಿ ಮಂಗಳಮುಖಿಯರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ತೃತೀಯ ಲಿಂಗ ಎಂಬ ಪ್ರಮಾಣ ಪತ್ರ ಪಡೆದಿರಬೇಕು. ಈ ಪ್ರಮಾಣಪತ್ರ ಹೊಂದಿರದಿದ್ದಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸಾಮಾನ್ಯ ನೇಮಕಾತಿಗೆ ತಿದ್ದುಪಡಿ
ರಾಜ್ಯ ವಿಶೇಷ ಮೀಸಲು ಪೊಲೀಸ್ ಪೇದೆ ಪಡೆ ಹಾಗೂ ಬ್ಯಾಂಡ್ಸ್‌ಮೆನ್ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸದಿರುವುದನ್ನು ಪ್ರಶ್ನಿಸಿ ‘ಸಂಗಮ’ ಸ್ವಯಂ ಸೇವಾ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಕ್ಕೆ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರಕಾರ, ಸರಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಸಮತಲ ಮೀಸಲು ಕಲ್ಪಿಸುವ ಸಲುವಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ-1977ಕ್ಕೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಸಮತಲ ಮೀಸಲಾತಿ ಕಲ್ಪಿಸಿದೆ.
‘ಮಂಗಳಮುಖಿಯರು ಸಮಾಜದಲ್ಲಿ ಘನತೆ, ಗೌರವ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂಬುದು ನಮ್ಮ ಆಶಯ. ನನ್ನ ಅವಧಿಯಲ್ಲಿ ಜಾರಿ ಬಂದಿದೆ ಎನ್ನುವುದಕ್ಕಿಂತ, ಸ್ವತಃ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಅವರಿಗೂ ಶ್ರೇಯಸ್ಸು ಸಲ್ಲಬೇಕು’ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.