ಹೈಲೈಟ್ಸ್:
- ರಾಹುಲ್ ಗಾಂಧಿ ಟ್ವೀಟ್‌ಗೆ ತಿರುಗೇಟು ನೀಡಿದ್ದ ಬಿಜೆಪಿ
- ರಾಜೀವ್ ಗಾಂಧಿ ಅವರೇ ಗುಂಪು ಹಲ್ಲೆ ಜನಕ ಎಂದಿದ್ದ ಬಿಜೆಪಿ
- ಟ್ವಿಟ್ಟರ್‌ನಲ್ಲೂ ನೆಟ್ಟಿಗರಿಂದ ಪರ – ವಿರೋಧ ಪ್ರತಿಕ್ರಿಯೆ
2014ಕ್ಕೆ ಮುನ್ನ ‘ಗುಂಪು ಹಲ್ಲೆ’ ಎಂಬ ಪದವನ್ನು ಜನತೆ ಅಷ್ಟಾಗಿ ಕೇಳಿರಲಿಲ್ಲ ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕೊನೆಯಲ್ಲಿ ಮೋದಿಯವರಿಗೆ ಧನ್ಯವಾದ ಎಂದಿದ್ದರು. ರಾಹುಲ್ ಅವರ ಈ ಟ್ವೀಟ್‌ಗೆ ಕಿಡಿ ಕಾರಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ರಾಜೀವ್ ಗಾಂಧಿ ಅವರೇ ಗುಂಪು ಹಲ್ಲೆಯ ಜನಕ ಎಂದು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ನೆಟ್ಟಿಗರೂ ಸಹ ಥರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಟ್ರೂಲಿ ಎಂಎಂ ಎಂಬ ಟ್ವಿಟ್ಟರ್ ಬಳಕೆದಾರನೊಬ್ಬ, ರಾಹುಲ್ ಗಾಂಧಿ ಟ್ವೀಟ್‌ಗೆ ತಿರುಗೇಟು ನೀಡಿದ್ದು, 1984ರ ಇತಿಹಾಸ ನೆನಪಿಸಿದ್ದಾರೆ. ಅಂದು ನಡೆದ ಸಿಖ್ಖರ ಹತ್ಯಾಕಾಂಡವನ್ನು ನೆನಪಿಸಿ, ರಾಹುಲ್ ಗಾಂಧಿ ಅವರೇ ನಿಮ್ಮ ತಂದೆ ರಾಜೀವ್ ಗಾಂಧಿ ಅವರೇ ಗುಂಪು ಹಲ್ಲೆಯ ‘ತಂದೆ’ ಎಂದು ಲೇವಡಿ ಮಾಡಿದ್ದಾರೆ.
ಫ್ಯಾಕ್ಟ್ಸ್ ಎಂಬ ಟ್ವಿಟ್ಟರ್ ಬಳಕೆದಾರರು 2009ರಲ್ಲಿ ಬಾಲಿವುಡ್ ಸಿನೆಮಾ ನಿರ್ದೇಶಕ ಮಹೇಶ್ ಭಟ್ ಮಾಡಿದ್ದ ಟ್ವೀಟ್ ಒಂದನ್ನು ನೆನಪಿಸಿದ್ದಾರೆ. 2014ಕ್ಕೆ ಮುನ್ನ ರಾಹುಲ್ ಗಾಂಧಿ ಅವರು ‘ಲಿಂಚಿಂಗ್’ ಪದವನ್ನು ಕೇಳಿಲ್ಲ ಎಂದಾದರೆ ಈ ಟ್ವೀಟ್ ಏನು ಎಂದು ಪ್ರಶ್ನಿಸಿದ್ದಾರೆ. 2009 ಡಿಸೆಂಬರ್ 15ರಂದು ಮಹೇಶ್ ಭಟ್ ಮಾಡಿದ್ದರು ಎನ್ನಲಾದ ಟ್ವೀಟ್ ಅವರು ಅವರು ಗುಂಪು ಹಲ್ಲೆಯನ್ನು ರಾಷ್ಟ್ರೀಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಜೈಸ್ವಾಲ್ ಎಂಬ ಟ್ವಿಟ್ಟರ್ ಬಳಕೆದಾರರು ಅಂಕಿಅಂಶವನ್ನೇ ಕೊಟ್ಟಿದ್ದಾರೆ. ಈವರೆಗೂ ದಾಖಲಾದ ಗುಂಪು ಹಲ್ಲೆ ಪ್ರಕರಣಗಳ ಪೈಕಿ ಶೇ. 96ರಷ್ಟು ಪ್ರಕರಣಗಳು 2014ರ ನಂತರವೇ ನಡೆದಿವೆ ಎಂದಿದ್ದಾರೆ.
ಇನ್ನು ಮೀನಾಕ್ಷಿ ಶ್ರೀಯನ್ ಎಂಬ ಪರಿಶೀಲಿಸಿದ ಟ್ವಿಟ್ಟರ್ ಖಾತೆಯ ಬಳಕೆದಾರರು, ಇತಿಹಾಸದಲ್ಲಿ ಈ ಹಿಂದೆ ನಡೆದ ಗುಂಪು ಹಲ್ಲೆಗಳ ಪಟ್ಟಿಯನ್ನೇ ನೀಡಿದ್ದಾರೆ. ಲಿಂಚಿಂಗ್ ಅನ್ನೋದು 2014ರ ಬಳಿಕವೇ ಶುರುವಾಯ್ತು ಅನ್ನೋದಾದ್ರೆ 1966ರಲ್ಲಿ ದಿಲ್ಲಿಯಲ್ಲಿ ಸಾಧುಗಳ ಮೇಲೆ ಹಲ್ಲೆ ಮಾಡಿದ್ದು ಯಾರು? 1984ರಲ್ಲಿ ಸಿಖ್ಖರ ನರಮೇಧ ಮಾಡಿದ್ದು ಯಾರು? 1990ರಲ್ಲಿ ಕಾಶ್ಮೀರಿ ಹಿಂದುಗಳ ನರಸಂಹಾರ ನಡೆಸಿದ್ದು ಯಾರು? 2002ರಲ್ಲಿ ಗೋಧ್ರಾದಲ್ಲಿ ಕರಸೇವಕರನ್ನು ಜೀವಂತ ಸುಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ನೆಟ್ಟಿಗರ ಪೈಕಿ ಕೆಲವರು ರಾಹುಲ್ ಗಾಂಧಿ ಅವರ ಪರ ಬ್ಯಾಟ್ ಬೀಸಿದರೆ, ಮತ್ತಷ್ಟು ಮಂದಿ ರಾಹುಲ್ ಗಾಂಧಿ ಅವರ ವಿರುದ್ಧವೇ ಹರಿಹಾಯ್ದಿದ್ದಾರೆ. ಅಂಕಿ ಅಂಶ, ಇತಿಹಾಸದ ಕೆಲವು ಪ್ರಮುಖ ದಿನಾಂಕಗಳ ಸಮೇತ ತಮ್ಮ ವಾದ ಮುಂದಿಡುತ್ತಿದ್ದಾರೆ.